ಒಂಬತ್ತು ಕೋಟಿ ಹಿಂಬಾಲಕರ ಟ್ರಂಪ್ ಟ್ವಿಟರ್ ಖಾತೆ ರದ್ದು, ಟ್ವಿಟರ್ ಸಂಸ್ಥೆಗೆ ಆರ್ಥಿಕ ನಷ್ಟ! ಏನಿದು ಲೆಕ್ಕಾಚಾರ

| Updated By: ganapathi bhat

Updated on: Apr 06, 2022 | 9:23 PM

ಡೊನಾಲ್ಡ್ ಟ್ರಂಪ್, @realDonaldTrump ಖಾತೆ ರದ್ದಾದ ಬಳಿಕ @POTUS ಖಾತೆಯ ಮೂಲಕ ಟ್ವೀಟ್ ಮಾಡಿದ್ದಾರೆ. ಟ್ವಿಟರ್​ನಿಂದ ಖಾತೆ ರದ್ದುಗೊಳಿಸಿದರೆ ತನ್ನದೇ ವೇದಿಕೆಯೊಂದನ್ನು ಸೃಷ್ಟಿಸುತ್ತೇನೆ ಎಂದು ಟ್ರಂಪ್ ಗುಡುಗಿದ್ದಾರೆ.

ಒಂಬತ್ತು ಕೋಟಿ ಹಿಂಬಾಲಕರ ಟ್ರಂಪ್ ಟ್ವಿಟರ್ ಖಾತೆ ರದ್ದು, ಟ್ವಿಟರ್ ಸಂಸ್ಥೆಗೆ ಆರ್ಥಿಕ ನಷ್ಟ! ಏನಿದು ಲೆಕ್ಕಾಚಾರ
ಡೊನಾಲ್ಡ್ ಟ್ರಂಪ್
Follow us on

ಸ್ಯಾನ್ ಫ್ರಾನ್ಸಿಸ್ಕೊ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆಯನ್ನು ಟ್ವಿಟರ್ ಸಂಸ್ಥೆ ಶಾಶ್ವತವಾಗಿ ರದ್ದುಗೊಳಿಸಿದೆ. ಯುಎಸ್ ಕ್ಯಾಪಿಟಲ್​ಗೆ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯನ್ನು ಸಮರ್ಥಿಸಿ, ಟ್ರಂಪ್ ಮಾಡಿದ್ದ ಟ್ವೀಟ್​ನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ @realDonaldTrump ಖಾತೆಯನ್ನು ಟ್ವಿಟರ್, ಶುಕ್ರವಾರ ಸಂಜೆ ರದ್ದುಗೊಳಿಸಿದೆ.

ಟ್ರಂಪ್ ಟ್ವೀಟ್​ಗಳು ಸಂಸ್ಥೆಯ ನೀತಿಯನ್ನು ಮೀರಿದೆ. ಅವು ಹಿಂಸಾಚಾರವನ್ನು ವಿಜೃಂಭಿಸಿವೆ ಎಂದು ಟ್ವಿಟರ್ ಸಂಸ್ಥೆ ತಿಳಿಸಿದೆ. ಡೊನಾಲ್ಡ್ ಟ್ರಂಪ್, ಶುಕ್ರವಾರ ಮಧ್ಯಾಹ್ನ ಎರಡು ಟ್ವೀಟ್​ಗಳನ್ನು ಮಾಡಿದ್ದಾರೆ. ಅವು, @realDonaldTrump ಖಾತೆಯಿಂದ ಮಾಡಲ್ಪಟ್ಟ ಕೊನೆಯ ಟ್ವೀಟ್​ಗಳಾಗಿವೆ. ಟ್ರಂಪ್ ಟ್ವೀಟ್​ಗಳು, ಹಿಂಬಾಲಕರನ್ನು ಯಾವ ರೀತಿ ಪ್ರಚೋದಿಸುತ್ತದೆ ಎಂದು ಹಾಗೂ ಟ್ವಿಟರ್ ಖಾತೆಯ ಕೆಲ ವಾರಗಳ ಗುಣನಡತೆಯನ್ನು ಪರಿಶೀಲಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ಮಾಹಿತಿ ನೀಡಿದೆ.

ನೂರಾರು ಟ್ವಿಟರ್ ನೌಕರರು, ಕಂಪೆನಿ ಸಿಇಒ ಜಾಕ್ ಡಾರ್ಸೆ ಅವರಿಗೆ, @realDonaldTrump ಖಾತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಖಾತೆ ರದ್ದುಗೊಳಿಸುವುದಕ್ಕೂ ಮುನ್ನ ಟ್ರಂಪ್ ಟ್ವಿಟರ್ ಖಾತೆ, @realDonaldTrumpಗೆ 88.7 ಮಿಲಿಯನ್ (ದಶಲಕ್ಷ) ಹಿಂಬಾಲಕರಿದ್ದರು. ಇದು ಟ್ವಿಟರ್ ಕಂಪೆನಿಯ ಒಟ್ಟು ಮಾನಿಟೈಸೇಬಲ್ ಡೈಲಿ ಆಕ್ಟಿವ್ ಯೂಸರ್ಸ್​ನ (mDAU) ಅರ್ಧದಷ್ಟು ದೊಡ್ಡ ಸಂಖ್ಯೆಯಾಗಿದೆ. ಟ್ರಂಪ್ ಖಾತೆ ರದ್ದತಿ ಬಳಿಕ ಟ್ವಿಟರ್ ಷೇರು ಶೇ. 13ರಷ್ಟು ಇಳಿಕೆ ಕಂಡಿದೆ. ಈ ನಡುವೆ, ಫೇಸ್​ಬುಕ್ ಷೇರು ಏರಿಕೆಯಾಗಿದೆ.

ಡೊನಾಲ್ಡ್ ಟ್ರಂಪ್, @realDonaldTrump ಖಾತೆ ರದ್ದಾದ ಬಳಿಕ @POTUS ಖಾತೆಯ ಮೂಲಕ ಟ್ವೀಟ್ ಮಾಡಿದ್ದಾರೆ. ಟ್ವಿಟರ್​ನಿಂದ ಖಾತೆ ರದ್ದುಗೊಳಿಸಿದರೆ ತನ್ನದೇ ವೇದಿಕೆಯೊಂದನ್ನು ಸೃಷ್ಟಿಸುತ್ತೇನೆ ಎಂದು ಟ್ರಂಪ್ ಗುಡುಗಿದ್ದಾರೆ. ನನ್ನ ಬಾಯಿಮುಚ್ಚಿಸಲು ಟ್ವಿಟರ್ ಈ ತಂತ್ರ ಹೂಡಿದೆ ಎಂದು ಆರೋಪಿಸಿದ್ದಾರೆ. ಶೀಘ್ರದಲ್ಲೇ ದೊಡ್ಡ ಘೋಷಣೆಯೊಂದನ್ನು ಮಾಡುವುದಾಗಿಯೂ ಟ್ರಂಪ್ ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಜೊತೆಗೆ, ಟ್ರಂಪ್ ಕಟ್ಟಾ ಹಿಂಬಾಲಕರಾದ ಅಮೆರಿಕಾ ಮಾಜಿ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಮೈಕೆಲ್ ಫ್ಲಿನ್ ಹಾಗೂ ಅಮೆರಿಕಾ ಅಧಿಕಾರಿ ಸಿಡ್ನಿ ಪವೆಲ್ ಅವರ ಖಾತೆಗಳೂ ಕೂಡ ಟ್ವಿಟರ್​ನಿಂದ ರದ್ದಾಗಿದೆ. ಜೊತೆಗೆ, ಸ್ಟೀವ್ ಬನೊನ್ ಎಂಬವರ ವಾರ್ ರೂಮ್ ಎಂಬ ಯೂಟ್ಯೂಬ್ ಪಾಡ್​ಕಾಸ್ಟ್ ಖಾತೆ ಕೂಡ ರದ್ದಾಗಿದೆ. ಚುನಾವಣೆಯ ಬಗ್ಗೆ ತಪ್ಪು ಮಾಹಿತಿ ಹರಡಿ, ಯೂಟ್ಯೂಬ್ ನಿಯಮಗಳನ್ನು ಮೀರಿ ನಡೆದದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ರೆಡ್ಡಿಟ್ ಸಂಸ್ಥೆ ಕೂಡ ಟ್ರಂಪ್ ಬೆಂಬಲಿತ ವೇದಿಕೆಯನ್ನು ರದ್ದುಗೊಳಿಸಿರುವ ಬಗ್ಗೆ ಮಾಹಿತಿ ನೀಡಿದೆ. ಯುಎಸ್ ಕ್ಯಾಪಿಟಲ್ ದಾಳಿಯ ಬಗ್ಗೆ ಹಿಂಸಾತ್ಮಕ ವಿಚಾರಗಳನ್ನು ಬೆಂಬಲಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸಬ್​ರೆಡ್ಡಿಟ್ r/donaldtrump ಪುಟವನ್ನು ರದ್ದುಗೊಳಿಸಿದೆ. ಟ್ರಂಪ್ ಬೆಂಬಲಿಗರು, ಯುಎಸ್ ಕ್ಯಾಪಿಟಲ್ ದಾಳಿ ನಡೆಸುವ ಮುನ್ನ, ಆನ್​ಲೈನ್ ವೇದಿಕೆಯಲ್ಲಿ ಒಗ್ಗೂಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಕ್ಸಿಯೋಸ್ ಫರ್ಸ್ಟ್ ವರದಿ ಮಾಡಿದೆ. ಕಂಪೆನಿಯ ನಿಯಮಾವಳಿಗಳನ್ನು ಮೀರಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೆಡ್ಡಿಟ್ ವಕ್ತಾರ ತಿಳಿಸಿದ್ದಾರೆ.

Published On - 12:36 pm, Sat, 9 January 21