AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ 195 ಬರ ಪೀಡಿತ ತಾಲೂಕುಗಳು: ಸರ್ಕಾರದಿಂದ ಅಧಿಕೃತ ಘೋಷಣೆ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯ ಸಂಪುಟ ಉಪಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ, 195 ಬರ ಪೀಡಿತ ತಾಲ್ಲೂಕುಗಳು ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಅಲ್ಲದೇ ಬರ ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳು ಬರ ನಿರ್ವಹಣೆಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸೂಚಿಸಿದೆ.

ಕರ್ನಾಟಕದ 195 ಬರ ಪೀಡಿತ ತಾಲೂಕುಗಳು: ಸರ್ಕಾರದಿಂದ ಅಧಿಕೃತ ಘೋಷಣೆ
ವಿಧಾನಸೌಧ
ಪ್ರಸನ್ನ ಗಾಂವ್ಕರ್​
| Edited By: |

Updated on:Sep 14, 2023 | 9:00 AM

Share

ಬೆಂಗಳೂರು, (ಸೆಪ್ಟೆಂಬರ್ 14) : ರಾಜ್ಯ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸಿನಂತೆ ಸರ್ಕಾರವು ರಾಜ್ಯದ 195 ತಾಲೂಕುಗಳು ಬರ (drought) ಪೀಡಿತ ಎಂದು ಅಧಿಕೃತವಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಕೇಂದ್ರ ಸರ್ಕಾರದ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳ ಅನ್ವಯ ಒಟ್ಟು 195 ಬರ ತಾಲೂಕುಗಳು ಎಂದು ಘೋಷಿಸಲಾಗಿದೆ.

ಜಿಲ್ಲಾಧಿಕಾರಿಗಳಿಂದ ಬೆಳೆಹಾನಿಯ ಸಮೀಕ್ಷೆಯ ವರದಿಯ ಅನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದೆ ಎಂದು ಹೇಳಿದೆ. ಇನ್ನೂ 195 ತಾಲ್ಲೂಕುಗಳ ಪೈಕಿ 161 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕು ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕು ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದೇ ಮೊದಲು ಅಲ್ಲಿಯವರೆಗೂ ಘೋಷಿಸಿ ಆದೇಶಿಸಿದೆ.

ಇದನ್ನೂ ಓದಿ: ರಾಜ್ಯದ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ, ಸಿಎಂ ಸಿದ್ದರಾಮಯ್ಯಗೆ ಶಿಫಾರಸು: ಕೃಷ್ಣ ಬೈರೇಗೌಡ

ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಬರ ನಿರ್ವಹಣೆಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸೂಚಿಸಿದ್ದು, ಕಾಲ ಕಾಲಕ್ಕೆ ಎಸ್​ಡಿಆರ್​ಎಫ್, ಎನ್​ಡಿಆರ್​ಎಫ್ ನಿಯಮಗಳ ಅನ್ವಯ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ನಿನ್ನೆ(ಸೆಪ್ಟೆಂಬರ್ 13) ವಿಧಾನಸೌಧದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಮಳೆಯಿಂದ ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿನ ಬರ ಪರಿಸ್ಥಿತಿಯ ಬಗ್ಗೆ ನಡೆಸಿದ ವಿಸ್ತೃತ ಸಮೀಕ್ಷೆಯ ಮಾಹಿತಿಯ ವರದಿ ಪರಿಶೀಲಿಸಲಾಯಿತು. ಬರ ಪೀಡಿತ ಎಂದು ಘೋಷಿಸುವ ಸಂಬಂಧ ಕೇಂದ್ರದ ಮಾನದಂಡದ ಮಾರ್ಗಸೂಚಿಯ ಅಡಿಯಲ್ಲಿ ಬರುವ 161 ತಾಲೂಕು ಸೇರಿದಂತೆ ಮಳೆಯ ಕೊರತೆ ಇದ್ದರೂ “ಸಾಧಾರಣ” ಬರ ಸ್ಥಿತಿ ಇರುವ 34 ತಾಲ್ಲೂಕುಗಳನ್ನು ಸಹ ಬರ ಪೀಡಿತ ಎಂದು ಘೋಷಿಸುವಂತೆ ರಾಜ್ಯ ಸಚಿವ ಸಂಪುಟಕ್ಕೆ ಶಿಫಾರಸು ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:43 am, Thu, 14 September 23

Follow Us
Prasanna Gaonkar
Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More