LIC IPO: ಸರಿಯಾದ ಸಮಯದಲ್ಲಿ ಎಲ್​ಐಸಿ ಐಪಿಒ ಬರಬೇಕು: ಕೇಂದ್ರ ಸರ್ಕಾರಕ್ಕೆ ಆರ್​ಬಿಐ ಸಲಹೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 18, 2022 | 1:19 PM

ಎಲ್​ಐಸಿಯಲ್ಲಿರುವ ತನ್ನ ಒಟ್ಟು ಬಂಡವಾಳದ ಶೇ 5ರಷ್ಟನ್ನು ಹಿಂಪಡೆಯುವ ಮೂಲಕ ಸರ್ಕಾರವು ₹ 60,000 ಕೋಟಿ ಸಂಗ್ರಹಿಸಲು ಉದ್ದೇಶಿಸಿತ್ತು.

LIC IPO: ಸರಿಯಾದ ಸಮಯದಲ್ಲಿ ಎಲ್​ಐಸಿ ಐಪಿಒ ಬರಬೇಕು: ಕೇಂದ್ರ ಸರ್ಕಾರಕ್ಕೆ ಆರ್​ಬಿಐ ಸಲಹೆ
ಎಲ್​ಐಸಿ ಮತ್ತು ಆರ್​ಬಿಐ
Follow us on

ಮುಂಬೈ: ಭಾರತೀಯ ಜೀವ ವಿಮಾ ನಿಗಮ (Life Insurance Corporation – LIC) ಐಪಿಒ ಷೇರುಪೇಟೆಗೆ ಬಲ ತುಂಬುವ ಎಲ್ಲ ಸಾಧ್ಯತೆಗಳಿವೆ. ಚಿಲ್ಲರೆ ಹೂಡಿಕೆದಾರರ ಪ್ರತಿಕ್ರಿಯೆ ಉತ್ತಮ ರೀತಿಯಲ್ಲಿ ಇರುವಂತೆ ಯೋಜಿಸಿ, ಸರಿಯಾದ ಸಮಯದಲ್ಲಿ ಐಪಿಒ ಘೋಷಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದೆ. ಎಲ್​ಐಸಿ ಐಪಿಒ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ರಿಸರ್ವ್​ ಬ್ಯಾಂಕ್​ನ ಆರ್ಥಿಕ ವಿದ್ಯಮಾನಗಳ ವಿಭಾಗದ ತಜ್ಞರು, ಎಲ್​ಐಸಿ ಐಪಿಒ ಭಾರತದ ಅತಿದೊಡ್ಡ ಐಪಿಒ ಎನಿಸಿದೆ. ಈ ಪೈಕಿ ಶೇ 35ರಷ್ಟನ್ನು ಚಿಲ್ಲರೆ ಹೂಡಿಕೆದಾರರಿಗೆ ಮೀಸಲಿಡಲಾಗಿದೆ. ಐಪಿಒ ಯಶಸ್ಸಿಗೆ ಅವರ ಪ್ರತಿಕ್ರಿಯೆ ಬಹಳ ಮುಖ್ಯ ಎಂದು ಹೇಳಿದ್ದಾರೆ.

ಇದೇ (ಮಾರ್ಚ್) ತಿಂಗಳಲ್ಲಿ ಎಲ್​ಐಸಿ ಐಪಿಒ ಮಾರುಕಟ್ಟೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಎಲ್​ಐಸಿಯಲ್ಲಿರುವ ತನ್ನ ಒಟ್ಟು ಬಂಡವಾಳದ ಶೇ 5ರಷ್ಟನ್ನು ಹಿಂಪಡೆಯುವ ಮೂಲಕ ಸರ್ಕಾರವು ₹ 60,000 ಕೋಟಿ ಸಂಗ್ರಹಿಸಲು ಉದ್ದೇಶಿಸಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧ, ಅಮೆರಿಕದ ಫೆಡರಲ್ ರಿಸರ್ವ್​ ನೀತಿ, ಕೊವಿಡ್​ನ ಮತ್ತೊಂದು ಅಲೆಯ ಆತಂಕದ ಕಾರಣದಿಂದಾಗಿ ಷೇರುಪೇಟೆಯಲ್ಲಿ ಹೊಯ್ದಾಟ ಹೆಚ್ಚಾಗಿರುವ ಕಾರಣ ಐಪಿಒ ಮುಂದೂಡಲು ಸರ್ಕಾರ ಒಲವು ತೋರಿದೆ.

ಎಲ್​ಐಸಿ ಐಪಿಒ ಮೂಲಕ ಸಾಕಷ್ಟು ಹೊಸಬರು ಷೇರುಪೇಟೆಗೆ ಬರುವ ಸಾಧ್ಯತೆಯಿದೆ. ಹೊಸ ಹಣವೂ ಹರಿದುಬಂದು ಷೇರುಪೇಟೆಯ ವ್ಯಾಪ್ತಿ ಹಿರಿದಾಗಬಹುದು ಎಂಬ ನಿರೀಕ್ಷೆಗಳೂ ವ್ಯಕ್ತವಾಗಿವೆ. ಎಲ್​ಐಸಿ ತನ್ನ ಪಾಲಿಸಿದಾರರಿಗೂ ಐಪಿಒದಲ್ಲಿ ಶೇ 10ರಷ್ಟು ಮೀಸಲು ಘೋಷಿಸಿರುವುದರಿಂದ ಈವರೆಗೆ ಸಾಂಪ್ರದಾಯಿಕ ಹಣಕಾಸು ಉತ್ಪನ್ನಗಳಲ್ಲಿ ಹಣ ತೊಡಗಿಸುತ್ತಿದ್ದ, ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವ ದೀರ್ಘಾವಧಿಗೆ ಕಾಯಬಲ್ಲ ಹೂಡಿಕೆದಾರರು ಷೇರುಪೇಟೆಯತ್ತ ಬರುತ್ತಾರೆ ಎಂಬ ನಿರೀಕ್ಷೆಗಳಿವೆ. ಇದರಿಂದ ಷೇರುಪೇಟೆಗೂ ಸ್ಥಿರತೆ ಸಿಗಬಹುದು ಎಂದು ವಿಶ್ಲೇಷಿಸಲಾಗಿತ್ತು.

ಬಂಡಾವಳ ಹಿಂಪಡೆಯುವುದು ಸರ್ಕಾರದ ಆರ್ಥಿಕ ಗುರಿಗಳನ್ನು ಈಡೇರಲು ಅತ್ಯಗತ್ಯ ಎನ್ನುವುದು ನಿಜ. ಇದೇ ಹೊತ್ತಿಗೆ ದೇಶದ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಭರವಸೆಯನ್ನೂ ವೃದ್ಧಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಎಲ್​ಐಸಿ ಐಪಿಒಗೆ ಸರ್ಕಾರ ಹೆಚ್ಚು ಒತ್ತುನೀಡುತ್ತಿದೆ. ವಿದೇಶಿ ಹೂಡಿಕೆದಾರರು ಪಾಲ್ಗೊಳ್ಳಲು ಅವಕಾಶ ನೀಡುವ ಉದ್ದೇಶದಿಂದ ಕಾನೂನುಗಳಿಗೂ ಸರ್ಕಾರ ತಿದ್ದುಪಡಿ ತಂದಿತ್ತು

ಮುಂದಿನ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಲ್​ಐಸಿ ಐಪಿಒ ಘೋಷಣೆಯಾಗಬಹುದು ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಸೆಬಿಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ಸರ್ಕಾರಕ್ಕೆ ಮೇ 12ರವರೆಗೂ ಎಲ್​ಐಸಿ ಐಪಿಒ ತರಲು ಅವಕಾಶವಿದೆ. ಇದಕ್ಕಿಂತಲೂ ತಡವಾದರೆ ಎಲ್​ಐಸಿ ಮತ್ತೊಮ್ಮೆ ಐಪಿಒ ಪ್ರಸ್ತಾವವನ್ನು ಸೆಬಿಗೆ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒ ಬಿಡುಗಡೆ ದಿನಾಂಕ ಮರುನಿಗದಿ ಸಾಧ್ಯತೆ: ನಿರ್ಮಲಾ ಸೀತಾರಾಮನ್ ಸುಳಿವು

ಇದನ್ನೂ ಓದಿ: LIC IPO: ಎಲ್​ಐಸಿ ಖಾಸಗೀಕರಣದಿಂದ ಭಾರತದ ಆರ್ಥಿಕತೆಗೆ, ಪಾಲಿಸಿದಾರರಿಗೆ ಹೆಚ್ಚು ನಷ್ಟ: ಸಿಪಿಎಂ ನಾಯಕ ಥಾಮಸ್ ಐಸಾಕ್