ನಿಯಂತ್ರಣಕ್ಕೆ ಸಿಗದ ಹಣದುಬ್ಬರ: ಇಂದು ಆರ್​ಬಿಐ ಹಣಕಾಸು ನೀತಿ ಸಮಿತಿ ವಿಶೇಷ ಸಭೆ

| Updated By: Ganapathi Sharma

Updated on: Nov 03, 2022 | 5:27 PM

ಸೆಪ್ಟೆಂಬರ್ 30ರಂದು ಪ್ರಕಟಿಸಿದ ಹಣಕಾಸು ನೀತಿಯಲ್ಲಿ ಆರ್​ಬಿಐ ರೆಪೊ ದರವನ್ನು ಶೇಕಡಾ 0.50 ಹೆಚ್ಚಿಸಿ, 5.9ಕ್ಕೆ ನಿಗದಿಪಡಿಸಿತ್ತು.

ನಿಯಂತ್ರಣಕ್ಕೆ ಸಿಗದ ಹಣದುಬ್ಬರ: ಇಂದು ಆರ್​ಬಿಐ ಹಣಕಾಸು ನೀತಿ ಸಮಿತಿ ವಿಶೇಷ ಸಭೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್
Follow us on

ನವದೆಹಲಿ: ಚಿಲ್ಲರೆ ಹಣದುಬ್ಬರ (Retail Inflation) ನಿಯಂತ್ರಿಸಲು ವಿಫಲವಾಗಿರುವುದಕ್ಕೆ ಸಂಬಂಧಿಸಿ ವರದಿ ಸಿದ್ಧಪಡಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇಂದು ಹಣಕಾಸು ನೀತಿ ಸಮಿತಿಯ (MPC) ವಿಶೇಷ ಸಭೆ ನಡೆಸಲಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಚಿಲ್ಲರೆ ಹಣದುಬ್ಬರ ಹೆಚ್ಚಳದ ಮಧ್ಯೆಯೇ ಆರ್​ಬಿಐ ಎಂಪಿಸಿ ವಿಶೇಷ ಸಭೆ ನಡೆಸಲಿದೆ. ಸತತ ಮೂರು ತ್ರೈಮಾಸಿಕಗಳಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 6ಕ್ಕಿಂತ ಕೆಳಗಿನ ಮಟ್ಟದಲ್ಲಿ ಕಾಯ್ದುಕೊಳ್ಳುವಲ್ಲಿ ಆರ್​ಬಿಐ ವಿಫಲವಾಗಿದೆ. ಹೀಗಾಗಿ ತನ್ನ ವೈಫಲ್ಯಕ್ಕೆ ಸಂಬಂಧಿಸಿದ ವರದಿ ಸಿದ್ಧಪಡಿಸಬೇಕಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 45 ಝಡ್​ಎನ್​ ಅಡಿಯಲ್ಲಿ ಹಣಕಾಸು ನೀತಿ ಸಮಿತಿಯ ಹೆಚ್ಚುವರಿ ಸಭೆ ನಡೆಯಲಿದೆ. ಸತತ 9 ತಿಂಗಳುಗಳಿಂದ ಏರಿಕೆಯ ಹಾದಿಯಲ್ಲಿರುವ ಚಿಲ್ಲರೆ ಹಣದುಬ್ಬರ ಸೆಪ್ಟೆಂಬರ್ ತಿಂಗಳಲ್ಲಿ ಶೇಕಡಾ 7.4ಕ್ಕೆ ಹೆಚ್ಚಿತ್ತು. ಹೆಚ್ಚುತ್ತಿರುವ ಹಣದುಬ್ಬರ ತಡೆಗೆ ಆರ್​ಬಿಐ ಅನೇಕ ಕ್ರಮಗಳನ್ನೂ ಕೈಗೊಂಡಿತ್ತು. ಸತತವಾಗಿ ನಾಲ್ಕು ಬಾರಿ ರೆಪೊ ದರ ಹೆಚ್ಚಿಸಿದ್ದೂ ಅವುಗಳಲ್ಲೊಂದು.

ಸೆಪ್ಟೆಂಬರ್ 30ರಂದು ಪ್ರಕಟಿಸಿದ ಹಣಕಾಸು ನೀತಿಯಲ್ಲಿ ಆರ್​ಬಿಐ ರೆಪೊ ದರವನ್ನು ಶೇಕಡಾ 0.50 ಹೆಚ್ಚಿಸಿ, 5.9ಕ್ಕೆ ನಿಗದಿಪಡಿಸಿತ್ತು. ಇದರೊಂದಿಗೆ ಮೇ ತಿಂಗಳ ನಂತರ ಈವರೆಗೆ ಆರ್​ಬಿಐ ಒಟ್ಟಾರೆಯಾಗಿ 190 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿದಂತಾಗಿತ್ತು.

ಇಷ್ಟೆಲ್ಲ ಕ್ರಮಗಳ ಹೊರತಾಗಿಯೂ ಹಣದುಬ್ಬರ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಆರ್​ಬಿಐ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ಜತೆಗೆ, ಹಣದುಬ್ಬರ ನಿಯಂತ್ರಿಸಲು ಮುಂದೆ ಏನು ಕ್ರಮ ಕೈಗೊಳ್ಳಲಿದೆ ಎಂಬ ವಿವರವನ್ನೂ ನೀಡಬೇಕಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ ‘45 ಝಡ್​ಎನ್’ ಪ್ರಕಾರ ಸತತ ಮೂರು ತ್ರೈಮಾಸಿಕಗಳವರೆಗೆ ಹಣದುಬ್ಬರವನ್ನು ಮಿತಿಯೊಳಗೆ ಇರಿಸಲು ಸಾಧ್ಯವಾಗದಿದ್ದರೆ, ಅದಕ್ಕೆ ಕಾರಣ ಏನು ಎಂಬುದನ್ನು ಆರ್‌ಬಿಐ ಕೇಂದ್ರಕ್ಕೆ ತಿಳಿಸಬೇಕಿದೆ.

Published On - 8:21 am, Thu, 3 November 22