Paytm: ಪೇಟಿಎಂ ಸ್ಟಾಕ್ ಮತ್ತೆ ಮತ್ತೆ ಕುಸಿತ; ಮತ್ತೊಮ್ಮೆ ದಾಖಲೆಯ ಕನಿಷ್ಠ ಮಟ್ಟವಾದ 608 ರೂಪಾಯಿ ತಲುಪಿದ ಷೇರು
ಪೇಟಿಎಂ ಸ್ಟಾಕ್ ಬೆಲೆ ಮತ್ತೊಮ್ಮೆ ಶೇ 10ರಷ್ಟು ಇಳಿಕೆ ಕಂಡಿದ್ದು, ಮಾರ್ಚ್ 15, 2022ರಂದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 608 ರೂಪಾಯಿಯನ್ನು ತಲುಪಿದೆ.
ಪೇಟಿಎಂನ (Paytm) ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ ಷೇರುಗಳು ಮಾರ್ಚ್ 14ರಂದು ಶೇಕಡಾ 13ರಷ್ಟು ಕುಸಿತ ಕಂಡ ಮರುದಿನವಾದ ಮಾರ್ಚ್ 15ರ ಮಂಗಳವಾರದಂದು ಮತ್ತೆ ಶೇಕಡಾ 5ರಷ್ಟು ಕುಸಿಯಿತು. ಅದರ ವ್ಯಾಪಾರ ಮಾದರಿ (ಬಿಜಿನೆಸ್ ಮಾಡೆಲ್) ಮತ್ತು ಲಾಭದಾಯಕತೆ ಹಾದಿ ಬಗ್ಗೆ ಹೆಚ್ಚುತ್ತಿರುವ ಕಾಳಜಿಯಿಂದ ಹೂಡಿಕೆದಾರರು ಸ್ಟಾಕ್ ಮಾರಾಟವನ್ನು ಮುಂದುವರಿಸಿದ್ದಾರೆ. ಪೇಟಿಎಂಗೆ ಸಂಬಂಧಿಸಿದ ಸಂಕಷ್ಟಗಳು ಮುಂದುವರಿದಿದೆ. ಬ್ಲೂಮ್‌ಬರ್ಗ್ ವರದಿಯೊಂದು ಸೋಮವಾರ ಪ್ರಕಟಿಸಿದೆ. ಅದರ ಪ್ರಕಾರ, ಚೀನಾದ ಸರ್ವರ್‌ಗಳೊಂದಿಗೆ ಸ್ಥಳೀಯ ಡೇಟಾವನ್ನು ಹಂಚಿಕೊಂಡಿರುವುದಕ್ಕೆ ಮತ್ತು ಗ್ರಾಹಕರನ್ನು ಸರಿಯಾಗಿ ಪರಿಶೀಲಿಸಲು ವಿಫಲವಾದ ಕಾರಣಕ್ಕೆ ಕಂಪೆನಿಯ ಪಾವತಿ ಬ್ಯಾಂಕ್ಗೆ (ಪೇಮೆಂಟ್ ಬ್ಯಾಂಕ್) ಗ್ರಾಹಕರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳದೆ ಇರುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶಿಸಿದೆ ಎಂದು ಹೇಳಿದೆ.
ಪೇಟಿಎಂ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ಶೇಖರ್ ಶರ್ಮಾ ಅವರು ಮನಿ ಕಂಟ್ರೋಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಬ್ಲೂಮ್‌ಬರ್ಗ್ ವರದಿಯು “ದುರುದ್ದೇಶಪೂರಿತ” ಎಂದು ಹೇಳಿದ್ದಾರೆ. “ಇದು ಸಂಪೂರ್ಣವಾಗಿ ದುರುದ್ದೇಶಪೂರಿತ ಸ್ಟೋರಿ ಎಂದು ಕರೆಯಲು ಬಯಸುತ್ತೇನೆ. ಅದು ನಾವು ಇರುವ ವ್ಯವಹಾರದ ಸತ್ಯಗಳನ್ನು ದೃಢೀಕರಿಸುವುದಿಲ್ಲ. ನಾನು ಇದನ್ನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ – ಇದು ದುರುದ್ದೇಶಪೂರಿತವಾಗಿ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ, ಇದು ಸಂಪೂರ್ಣ ತಪ್ಪು,” ಎಂದು ಶರ್ಮಾ ಹೇಳಿದ್ದಾರೆ. ಆದರೂ ಮಂಗಳವಾರದಂದು ಮುಂದುವರಿದ ಷೇರಿನ ಬೆಲೆ ಕುಸಿತವು ಹೂಡಿಕೆದಾರರಿಗೆ ಈ ಅಂಶಗಳು ಮನವರಿಕೆ ಆಗಲ್ಲ ಎಂಬುದನ್ನು ಸೂಚಿಸುತ್ತದೆ.
ಸದ್ಯಕ್ಕೆ ಈ ಫಿನ್ಟೆಕ್ ಕಂಪೆನಿ ಷೇರುಗಳು ಕುಸಿತ ಕಾಣುತ್ತಿದ್ದರೂ ಅದರಲ್ಲೂ ಪಾಸಿಟಿವ್ ಅಂಶ ಏನೆಂದರೆ, ಶೇ 43ರಷ್ಟು ಡೆಲಿವರಿ ವಾಲ್ಯೂಮ್ ಇದೆ. ಇದು ಸರಾಸರಿ 20-ದಿನದ ಡೆಲಿವರಿ ವಾಲ್ಯೂಮ್ಗಿಂತ ಹೆಚ್ಚಿದೆ. ಹೀಗೆ ಸ್ಟಾಕ್‌ನಲ್ಲಿನ ವಾಲ್ಯೂಮ್ ಸಾಮಾನ್ಯಕ್ಕಿಂತ ಹೆಚ್ಚಿದೆ ಅಂದರೆ ಹೂಡಿಕೆದಾರರು ಪೇಟಿಎಂ ಪೇಮೆಂಟ್ ಬ್ಯಾಂಕ್ ವಿರುದ್ಧ ಆರ್‌ಬಿಐನ ಕ್ರಮವು ಪೇಟಿಎಂನ ಒಟ್ಟಾರೆ ಬ್ರ್ಯಾಂಡ್‌ಗೆ ಹೊಡೆತವನ್ನು ನೀಡಬಹುದು ಎಂದು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಸೂಚಿಸುತ್ತದೆ. ಆರ್‌ಬಿಐನ ಕ್ರಮವು ಯಾವುದೇ ಪ್ರಮುಖ ಪರಿಣಾಮ ಬೀರುವುದಿಲ್ಲ ಎಂದು ಶರ್ಮಾ ಹೇಳಿದ್ದರೂ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಹೇರಿದ ನಿಷೇಧವು ವ್ಯವಹಾರದ ಆದಾಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಎಲಿಕ್ಸಿರ್ ಇಕ್ವಿಟೀಸ್‌ನ ದೀಪನ್ ಮೆಹ್ತಾ ಸಿಎನ್‌ಬಿಸಿ-ಟಿವಿ 18ಗೆ ತಿಳಿಸಿರುವಂತೆ, ಹೂಡಿಕೆದಾರರಿಗೆ ಲಾಭದ ಹಾದಿಯಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಇದು ಮಾರಾಟದ ಹಿಂದಿನ ಅಂಶವಾಗಿದೆ. ಪೇಟಿಎಂ ಷೇರುಗಳು ಐಪಿಒ ವಿತರಣೆ ಬೆಲೆಯಾದ 2150 ರೂಪಾಯಿಗಿಂತ ಶೇ 70ರಷ್ಟು ಕುಸಿದಿದೆ. ಈ ವರದಿ ಸಿದ್ಧವಾಗುವ ಹೊತ್ತಿಗೆ ಈ ಸ್ಟಾಕ್ನ ಬೆಲೆ ಹಿಂದಿನ ಸೆಷನ್ಗಿಂತ ಶೇ 9.62ರಷ್ಟು ಕುಸಿದು, 609.90 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿತ್ತು. ಇಂದೂ ಪೇಟಿಎಂ ಸ್ಟಾಕ್ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 608 ರೂಪಾಯಿಯನ್ನು ಮುಟ್ಟಿತು.
ಇದನ್ನೂ ಓದಿ: Paytm Payments Bank: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಹೊಸ ಗ್ರಾಹಕರ ಸೇರ್ಪಡೆ ಮಾಡದಂತೆ ಆರ್ಬಿಐ ಸೂಚನೆ