ಮುಂಬೈ: ರಿಲಯನ್ಸ್ ರಿಟೇಲ್‌ನ ‘ಭಾರತೀಯ ಕೈಮಗ್ಗ’ ಯೋಜನೆ ಅಡಿಯಲ್ಲಿ ಸ್ವದೇಶ್ ಸ್ಟೋರ್‌ಗಳನ್ನು (reliance retail swadesh stores) ಆರಂಭಿಸಲಾಗುತ್ತಿದ್ದು, ಭಾರತೀಯರು ತಯಾರಿಸಿದ ಸಾಮಗ್ರಿಗಳಿಗೆ ಜಾಗತಿಕ ವೇದಿಕೆ ಲಭ್ಯವಾಗಲಿದೆ. ಇದರಿಂದ ವಿವಿಧ ಭಾರತೀಯ ಕಲೆ ಮತ್ತು ಕರಕುಶಲ ರೂಪಗಳಿಗೆ ವೇದಿಕೆ ಕಲ್ಪಿಸಲು ಮತ್ತು ದೇಶದಲ್ಲಿನ ಲಕ್ಷಾಂತರ ಕುಶಲಕರ್ಮಿಗಳಿಗೆ ಜೀವನ ರೂಪಿಸಿಕೊಳ್ಳುವ ಅವಕಾಶ ಒದಗಲಿದೆ.
ಪ್ರಸ್ತುತ ವರ್ಷದ ದ್ವಿತೀಯಾರ್ಧದಲ್ಲಿ ಮೊದಲ ಸ್ವದೇಶ್ ಮಳಿಗೆ ಆರಂಭವಾಗುವ ನಿರೀಕ್ಷೆಯಿದೆ. ಇದರಲ್ಲಿ ಕರಕುಶಲ ಉಡುಪುಗಳು, ಕೈಮಗ್ಗದ ಸಾಮಗ್ರಿಗಳು, ಕೃಷಿ ಉತ್ಪನ್ನಗಳು ಮತ್ತು ಇತರ ಸಾಮಗ್ರಿಗಳು ಇರಲಿದ್ದು, ಇವುಗಳನ್ನು ನೇರವಾಗಿ ಕಲಾವಿದರಿಂದಲೇ ಖರೀದಿಸಲಾಗಿರುತ್ತದೆ. ಭಾರತೀಯ ಕರಕುಶಲ ಸಾಮಗ್ರಿಗಳಿಗೆ ಸ್ವದೇಶದ ಜಾಗತಿಕ ಮಾರ್ಕೆಟ್ ಪ್ಲೇಸ್ ಕೂಡ ಆಗಿರುತ್ತದೆ. ವಿಶ್ವದ ಎಲ್ಲೆಡೆಯಿಂದ ಗ್ರಾಹಕರು ಈ ಸಾಮಗ್ರಿಗಳನ್ನು ಖರೀದಿ ಮಾಡಬಹುದು.
“ಭಾರತೀಯ ಕಲೆ ಮತ್ತು ಕರಕುಶಲ ಸಾಮಗ್ರಿಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಈ ಹಿಂದೆ ನಾವು ಭಾರತೀಯ ಕಲಾಕಾರರು, ನೇಕಾರರು ಮತ್ತು ಕರಕುಶಲಕರ್ಮಿಗಳನ್ನು ಪರಿಚಯಿಸುವ ಪ್ರಯತ್ನ ನಡೆಸಿದ್ದು ಉತ್ತಮ ಫಲಿತಾಂಶ ನೀಡಿದೆ. ನಮ್ಮ ವಿಶೇಷ ಸ್ಟೋರ್ ಸ್ವದೇಶ್ ಈಗ ಅಂತಿಮ ರೂಪ ಪಡೆದುಕೊಂಡಿದೆ. ಭಾರತೀಯ ಕಲಾಕಾರರಿಗಾಗಿ ಕೌಶಲ ಅಭಿವೃದ್ಧಿ ಕೇಂದ್ರ ಆರ್ ಐ ಎಸ್ ಇ (RiSE -Reliance Foundation Initiative for Skill Enhancement) ಸೆಂಟರ್‌ಗಳನ್ನೂ ನಾವು ಸ್ಥಾಪಿಸಲಿದ್ದೇವೆ ಎಂದು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ನಿರ್ದೇಶಕಿ ಇಶಾ ಅಂಬಾನಿ ಹೇಳಿದ್ದಾರೆ.
ಕೌಶಲ್ಯ ವರ್ಧನೆ, ವಿನ್ಯಾಸ ತರಬೇತಿ, ಸಾಮರ್ಥ್ಯ ಹೆಚ್ಚಳ ಕಾರ್ಯಾಗಾರಗಳನ್ನು ಭಾರತೀಯ ಕಲಾಕಾರರಿಗಾಗಿ ನಡೆಸಲಾಗುತ್ತದೆ. ಅಲ್ಲದೆ, ರಾಜ್ಯ ಸರ್ಕಾರಗಳ ಜೊತೆಗೆ ಸ್ವದೇಶ್ ಒಪ್ಪಂದ ಮಾಡಿಕೊಳ್ಳುತ್ತಿದೆ. ಈಗಾಗಲೇ, ಜವಳಿ ಸಚಿವಾಲಯದ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರ ಅಡಿಯಲ್ಲಿ ಕಲಾಕಾರರ ಸಮುದಾಯದಿಂದ ನೇರವಾಗಿ 100% ಅಸಲಿ ಉತ್ಪನ್ನಗಳನ್ನು ಖರೀದಿ ಮಾಡಲಾಗುತ್ತದೆ.
ಅಲ್ಲದೆ ಪಶ್ಚಿಮ ಬಂಗಾಳ ಸರ್ಕಾರದ ಎಂಎಸ್‌ಎಂಇ ಮತ್ತು ಜವಳಿ ಇಲಾಖೆಯ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆರೋಗ್ಯಕರ ಮತ್ತು ವಿಶಿಷ್ಟವಾದ ವ್ಯವಸ್ಥೆಯೊಂದನ್ನು ರಚಿಸಿ, ಉದ್ಯೋಗ ಸೃಷ್ಟಿ ಮತ್ತು ಕಲಾಕಾರರ ಜೀವನ ಮಟ್ಟ ಸುಧಾರಣೆ ಮಾಡುವ ಪ.ಬಂಗಾಳ ಸರ್ಕಾರದ ಧ್ಯೇಯಕ್ಕೆ ಪೂರಕವಾಗಿ ಕೆಲಸ ಮಾಡುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. ಇಂದು ಕೋಲ್ಕತಾದಲ್ಲಿ ಬಂಗಾಳ ಗ್ಲೋಬಲ್ ಬ್ಯುಸಿನೆಸ್ ಸಮ್ಮಿಟ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ವಿವಿಧ ರಾಜ್ಯಗಳಲ್ಲಿ RiSE (RiSE -Reliance Foundation Initiative for Skill Enhancement) ಸೆಂಟರ್‌ಗಳನ್ನು ಸ್ಥಾಪಿಸಲಾಗುತ್ತದೆ. ಈ ಮೂಲಕ ಕಲಾಕಾರರ ಜೀವನ ಮಟ್ಟವನ್ನು ಸುಧಾರಿಸಲು ಶ್ರಮಿಸಲಾಗುತ್ತದೆ. ಇದಕ್ಕಾಗಿ ರಿಲಾಯನ್ಸ್ ಫೌಂಡೇಶನ್ ಸಹಭಾಗಿತ್ವವನ್ನು ಸ್ವದೇಶ್ ಪಡೆಯಲಿದೆ. ಈಗಾಗಲೇ ಕರಕುಶಲ ಸಚಿವಾಲಯದಲ್ಲಿ ಇರುವ ಸ್ಕೀಮ್‌ಗಳನ್ನೇ ಇದರಲ್ಲಿ ಬಳಸಿಕೊಳ್ಳಲಾಗುತ್ತದೆ.