Paytm IPO: ಫೇಸ್​ಬುಕ್​ನಲ್ಲಿ ಸದ್ದು ಮಾಡ್ತಿದೆ ಪೇಟಿಎಂ ಷೇರಿಗೆ ದುಡ್ಡು ಹಾಕಿದವರ ಹಳಹಳಿಕೆ

ನೋವಲ್ಲಿಯೂ ತಮಾಷೆ ಮಾಡಿಕೊಳ್ಳುವ ಪ್ರವೃತ್ತಿ ಕೆಲವರಿಗೆ ಇರುತ್ತದೆ. ಇಂಥವರು ಸಾಮಾಜಿಕ ಜಾಲತಾಣಗಳಲ್ಲಿ ಪೇಟಿಎಂ ಐಪಿಒ ಬಗ್ಗೆ ಕಾಲೆಳೆಯುವ ಚರ್ಚೆ ಆರಂಭಿಸಿದ್ದಾರೆ

Paytm IPO: ಫೇಸ್​ಬುಕ್​ನಲ್ಲಿ ಸದ್ದು ಮಾಡ್ತಿದೆ ಪೇಟಿಎಂ ಷೇರಿಗೆ ದುಡ್ಡು ಹಾಕಿದವರ ಹಳಹಳಿಕೆ
ಸಾಂದರ್ಭಿಕ ಚಿತ್ರ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 17, 2022 | 3:36 PM

ಷೇರುಪೇಟೆಯಲ್ಲಿ ಭಾರೀ ಸದ್ದಿನೊಂದಿಗೆ ಲಿಸ್ಟ್ ಆಗಿದ್ದ ಪೇಟಿಎಂ ಕಂಪನಿಯ ಷೇರುಮೌಲ್ಯ ಕೇವಲ ಮೂರು ದಿನಗಳಲ್ಲಿ ದೊಡ್ಡಪ್ರಮಾಣದಲ್ಲಿ ಕುಸಿದು ಹೋಗಿದೆ. ಹೊಸ ಗ್ರಾಹಕರಿಗೆ ಪಡೆದುಕೊಳ್ಳದಂತೆ ಪೇಟಿಎಂಗೆ ರಿಸರ್ವ್​ ಬ್ಯಾಂಕ್ ಅಫ್ ಇಂಡಿಯಾ ನಿರ್ಬಂಧ ವಿಧಿಸಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿಜಯ್​ ಶೇಖರ್ ಶರ್ಮಾ ಅವರ ವಿರುದ್ಧ ದೆಹಲಿ ಪೊಲೀಸರು ನಿರ್ಲಕ್ಷ್ಯ ಚಾಲನೆ ಆರೋಪದ ಮೇಲೆ ಎಫ್​ಐಆರ್ ದಾಖಲಿಸಿದ್ದು ಸಹ ಹೂಡಿಕೆದಾರರ ಸಿಟ್ಟಿಗೆ ಕಾರಣವಾಗಿತ್ತು. ₹ 2150ಕ್ಕೆ ಲಿಸ್ಟ್ ಆಗಿದ್ದ ಕಂಪನಿಯು ಷೇರುಗಳು ಗುರುವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ₹ 600ಕ್ಕೂ ಕಡಿಮೆ ಮೊತ್ತದಲ್ಲಿ ವಹಿವಾಟು ನಡೆಸುತ್ತಿತ್ತು.

ಸಾಕಷ್ಟು ದೊಡ್ಡಮಟ್ಟದ ಲಾಭ ತಂದುಕೊಡಬಹುದು ಎಂಬ ಆಸೆಯೊಂದಿಗೆ ಹಲವು ಪೇಟಿಎಂ ಐಪಿಒಗೆ ಹಣ ಹೂಡಿದ್ದರು. ಆದರೆ ಸತತ ಇಳಿಯುತ್ತಿರುವ ಷೇರು ಮೌಲ್ಯ ಹಲವರನ್ನು ಕಂಗೆಡಿಸಿದೆ. ನೋವಲ್ಲಿಯೂ ತಮಾಷೆ ಮಾಡಿಕೊಳ್ಳುವ ಪ್ರವೃತ್ತಿ ಕೆಲವರಿಗೆ ಇರುತ್ತದೆ. ಇಂಥವರು ಸಾಮಾಜಿಕ ಜಾಲತಾಣಗಳಲ್ಲಿ ಪೇಟಿಎಂ ಐಪಿಒ ಬಗ್ಗೆ ಕಾಲೆಳೆಯುವ ಚರ್ಚೆ ಆರಂಭಿಸಿದ್ದಾರೆ.

ಐಬಿಎಂನಲ್ಲಿ ಕೆಲಸ ಮಾಡುವ ಶಿರಾ ಮೂಲದ ಮಧು ವೈ.ಎನ್. ಅವರು ಫೇಸ್​ಬುಕ್​ನಲ್ಲಿ ‘ಯಾರೆಲ್ಲ ಪೇಟಿಯಂ ಶೆರಲ್ಲಿ ದುಡ್ ಹಾಕಿದ್ರಿ ಈ ಕಡೆ ಬನ್ನಿ’ ಎಂದು ಇಮೊಜಿಯೊಂದಿಗೆ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದರು. ಇದಕ್ಕೆ ಅಷ್ಟೇ ತಮಾಷೆಯಾಗಿ ಉತ್ತರಿಸಿರುವ ಸಾಕಷ್ಟು ಜನರು, ತಾವು ಅನುಭವಿಸಿದ ನಷ್ಟವನ್ನು, ಅದರಿಂದ ಆದ ಬೇಸರವನ್ನು ಹಂಚಿಕೊಂಡಿದ್ದಾರೆ. ‘ಅಪರೂಪಕ್ಕೆ IPO ಅಲಾಟ್ ಆಯ್ತು ಅಂತ ಖುಷಿಯಾಗಿದ್ರೆ, ತಾನೂ ನೆಲಕಚ್ಚಿ ನಮ್ಮನ್ನೂ ಮುಳುಗಿಸಿಬಿಡ್ತು’ ಎಂದು ಒಬ್ಬರು ಕಣ್ಣೀರಿನ ಇಮೋಜಿ ಹಾಕಿಕೊಂಡಿದ್ದಾರೆ. ‘ಪೇಟಿಎಂನ ಆಡಿಟ್ ರಿಪೋರ್ಟ್ ಬರುವವರೆಗೆ ಕಾಯಿರಿ’ ಎಂದು ಒಬ್ಬರು ಸಲಹೆ ಕೊಟ್ಟಿದ್ದಾರೆ.

ಇದೇ ಹೊತ್ತಿಗೆ ಪೇಟಿಎಂ ಅಷ್ಟು ಜನಪ್ರಿಯವಾಗಲು ಕಾರಣವಾದ ಅಂಶಗಳ ಬಗ್ಗೆಯೂ ಚರ್ಚೆ ನಡೆದಿದೆ. ‘ಪೇಟಿಎಂನ ಪ್ರತಿಸ್ಪರ್ಧಿಗಳು ಡಿಜಿಟಲ್ ಪೇಮೆಂಟ್​ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಿದ್ದಾರೆ. ಆದರೆ ಪೇಟಿಎಂಗೆ ಈವರೆಗೆ ತನ್ನ ಮೂಲ ಕಾರ್ಯಕ್ಷೇತ್ರ ಯಾವುದು ಎಂಬ ಬಗ್ಗೆಯೇ ಗೊಂದಲ ಇದ್ದಂತೆ ಇದೆ’ ಎಂದು ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಇದಕ್ಕಿಂತ ಪಾತಾಳ ಇನ್ನೊಂದಿಲ್ಲ’ ಎಂದು ₹ 634ರಲ್ಲಿ ವಹಿವಾಟು ಆಗುತ್ತಿರುವ ಸ್ಕ್ರೀನ್​ಶಾಟ್ ಒಬ್ಬರು ಹಂಚಿಕೊಂಡಿದ್ದಾರೆ. ಆದರೆ ಈ ಪೋಸ್ಟ್ ಹಾಕಿದ ಎರಡೇ ದಿನಗಳಲ್ಲಿ ಪೇಟಿಎಂ ₹600ಕ್ಕಿಂತಲೂ ಕೆಳಗಿಳಿದೆ. ಪೋಸ್ಟ್ ಮತ್ತು ಅದಕ್ಕೆ ಬಂದಿರುವ ತಮಾಷೆ ಕಾಮೆಂಟ್​ಗಳನ್ನು ನೋಡಲು ಮಧು ಅವರು ಫೇಸ್​ಬುಕ್ ಪುಟಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ: Paytm: ಪೇಟಿಎಂ ಸ್ಟಾಕ್ ಮತ್ತೆ ಮತ್ತೆ ಕುಸಿತ; ಮತ್ತೊಮ್ಮೆ ದಾಖಲೆಯ ಕನಿಷ್ಠ ಮಟ್ಟವಾದ 608 ರೂಪಾಯಿ ತಲುಪಿದ ಷೇರು

ಇದನ್ನೂ ಓದಿ: Paytm Share Price: ಪೇಟಿಎಂ ಷೇರು ಸಾರ್ವಕಾಲಿಕ ಕನಿಷ್ಠ 672 ರೂಪಾಯಿಗೆ; ಐಪಿಒದಲ್ಲಿ ವಿತರಿಸಿದ್ದು 2150 ರೂ.ಗೆ