Want to retire rich? ನಿವೃತ್ತಿ ನಂತರ ಆರ್ಥಿಕವಾಗಿ ನೆಮ್ಮದಿಯಾಗಿರಲು ಇಲ್ಲಿವೆ 10 ನಿಯಮಗಳು

|

Updated on: Apr 14, 2021 | 1:17 PM

ನಿವೃತ್ತಿ ಆದ ನಂತರ ಗುಣಮಟ್ಟದ ಜೀವನ ನಡೆಸಲು, ನೆಮ್ಮದಿಯಿಂದ ಇರಲು ಬೇಕಾದ ಸಿದ್ಧತೆ ಮಾಡಿಕೊಳ್ಳುವುದು ತುಂಬ ಮುಖ್ಯ. ಇದಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಸರಿಯಾದ ನಿಯಮಗಳನ್ನು ಪಾಲಿಸಬೇಕು ಅಂಥ 10 ನಿಯಮಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

Want to retire rich? ನಿವೃತ್ತಿ ನಂತರ ಆರ್ಥಿಕವಾಗಿ ನೆಮ್ಮದಿಯಾಗಿರಲು ಇಲ್ಲಿವೆ 10 ನಿಯಮಗಳು
ಸಾಂದರ್ಭಿಕ ಚಿತ್ರ
Follow us on

ನಿವೃತ್ತಿ ನಂತರದ ಬದುಕು ನೆಮ್ಮದಿ ಆಗಿರಬೇಕು ಎಂದು ಹಲವರು ಯೋಚನೆ ಮಾಡಿಟ್ಟುಕೊಂಡಿರುವುದಕ್ಕಿಂತ ಹೆಚ್ಚು ಸಂತುಷ್ಟವಾಗಿ ಕಳೆಯುವುದಕ್ಕೆ ಕೆಲವು ಯೋಜನೆ ಮತ್ತು ಯೋಚನೆ ಅತ್ಯಗತ್ಯ. ಇದಕ್ಕೆ ಮುಖ್ಯವಾಗಿ ಜೀವನದಲ್ಲಿ ಕೆಲವು ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಅಂಥ 10 “ಬದುಕಲು ಕಲಿಯಿರಿ” ಎಂಬಂಥ ನಿಯಮಗಳನ್ನು ಈ ಲೇಖನದಲ್ಲಿ ಪರಿಚಯಿಸಲಾಗುತ್ತಿದೆ. ರಿಟೈರ್ ಆದ ಮೇಲೆ ಒಂದು ಮಟ್ಟದ ಗೌರವಯುತ ಜೀವನ ನಡೆಸುವುದಕ್ಕೆ ಹಣಕ್ಕೆ ಕಷ್ಟ ಪಡುವಂತೆ ಇರಬಾರದು ಎಂಬ ಕಾರಣಕ್ಕೆ ನಮ್ಮಲ್ಲಿ ಎಲ್ಲರೂ ದುಡಿಯುವಾಗಲೇ ಸಾಕಷ್ಟು ಹಣ ಮಾಡಬೇಕು ಅಂತ ಆಲೋಚಿಸ್ತೀವಿ. ಈ ಮಧ್ಯೆ ಮನೆ- ಕಾರು ಖರೀದಿ, ಮಕ್ಕಳ ಶಿಕ್ಷಣ, ಮದುವೆ ಎಲ್ಲಕ್ಕೂ ದೊಡ್ಡ ಮಟ್ಟದ ಖರ್ಚುಗಳು ಇದ್ದೇ ಇರುತ್ತವೆ. ಆದ್ದರಿಂದ ತುಂಬ ಎಚ್ಚರಿಕೆಯಿಂದ ಹೂಡಿಕೆ ಪ್ಲ್ಯಾನಿಂಗ್ ಮಾಡಬೇಕು.

ಮೇಲ್ನೋಟಕ್ಕೆ ಈ ಖರ್ಚುಗಳು ಕಾಲು ನಡುಗುವಂತೆ ಹೆದರಿಸುತ್ತವೆ. ಆದರೆ ಯೋಜನೆ ಹಾಗೂ ಶಿಸ್ತುಬದ್ಧ ಹೂಡಿಕೆಯಿಂದ ಅವುಗಳಿಗೂ ಹಣ ಹೊಂದಿಸಿಕೊಳ್ಳಬಹುದು. ನಿಮ್ಮ ಜೀವನದ ಎಲ್ಲ ಗುರಿಗಳನ್ನು ಯಶಸ್ವಿಯಾಗಿ ನಿಭಾಯಿಸಿಯೂ ನಿವೃತ್ತಿ ನಂತರ ನೆಮ್ಮದಿಯ ಜೀವನ ಕಳೆಯುವುದಕ್ಕೆ ಏನು ಮಾಡಬೇಕು ಎಂಬುದಕ್ಕೆ ಇಲ್ಲಿ 10 ನಿಯಮಗಳಿವೆ.

ನಿಯಮ 1
ತುಂಬ ಚಿಕ್ಕ ವಯಸ್ಸಿನಲ್ಲೇ ಹೂಡಿಕೆ ಆರಂಭಿಸಿ. ನೆನಪಿಡಿ, ಇದು ಬಹಳ ಮುಖ್ಯವಾದ ನಿಯಮ. ಏಕೆ ಗೊತ್ತಾ? ಸಂಪತ್ತು ಒಗ್ಗೂಡಿಸುವುದಕ್ಕೆ ಸಮಯಕ್ಕಿಂತ ಉತ್ತಮ ಸ್ನೇಹಿತ ಇಲ್ಲ. ಒಂದು ಉದಾಹರಣೆ ನೋಡಿ: ನಿಮ್ಮ ವಯಸ್ಸು 18 ಇರುವಾಗ ಪ್ರತಿ ತಿಂಗಳು ರೂ. 2000 ಹೂಡಿಕೆ ಆರಂಭಿಸಿದರೆ ವಾರ್ಷಿಕ ರಿಟರ್ನ್ಸ್ ಶೇ 12ರಷ್ಟು ಬಂದಲ್ಲಿ, ನಿಮಗೆ 60 ವರ್ಷ ತುಂಬಿದಾಗ 2.48 ಕೋಟಿ ಬರುತ್ತದೆ. ಒಂದು ವೇಳೆ 30ನೇ ವರ್ಷದ ತನಕ ಕಾದಲ್ಲಿ ಇಷ್ಟೇ ಮೊತ್ತದ ಹೂಡಿಕೆಗೆ 60ನೇ ವರ್ಷದಲ್ಲಿ ಕೇವಲ 62 ಲಕ್ಷ ರೂಪಾಯಿ ಮಾಡುತ್ತೀರಿ. 12 ವರ್ಷಗಳ ವ್ಯತ್ಯಾಸದಲ್ಲಿ ಎಷ್ಟೆಲ್ಲ ಮೊತ್ತ ಕಡಿಮೆ ಆಯಿತಲ್ಲವಾ! ಚಿಕ್ಕ ವಯಸ್ಸಿನಲ್ಲೇ ಉಳಿತಾಯ ಆರಂಭಿಸುವುದರ ಫಾಯಿದೆ ಇದು.

ನಿಯಮ 2
ಹೂಡಿಕೆ ಅಂದಾಗ ಶಿಸ್ತು ತುಂಬ ಮುಖ್ಯ. ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲ್ಯಾನ್ (ಎಸ್​ಐಪಿ) ಮಾಡಿಟ್ಟುಕೊಳ್ಳಿ. ಅದಕ್ಕೆ ನಿಮ್ಮ ಸಂಬಳದ ಖಾತೆಯಿಂದ ಹಣ ಹೋಗುವಂತೆ ಮಾಡಿ. ಹೀಗೆ ವ್ಯವಸ್ಥೆ ಆಗುವುದರಿಂದ ಮೊದಲಿಗೆ ಹೂಡಿಕೆ, ನಂತರ ಖರ್ಚು ಎಂಬ ಪರಿಪಾಠ ಜಾರಿಗೆ ಬರುತ್ತದೆ. ಆದರೆ ಬಹಳ ಜನ ಇದಕ್ಕೆ ವಿರುದ್ಧವಾಗಿಯೇ ಮಾಡುತ್ತಾರೆ. ಮೊದಲಿಗೆ ಖರ್ಚು ಮಾಡಿ, ಆ ನಂತರ ಸಂಬಳದಲ್ಲಿ ಉಳಿದ ಅಲ್ಪ- ಸ್ವಲ್ಪ ಹೂಡಿಕೆ ಮಾಡ್ತಾರೆ. ಇಂತಹ ಸ್ವಭಾವವು ನಿಯಮಬದ್ಧ ಹೂಡಿಕೆಯ ಅತಿ ದೊಡ್ಡ ಶತ್ರು.

ನಿಯಮ 3
ಸಾಲಗಳಿಂದ ದೂರ ಇರಿ. ಮುಖ್ಯವಾಗಿ ಕ್ರೆಡಿಟ್ ಕಾರ್ಡ್​ಗಳಿಂದ ದೂರ ಇರಬೇಕು. ಶಾಪಿಂಗ್ ಮಾಡುವಾಗ ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಅಂದರೆ, ಅದೆಷ್ಟು ಖರ್ಚಾಯಿತು ಎಂಬ ಅಂದಾಜು ಸಹ ಸಿಗೋದಿಲ್ಲ. 10,000 ರೂಪಾಯಿ ಎಷ್ಟು ದೊಡ್ಡ ಮೊತ್ತ ಎಂಬ ಸಂಗತಿಯು ಕಾರ್ಡ್​ನಿಂದ ಪಾವತಿಸುವಾಗ ಗಮನಕ್ಕೆ ಬರೋದೇ ಇಲ್ಲ. ಅದೇ ಅಂಗಡಿಯವರಿಗೆ ನಿಮ್ಮ ಕೈಯಿಂದ 100 ರೂಪಾಯಿ ತೆಗೆದುಕೊಡಿ. ಆಗ ನಿಮ್ಮ ಸಂಬಳದಲ್ಲಿ ಆ ಹಣದ ಮಹತ್ವ ಎಷ್ಟು ಎಂಬ ಅರಿವಾಗುತ್ತದೆ. ಆದ್ದರಿಂದ ಅರಿವಿಗಿಂತ ಗುರು ಬೇಕಾ? ಕ್ರೆಡಿಟ್ ಕಾರ್ಡ್ ಬಳಸುವುದರಲ್ಲಿ ಮತ್ತೊಂದು ಸಮಸ್ಯೆ ಇದೆ. ಅದರ ಬಡ್ಡಿ ಬದುಕಿದ್ದಂತೆಯೇ ಕೊಂದು ತಿಂದುಬಿಡುತ್ತದೆ. ಏನೋ ಕನಿಷ್ಠ ಮಟ್ಟದ ಹಣ ಪಾವತಿಸಿದರೆ ಸಾಕು, ಕ್ರೆಡಿಟ್ ಕಾರ್ಡ್ ಆರಾಮ್ ಎಂದು ನಿಮಗೆ ಅನಿಸಿರಬಹುದು. ಆದರೆ ಕನಿಷ್ಠ ಪ್ರಮಾಣ ಅಂದರೂ ವಾರ್ಷಿಕ ಶೇ 30ರಷ್ಟು ಬಡ್ಡಿ ಬೀಳುತ್ತದೆ. ಆದ್ದರಿಂದ ಸಾಲದ ಬಗ್ಗೆ ಇರುವ ತುಡಿತ ಕಡಿಮೆ ಮಾಡಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್​ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ, ಬಡ್ಡಿ ಬೀಳದಂತೆ ನೋಡಿಕೊಳ್ಳಿ.

ನಿಯಮ 4
ನಿಮ್ಮ ತಿಂಗಳ ಆದಾಯ- ವೆಚ್ಚದ ಬಗ್ಗೆ ನಿಗಾ ಇರಲಿ. ಈ ಮಾತು ಕೇಳಿಸಿಕೊಳ್ಳುವುದಕ್ಕೆ ಅಯ್ಯೋ ಅನಿಸಬಹುದು. ಆದರೆ ನಿಮ್ಮ ಖರ್ಚಿನ ನಿಗಾ ಇರಿಸಿಕೊಳ್ಳುವುದು ಜೀವನವನ್ನು ಉಳಿಸುವ ಸಂಗತಿ. ಯಾವಾಗೆಲ್ಲ ನಿಮ್ಮ ತಿಂಗಳ ಬಜೆಟ್ ಮೀರುತ್ತೀರೋ ಆಗ ತಕ್ಷಣ ಎಚ್ಚರಿಸುತ್ತದೆ. ಜತೆಗೆ ನಿಮ್ಮ ಖರ್ಚಿನ ಬಗ್ಗೆ ಬರೆಯುವುದಕ್ಕೆ ಆರಂಭಿಸುತ್ತಿದ್ದಂತೆ ಯಾವ್ಯಾವುದಕ್ಕೆ ವೆಚ್ಚ ಮಾಡುತ್ತಿದ್ದೀರಿ ಎಂಬ ಸ್ಪಷ್ಟತೆ ಸಿಗಲು ಶುರುವಾಗುತ್ತದೆ.

ನಿಯಮ 5
ಜೀವ ವಿಮೆಯೋ ಅಥವಾ ಆರೋಗ್ಯ ವಿಮೆಯೋ ಬಹಳ ಚಿಕ್ಕ ವಯಸ್ಸಿನಲ್ಲೇ ಮಾಡಿಸಿಕೊಳ್ಳಿ. ಚಿಕ್ಕ ವಯಸ್ಸಿನಲ್ಲಿದ್ದಾಗ ಸಾವೋ ಅಥವಾ ಅನಾರೋಗ್ಯವೋ ಮನಸ್ಸಿಗೆ ಬರೋದಿಲ್ಲ. ಅದು ಬರಬಾರದು ಎಂಬುದು ಸಹ ನಿಜ. ಆದರೆ ಚಿಕ್ಕ ವಯಸ್ಸಿನಲ್ಲೇ ಇನ್ಷೂರೆನ್ಸ್ ಮಾಡಿಸುವುದರಿಂದ ಕಡಿಮೆ ಮೊತ್ತದ ಪ್ರೀಮಿಯಂ ಬರುವ ಅವಕಾಶ ಕಳೆದುಕೊಳ್ಳಬೇಡಿ. ಅದೇ ಇನ್ಷೂರೆನ್ಸ್ ಮೊತ್ತಕ್ಕೆ ನಿಮಗೆ ವಯಸ್ಸಾದ ನಂತರ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಇದರ ಜತೆಗೆ ನಿಮಗೆ ಗೊತ್ತಿರಬೇಕಾದ ಸಂಗತಿ ಏನೆಂದರೆ, ಅನಾರೋಗ್ಯವೋ ಅಥವಾ ಒಂದು ಅಪಘಾತವೋ ನಿಮ್ಮೆಲ್ಲ ಉಳಿತಾಯವನ್ನು ಗುಡಿಸಿ, ಸಾರಿಸಿಬಿಡುತ್ತದೆ. ಇನ್ನು ವಯಸ್ಸಾದ ಕಾಲಕ್ಕಂತೂ ಸಂಕಷ್ಟಕ್ಕೆ ದೂಡುತ್ತದೆ. ಆದ್ದರಿಂದ ಜೀವವಿಮೆ ಹಾಗೂ ಆರೋಗ್ಯ ವಿಮೆ ಎರಡನ್ನೂ ಚಿಕ್ಕ ವಯಸ್ಸಿನಲ್ಲೇ ಮಾಡಿಸಿಕೊಳ್ಳಿ.

ನಿಯಮ 6
ಅನಗತ್ಯ ಖರ್ಚುಗಳನ್ನು ಮಾಡಬೇಡಿ. ಪ್ರತಿ ಆರು ತಿಂಗಳಿಗೊಮ್ಮೆ ಹೊಸ ಮೊಬೈಲ್ ಫೋನ್ ಖರೀದಿ ಮಾಡಬೇಕು ಅನ್ನಿಸೋದು, ಇನ್ನೂ ದೊಡ್ಡ ಹಾಗೂ ಚೆನ್ನಾಗಿರುವ ಕಾರು ಖರೀದಿ ಮಾಡಬೇಕು ಅನ್ನಿಸೋದು, ದೊಡ್ಡ ಎಲ್​ಇಡಿ ಖರೀದಿಸಬೇಕು ಅಂದುಕೊಳ್ಳುವುದು ಇವೆಲ್ಲ ವಿಲಾಸದ ಆಲೋಚನೆಯೇ ವಿನಾ ಅಗತ್ಯಗಳಲ್ಲ. ಈ ಖರ್ಚುಗಳಿಂದ ಬೇರೆಯವರು ಶ್ರೀಮಂತರಾಗ್ತಾರೆ ವಿನಾ ನೀವು ಬಡವರಾಗ್ತೀರಿ. ಆಸ್ತಿ ಮೇಲೆ ನಿಮ್ಮ ಹಣವನ್ನು ಖರ್ಚು ಮಾಡಬೇಕೇ ವಿನಾ ಸಾಲಕ್ಕಾಗಿ ಅಲ್ಲ. ಆಸ್ತಿಯಿಂದ ಸಂಪತ್ತು ಬೆಳೆದರೆ, ಜವಾಬ್ದಾರಿಗಳು ಅಥವಾ ಸಾಲಗಳು ಸಂಪತ್ತನ್ನು ಕಡಿಮೆ ಮಾಡುತ್ತವೆ.

ನಿಯಮ 7
ನೀವು ಯುವ ವೈದ್ಯರಾಗಿರಿ, ವಕೀಲರು, ಫೋಟೋಗ್ರಾಫರ್, ಐಟಿ ವೃತ್ತಿಪರರು, ಸರ್ಕಾರಿ ಅಧಿಕಾರಿ ಅಥವಾ ಕಲಾವಿದ ಹೀಗೆ ಏನೇ ಆಗಿದ್ದರೂ ಆರ್ಥಿಕ ಯೋಜನೆ ಬಗ್ಗೆ ತಿಳಿದುಕೊಳ್ಳಿ. ನೀವು ಏನೇ ಆದರೂ ಹಣ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳುವುದು ಜರೂರತ್ತು. ಏಕೆಂದರೆ, ಎಲ್ಲ ಬುದ್ಧಿವಂತ ಜನರು ಹಣಕ್ಕಾಗಿ ಕೆಲಸ ಮಾಡ್ತಿದ್ದಾರೆ. ಆದರೆ ಅವರಿಗಿಂತ ಬುದ್ಧಿವಂತ ಜನರು ಹಣವೇ ತಮಗಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತಾರೆ. ಈ ಜನರಿಗೆ ಹೂಡಿಕೆ ಮತ್ತು ಉಳಿತಾಯ ಎರಡೂ ಒಂದೇ ಅಲ್ಲ ಎಂಬ ಸಂಗತಿ ಗೊತ್ತಿರುತ್ತದೆ. ಚಿನ್ನ ಏಕೆ ಅತ್ಯುತ್ತಮ ಹೂಡಿಕೆ ಅಲ್ಲ (ಬ್ಯಾಂಕ್ ಲಾಕರ್​ನಲ್ಲಿ ಇಡುವುದಕ್ಕೆ ಚಿನ್ನ ಖರೀದಿಸಬೇಕಾ); ನಿಮ್ಮ ಮೊದಲ ಮನೆಯನ್ನು ಹೊರತುಪಡಿಸಿ ರಿಯಲ್ ಎಸ್ಟೇಟ್ ಲಾಭಕ್ಕಿಂತ ನೋವು ಹೆಚ್ಚು ನೀಡುತ್ತದೆ. ಅಥವಾ ದೀರ್ಘಕಾಲಕ್ಕೆ ಈಕ್ವಿಟಿ ಹೂಡಿಕೆ ಎಂಬುದು ಅತ್ಯುತ್ತಮ ಏಕೆ ಎಂಬುದೆಲ್ಲ ಗೊತ್ತಿರಬೇಕು.

ನಿಯಮ 8
ತುರ್ತು ನಿಧಿಗೆ (ಎಮರ್ಜೆನ್ಸಿ ಫಂಡ್) ಅಂತ ಒಂದಿಷ್ಟು ಹಣವನ್ನು ಪಕ್ಕಕ್ಕಿಡಿ. ಒಂದಿಷ್ಟು ಅಂದರೆ ಎಷ್ಟು ಅಂತೀರಾ? ನಿಮ್ಮ ಈಗಿನ ಸಂಬಳದ ಆರು ತಿಂಗಳ ಮೊತ್ತ. ಎಂಥದ್ದೇ ಸನ್ನಿವೇಶದಲ್ಲೂ ಆ ಹಣವನ್ನು ಮುಟ್ಟಬೇಡಿ. ಇರುವ ಕೆಲಸ ಕಳೆದುಕೊಂಡು, ಮತ್ತೊಂದು ಕೆಲಸ ತಕ್ಷಣ ಸಿಗಲಿಲ್ಲ ಅನ್ನದ ಹೊರತು ಈ ಹಣವನ್ನು ಬಳಸದಿರಿ. ಆರು ತಿಂಗಳ ಸಂಬಳ ಏಕೆಂದರೆ, ಮತ್ತೊಂದು ಉದ್ಯೋಗ ಹುಡುಕಿಕೊಳ್ಳುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ.

ನಿಯಮ 9
ಆದಾಯ ಹೆಚ್ಚಾಯಿತು ಅನ್ನೋ ಕಾರಣಕ್ಕೆ ವೆಚ್ಚ ಹೆಚ್ಚು ಮಾಡುವ ಬದಲಿಗೆ ಹೂಡಿಕೆ ಹೆಚ್ಚು ಮಾಡಬೇಕು. ಹಲವರು ಮಾಡುವ ತಪ್ಪು ಏನೆಂದರೆ, ಖರ್ಚು ಮಾಡುವುದಕ್ಕೆ ಹೆಚ್ಚು ಹಣ ಸಿಗುತ್ತಿದೆ ಅಂದಾಕ್ಷಣ ಖರ್ಚು ಹೆಚ್ಚು ಮಾಡಲು ಆರಂಭಿಸುತ್ತಾರೆ. ಅದರ ಬದಲಿಗೆ ಹೆಚ್ಚು ಹೂಡಿಕೆ ಶುರು ಮಾಡಬೇಕು.

ನಿಯಮ 10
ವಾಸ್ತವದಲ್ಲಿ ಸಾಧ್ಯವಾಗುವ ರಿಟರ್ನ್ಸ್ ಮಾತ್ರ ನಿರೀಕ್ಷೆ ಮಾಡಿ. ಷೇರು ಮಾರ್ಕೆಟ್ ಅಂದಾಕ್ಷಣ ಏನೇನೋ ಕಥೆಗಳು ಹರಿದಾಡುತ್ತಿರುತ್ತವೆ. ನಿಮಗೆ ಸಿಕ್ಕಾಪಟ್ಟೆ ರಿಟರ್ನ್ಸ್ ಕೊಡುವುದಾಗಿ ಯಾರಾದರೂ ಭರವಸೆ ನೀಡಿದಲ್ಲಿ ಆ ಬಗ್ಗೆ ಅನುಮಾನ ಇಟ್ಟುಕೊಳ್ಳಿ. ಬಹಳ ಸಂದರ್ಭಗಳಲ್ಲಿ ಇಂಥವು ವಂಚನೆಯ ಪ್ರಕರಣಗಳಾಗಿರುತ್ತವೆ. ಆರ್ಥಿಕ ಯಶಸ್ಸು ಯಾವಾಗಲೂ ಹೇಗೆ ಬರುತ್ತದೆ ಅಂದರೆ, ನಿಧಾನ ಹಾಗೂ ಸ್ಥಿರವಾದ ಹೆಜ್ಜೆಗಳು ಯಶಸ್ಸಿಗೆ ಮುನ್ನಡೆಸುತ್ತವೆ.

(ಕೃಪೆ- ಮನಿ9.ಕಾಮ್
ಮೂಲ ಲೇಖಕರು- ಆರ್. ಶ್ರೀಧರನ್, ಟಿವಿ9 ಕನ್ನಡ ವ್ಯವಸ್ಥಾಪಕ ಸಂಪಾದಕರು)

ಇದನ್ನೂ ಓದಿ: Savings Plan: ಮೊದಮೊದಲ ಸಂಬಳ ಮಜಾ ಮಾಡಿದ ನಂತರ ಈ 4 ಸಂಗತಿಗಳ ಕಡೆಗೆ ಗಮನ ನೀಡದಿದ್ದರೆ ಹೇಗೆ?

(Do you want to retire rich? Here are the 10 rules to follow at an early age.)

Published On - 1:16 pm, Wed, 14 April 21