Right To Repair: ‘ರಿಪೇರಿ ಮಾಡುವ ಹಕ್ಕು’ ಪರಿಚಯಿಸಲು ಮುಂದಾದ ಕೇಂದ್ರ ಸರ್ಕಾರ, ಇದರಿಂದ ಗ್ರಾಹಕರಿಗೇನು ಲಾಭ ಗೊತ್ತಾ?

| Updated By: Rakesh Nayak Manchi

Updated on: Jul 15, 2022 | 3:41 PM

ಕಾರುಗಳು, ಮೊಬೈಲ್‌ಗಳು ಮತ್ತು ಇತರ ಗ್ರಾಹಕ ಸರಕುಗಳ ತಯಾರಕರ ಏಕಸ್ವಾಮ್ಯವನ್ನು ಈ ಉತ್ಪನ್ನಗಳ ದುರಸ್ತಿ ಮತ್ತು ಬಿಡಿಭಾಗಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು 'ರಿಪೇರಿ ಮಾಡುವ ಹಕ್ಕು' ಅನ್ನು ಕೇಂದ್ರ ಸರ್ಕಾರ ಪರಿಚಯಿಸಲು ಮುಂದಾಗಿದೆ.

Right To Repair: ರಿಪೇರಿ ಮಾಡುವ ಹಕ್ಕು ಪರಿಚಯಿಸಲು ಮುಂದಾದ ಕೇಂದ್ರ ಸರ್ಕಾರ, ಇದರಿಂದ ಗ್ರಾಹಕರಿಗೇನು ಲಾಭ ಗೊತ್ತಾ?
ಸಾಂಕೇತಿಕ ಚಿತ್ರ
Follow us on

ವರ್ಷಕ್ಕೊಂದು ಮೊಬೈಲ್, ವರ್ಷಕ್ಕೊಂದು ವಾಚ್ ಖರೀದಿಸುವುದು ನಮ್ಮ ಸದ್ಯದ ಪರಿಸ್ಥಿತಿ. ಇದಕ್ಕೆ ಕಾರಣ ಆಧುನಿಕ ಬಿಡಿಭಾಗಗಳು ಲಭ್ಯವಾಗದಿರುವುದು, ರಿಪೇರಿಯ ದುಬಾರಿ ವೆಚ್ಚ. ಆದರೆ ಇನ್ನು ಮುಂದೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕಾರು, ಮೊಬೈಲ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ವಸ್ತುಗಳು ರಿಪೇರಿಗೆ ಬಂದರೆ ಇನ್ನು ಮುಂದೆ ಆಯಾ ಕಂಪನಿಗೆ ಕೊಂಡುಹೋಗಿ ರಿಪೇರಿ ಮಾಡಿಸಿಕೊಳ್ಳಬಹುದು. ಅಂತಹ ಹಕ್ಕು ಗ್ರಾಹಕರಿಗೆ ಸಿಗುತ್ತಿದೆ. ಹೌದು, ಕೇಂದ್ರ ಸರ್ಕಾರ ರಿಪೇರಿ ಮಾಡುವ ಹಕ್ಕು (Right to Repair) ಅನ್ನು ಪರಿಚಯಿಸಲು ಮುಂದಾಗಿದೆ. ಇದು ಜಾರಿಯಾದಲ್ಲಿ ಗ್ರಾಹಕರು ಸುಲಭವಾಗಿ ಮತ್ತು ಸಮಂಜಸವಾದ ವೆಚ್ಚದಲ್ಲಿ ಉತ್ಪನ್ನವನ್ನು ರಿಪೇರಿ ಮಾಡಲು ಮತ್ತು ಮಾರ್ಪಡಿಸಲು ಸಾಧ್ಯವಾಗುತ್ತದೆ.

ಕೇಂದ್ರ ಸರ್ಕಾರದ ಸಮಿತಿಯು ಬುಧವಾರ ತನ್ನ ಮೊದಲ ಸಭೆಯನ್ನು ನಡೆಸಿ ಚೌಕಟ್ಟನ್ನು ಕಾರ್ಯಗತಗೊಳಿಸಲು ಪ್ರಮುಖ ವಲಯಗಳನ್ನು ಗುರುತಿಸಿದೆ. ಗುರುತಿಸಲಾದ ಕ್ಷೇತ್ರಗಳ ಪೈಕಿ ಕೃಷಿ ಉಪಕರಣಗಳು, ಮೊಬೈಲ್ ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳು, ಗ್ರಾಹಕ ಡ್ಯೂರಬಲ್‌ಗಳು ಮತ್ತು ಆಟೋಮೊಬೈಲ್‌ಗಳು ಅಥವಾ ಆಟೋಮೊಬೈಲ್ ಉಪಕರಣಗಳು ಒಳಗೊಂಡಿವೆ. ರಿಪೇರಿ ಮಾಡುವ ಹಕ್ಕಿನಂತೆ ಸ್ವಯಂ ಅಥವಾ ಮೂರನೇ ವ್ಯಕ್ತಿಗಳ ಮೂಲಕ ದುರಸ್ತಿಗೆ ಅಗತ್ಯವಾದ ಉತ್ಪನ್ನದ ವಿವರಗಳನ್ನು ಗ್ರಾಹಕರೊಂದಿಗೆ ಕಂಪನಿಗಳು ಹಂಚಿಕೊಳ್ಳಬೇಕಾಗುತ್ತದೆ.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಗುರುವಾರ ಈ ಬಗ್ಗೆ ಹೇಳಿಕೆ ನೀಡಿದೆ. ಗ್ರಾಹಕರು ಉತ್ಪನ್ನವನ್ನು ಖರೀದಿಸಿದಾಗ ಅವರು ಅದನ್ನು ಸಂಪೂರ್ಣವಾಗಿ ಹೊಂದಿರಬೇಕು ಎಂಬುದು ರಿಪೇರಿ ಮಾಡುವ ಹಕ್ಕಿನ ಹಿಂದಿನ ಅಂತರ್ಗತವಾಗಿರುತ್ತದೆ. ಅಂದರೆ ಗ್ರಾಹಕರ ಹಕ್ಕಿ ಭಾಗವಾಗಿ ರಿಪೇರಿ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಇರಬೇಕು. ಬಿಡಿಭಾಗಗಳು ಮತ್ತು ಹೇಗೆ ರಿಪೇರಿ ಮಾಡಿಕೊಳ್ಳಬೇಕು ಎಂಬುದನ್ನು ಗ್ರಾಹಕರಿಗೆ ತಿಳಿಸಿಕೊಡಬೇಕಾಗುತ್ತದೆ.

‘ರಿಪೇರಿ ಹಕ್ಕು’ ಚಳವಳಿ

ಕಂಪನಿಗಳಿಗೆ ಹೇಗೆ ಹಣ ಮುಖ್ಯವೋ ಅದೇ ರೀತಿ ಗ್ರಾಹಕರಿಗೂ ಹಣ ಮುಖ್ಯವಾಗಿದೆ. ಇಬ್ಬರಲ್ಲೂ ಹಣದ ಮೌಲ್ಯದ ಬಗ್ಗೆ ತಿಳುವಳಿಕೆ ಇದೆ. ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀಸಿದ ನಂತರ ಆ ವಸ್ತು ರಿಪೇರಿಗೆ ಬಂದರೆ ಅದೇ ಕಂಪನಿಯ ಬಳಿ ಹೋಗಿ ಸರಿಪಡಿಸುವ ಹಾಗಿರಲಿಲ್ಲ. ಬದಲಾಗಿ ಆ ಕಂಪನಿ ಹೇಳಿದವರ ಕಡೆ ಹೋಗಿ ಅವರ ಹೇಳಿದಷ್ಟು ಹಣವನ್ನು ತೆತ್ತು ಸರಿಮಾಡಿ ತರಬೇಕಿತ್ತು. ಇದೇ ಕಾರಣಕ್ಕೆ ನಮ್ಮ ಹಣಕ್ಕೂ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿ ಗ್ರಾಹಕರು 1 ವರ್ಷದ ಹಿಂದೆ ಚಳವಳಿ ಆರಂಭಿಸಿದ್ದರು.

ರಿಪೇರಿ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗೆ ನೀಡಬೇಕು ಎಂಬುದು ಚಳವಳಿಯ ಮುಖ್ಯ ಬೇಡಿಕೆಯಾಗಿತ್ತು. ಅದರಂತೆ ವಿಶ್ವದ ವಿವಿಧೆಡೆಯ ಹಲವು ಹೋರಾಟಗಾರರು ಮತ್ತು ಸಂಘಟನೆಗಳು ಗ್ರಾಹಕರ ಹಕ್ಕಿನ ಭಾಗವಾಗಿ ರಿಪೇರಿ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಇರಬೇಕು ಎಂದು ಪ್ರತಿಪಾದಿಸುತ್ತಿದ್ದರು. ಇತಿಹಾಸವನ್ನು ಗಮನಿಸಿದರೆ ಈ ಚಳವಳಿ ಒಂದು ಎರಡು ವರ್ಷಗಳ ಹಿಂದಿನದ್ದಲ್ಲ, ಬದಲಾಗಿ 1950ರಿಂದಲೂ ಚಾಲ್ತಿಯಲ್ಲಿದೆ.

ರಿಪೇರಿ ಮಾಡುವ ಹಕ್ಕಿಗೆ ವಿರೋಧ

ಸಾಧನ ರೂಪುಗೊಂಡಿರುವ ರಹಸ್ಯ ಖಾಸಗಿ ವ್ಯಕ್ತಿಗಳಿಗೆ ತಿಳಿಯಲಿದೆ, ಇದರಿಂದ ಇಂಥ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಮೂಲ ಕಂಪನಿಗಳಿಗೆ ನಷ್ಟವಾಗುವ ಸಾಧ್ಯತೆ ಇದೆ, ಮಾತ್ರವಲ್ಲ, ತಪ್ಪಾದ ನಿರ್ವಹಣೆಯಿಂದ ಗ್ರಾಹಕರಿಗೂ ಅಪಾಯವಾಗಬಹುದು ಎಂದು ಹೇಳುವ ಮೂಲಕ ಆ್ಯಪಲ್, ಮೈಕ್ರೊಸಾಫ್ಟ್​, ಅಮೆಜಾನ್ ಮತ್ತು ಟೆಸ್ಲಾ ಸೇರಿದಂತೆ ದೈತ್ಯ ಟೆಕ್ ಕಂಪನಿಗಳು ಈ ಚಳವಳಿಯನ್ನು ಶತಾಯಗತಾಯ ಹತ್ತಿಕ್ಕಲು ಯತ್ನಿಸಿತ್ತು.

Published On - 2:08 pm, Fri, 15 July 22