Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ

| Updated By: ಝಾಹಿರ್ ಯೂಸುಫ್

Updated on: Aug 11, 2021 | 8:07 PM

Toyota Barter Offer: ವಾಹನ-ಆಹಾರ ವಿನಿಮಯ ಅವಕಾಶವಿದ್ದು, ರೈತರು ತಮ್ಮ ಬೆಳೆಯನ್ನು ನೀಡಿ ವಾಹವನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಕಂಪೆನಿ ತಿಳಿಸಿದೆ.

Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ
Toyota Cars
Follow us on

ನೀವು ಪ್ರಾಚೀನ ಕಾಲದಲ್ಲಿ ಸರಕು-ಸೇವೆಗಳ ವಿನಿಮಯಕ್ಕೆ ಹಣವನ್ನು ಬಳಸುವ ಬದಲು ಸರಕು-ಸೇವೆಗಳನ್ನೇ ಬಳಸುತ್ತಿದ್ದರು ಎಂಬುದನ್ನು ಕೇಳಿರುತ್ತೀರಿ. ಅದರಲ್ಲೂ ಮುಖ್ಯವಾಗಿ ಆಹಾರಗಳ ವಿನಿಮಯದ ಮೂಲಕ ವ್ಯವಹಾರಗಳನ್ನು ನಡೆಸುತ್ತಿದ್ದರು ಎಂಬುದನ್ನು ಓದಿರುತ್ತೀರಿ. ಇದೀಗ ಅಂತಹದ್ದೇ ವಿನಿಮಯ ಮಾದರಿಗೆ ಮುಂದಾಗಿದೆ ಟೋಯೋಟಾ ಕಂಪೆನಿ. ಜಪಾನ್ ಮೂಲದ ಟೋಯೋಟಾ (Toyota) ಕಂಪೆನಿಯ ಹೊಸ ಕಾರುಗಳನ್ನು ‘ಟೋಯೋಟಾ ಬಾರ್ಟರ್’​ ಆಫರ್​ ಅಡಿಯಲ್ಲಿ ಜೋಳ ಮತ್ತು ಸೋಯಾಬೀನ್ ನೀಡಿ ಖರೀದಿಸಬಹುದು. ಆದರೆ ಈ ಅವಕಾಶ ಭಾರತದಲ್ಲಿ ಇಲ್ಲ. ಬದಲಾಗಿ ದೂರದ ಬ್ರೆಜಿಲ್​ನಲ್ಲಿ ಮಾತ್ರ.

ಹೌದು, ಭಾರತದಲ್ಲಿ ಟೋಯೋಟಾ ಫಾರ್ಚುನರ್ ಹೆಸರಿನಲ್ಲಿ ಕರೆಯಲ್ಪಡುವ SUV ಕಾರನ್ನು ಬ್ರೇಜಿಲ್​ನಲ್ಲಿ ‘ಟೊಯೋಟಾ SW4’ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ವಾಹನವನ್ನು ಹಣದ ಬದಲಾಗಿ ಸೋಯಾಬೀನ್ ಮತ್ತು ಜೋಳವನ್ನು ನೀಡಿ ತಮ್ಮದಾಗಿಸಿಕೊಳ್ಳಬಹುದು ಎಂದು ಬ್ರೆಜಿಲ್ ಟೋಯೋಟಾ ತಿಳಿಸಿದೆ. ಅಷ್ಟೇ ಅಲ್ಲದೆ ಟೋಯೋಟಾ Hilux, Corolla Cross SUV ಕಾರಿನ ಮೇಲೂ ಈ ಆಫರ್ ನೀಡಲಾಗಿದೆ.

ಆಗಸ್ಟ್ 4 ರಂದು ‘ಟೊಯೋಟಾ ಬಾರ್ಟರ್’ ಆಫರ್​ ಅಡಿಯಲ್ಲಿ ಆಹಾರ-ವಾಹನಗಳ ವಿನಿಮಯವನ್ನು ಕಂಪೆನಿ ಪರಿಚಯಿಸಿದೆ. ಅದರಂತೆ ದೇಶದ ಕೃಷಿ ಕ್ಷೇತ್ರದ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿರುವ ಕಂಪೆನಿಯು, ಹಣದ ಬದಲು ತಮ್ಮ ಬೆಳೆಯನ್ನೇ ಖರೀದಿಸಿ ಕಾರು ನೀಡಲು ಮುಂದಾಗಿದೆ. ಈ ವಹಿವಾಟಿನಲ್ಲಿ ಸೋಯಾಬೀನ್ ಅಥವಾ ಜೋಳದ ಮಾರುಕಟ್ಟೆ ಬೆಲೆಯನ್ನು (ತೂಕದಿಂದ) ಪರಿಗಣಿಸಲಾಗುತ್ತದೆ. ಹಾಗೆಯೇ ಗ್ರಾಹಕರು ನೀಡು ಜೋಳ ಮತ್ತು ಸೋಯಾಬೀನ್ ಗುಣಮಟ್ಟವನ್ನು ಕೂಡ ಕಂಪೆನಿಯು ಪರಿಶೀಲಿಸಲಿದೆ. ಅಷ್ಟೇ ಅಲ್ಲದೆ ಈ ಉತ್ಪನ್ನಗಳನ್ನು ಯೋಗ್ಯ ಪ್ರದೇಶದಲ್ಲಿಯೇ ಬೆಳೆದಿದ್ದಾರೆಯೇ ಎಂಬುದನ್ನು ದೃಢಪಡಿಸಿ ಕಾರನ್ನು ನೀಡಲಿದೆ.

ಅಂದಹಾಗೆ ಬ್ರೆಜಿಲ್ ಟೋಯೋಟಾ ಇಂತಹದೊಂದು ಆಫರ್ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2019 ರಲ್ಲೂ ಇಂತಹದ್ದೇ ಪ್ರಾಯೋಗಿಕ ಆಫರ್ ನೀಡಿತ್ತು. ಇದೀಗ ಬ್ರೆಜಿಲ್‌ನ ಹಲವು ರಾಜ್ಯಗಳಲ್ಲಿ ವಾಹನ-ಆಹಾರ ವಿನಿಮಯ ಅವಕಾಶವಿದ್ದು, ರೈತರು ತಮ್ಮ ಬೆಳೆಯನ್ನು ನೀಡಿ ವಾಹವನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಕಂಪೆನಿ ತಿಳಿಸಿದೆ.

ಬ್ರೆಜಿಲ್​ನ ಕೃಷಿ ಉದ್ಯಮ ವಲಯದಲ್ಲಿ ಟೊಯೋಟಾ ಕಂಪೆನಿಯು ಶೇ.16 ರಷ್ಟು ನೇರ ಮಾರಾಟ ಪಾಲು ಹೊಂದಿದ್ದು, ಇದೀಗ ರೈತರಿಗೆ ಮತ್ತಷ್ಟು ಅನುಕೂಲವಾಗುವಂತೆ ವಾಹನಗಳ ಮಾರಾಟಕ್ಕೆ ಮುಂದಾಗಿದೆ. ಈ ಮೂಲಕ ಕೃಷಿಕರು ಅತ್ಯುತ್ತಮ ವಾಹನಗಳನ್ನು ಖರೀದಿಸಲು ಸಹಾಯಕವಾಗಲಿದೆ ಎಂದು ಬ್ರೆಜಿಲ್ ಟೊಯೋಟಾ ತಿಳಿಸಿದೆ.

ಇದನ್ನೂ ಓದಿ: India vs England 2nd Test: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ: ಪ್ಲೇಯಿಂಗ್ 11 ಹೀಗಿರಲಿದೆ

ಇದನ್ನೂ ಓದಿ: India vs England: 2ನೇ ಟೆಸ್ಟ್ ವೇಳೆ ಮಳೆಯಾಗಲಿದೆಯಾ? ಇಲ್ಲಿದೆ 5 ದಿನಗಳ ಸಂಪೂರ್ಣ ಹವಾಮಾನ ವರದಿ

(Toyota company to accept corn in exchange for their cars)