2020 Year in Review | ರಾಜಕಾರಣದ ಚದುರಂಗ; ಕೊರೊನಾ ಸಂಕಷ್ಟದ ನಡುವೆಯೂ ಮಹತ್ವದ ಮಸೂದೆಗಳ ಮಂಡನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 30, 2020 | 9:14 PM

ಕರ್ನಾಟಕ ರಾಜಕಾರಣದಲ್ಲಿ ಗಮನಾರ್ಹ ಎನಿಸುವಂಥ ಮಹತ್ವದ ಬೆಳವಣಿಗೆಗಳು ಈ ವರ್ಷ ಕಂಡು ಬರಲಿಲ್ಲ. ಸಚಿವ ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆಯಂಥ ವಿಚಾರಗಳು ಆಗಾಗ ತೇಲಿ ಮಾಧ್ಯಮಗಳ ಗಮನ ಸೆಳೆಯುತ್ತಿದ್ದವು. ಈ ವರ್ಷದ ಪ್ರಮುಖ ರಾಜಕೀಯ ಬೆಳವಣಿಗೆಗಳ ಇಣುಕುನೋಟ ಇಲ್ಲಿದೆ.

2020 Year in Review | ರಾಜಕಾರಣದ ಚದುರಂಗ; ಕೊರೊನಾ ಸಂಕಷ್ಟದ ನಡುವೆಯೂ ಮಹತ್ವದ ಮಸೂದೆಗಳ ಮಂಡನೆ
ವಿಧಾನಸೌಧ
Follow us on

ಕೊರೊನಾ ಲಾಕ್​ಡೌನ್​ ಘೋಷಣೆ, ಸೀಲ್​ಡೌನ್​ ಅನುಷ್ಠಾನ, ಮಾರ್ಗಸೂಚಿ ಅನುಷ್ಠಾನದಲ್ಲಿ ಈ ವರ್ಷ ಕಳೆದುಹೋಯಿತು. ಗಮನಾರ್ಹ ಎನಿಸುವಂಥ ಮಹತ್ವದ ಬೆಳವಣಿಗೆಗಳು ಈ ವರ್ಷ ರಾಜ್ಯರಾಜಕಾರಣದಲ್ಲಿ ಕಂಡು ಬರಲಿಲ್ಲ. ಸಚಿವ ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆಯಂಥ ವಿಚಾರಗಳು ಆಗಾಗ ತೇಲಿ ಮಾಧ್ಯಮಗಳ ಗಮನ ಸೆಳೆಯುತ್ತಿದ್ದವು. ಈ ವರ್ಷದ ಪ್ರಮುಖ ರಾಜಕೀಯ ಬೆಳವಣಿಗೆಗಳ ಇಣುಕುನೋಟ ಇಲ್ಲಿದೆ.

ರಾಜ್ಯ ರಾಜಕೀಯದಲ್ಲಿ ಸಾಕಷ್ಟು ನಿರೀಕ್ಷೆ ಮತ್ತು ವಿವಾದಗಳನ್ನು ಹುಟ್ಟುಹಾಕಿದ ವರ್ಷ 2020. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಫುಟ ವಿಸ್ತರಣೆ-ಪುನರ್ ರಚನೆ ಆಗುತ್ತೋ ಇಲ್ಲವೋ ಎಂಬುದು ವರ್ಷವಿಡೀ ಕೇವಲ ಪ್ರಶ್ನೆಯಾಗಿಯೇ ಉಳಿದಿತ್ತು. ನಾಯಕತ್ವ ಬದಲಾವಣೆ ವಿಷಯವೂ ಆಗಾಗ ಚರ್ಚೆಗೆ ಬಂದು ಮರೆಯಾಗುತ್ತಿತ್ತು. ರಾಜ್ಯದಲ್ಲಿ ಕೊರೊನಾ ವ್ಯಾಪಿಸುತ್ತಿದ್ದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿತ್ತು, ಆದರೆ ಕೊರೊನಾ ನಿಯಂತ್ರಿಸಲು ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿಪಕ್ಷ ಆರೋಪ ಮಾಡಿ ಬೀದಿಗಿಳಿಯಿತು. ಬಿ.ಶ್ರೀರಾಮುಲು ಕೈಯಲ್ಲಿದ್ದ ಆರೋಗ್ಯ ಖಾತೆಯು ಹೆಚ್ಚುವರಿಯಾಗಿ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಬಂತು.

ಸಚಿವ ಸ್ಥಾನ ತ್ಯಜಿಸಿದ ಸಿಟಿ ರವಿ
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಸಿ.ಟಿ.ರವಿ ಸಚಿವ ಸ್ಥಾನ ತ್ಯಜಿಸಿದರು. ಬಿಜೆಪಿಯು ಮಹತ್ವಾಕಾಂಕ್ಷಿ ಹೊಂದಿರುವ ತಮಿಳುನಾಡಿನ ಉಸ್ತುವಾರಿ ಹೊಣೆಯನ್ನು ಅವರಿಗೆ ವಹಿಸಲಾಗಿದೆ. ಬಿಜೆಪಿಯ ಕರ್ನಾಟಕ ಉಸ್ತುವಾರಿ ಹೊಣೆಯನ್ನು ಅರುಣ್ ಸಿಂಗ್ ಅವರಿಗೆ ವಹಿಸಲಾಯಿತು.

ಕೆಪಿಸಿಸಿಗೆ ಡಿ.ಕೆ.ಶಿವಕುಮಾರ್ ಸಾರಥ್ಯ
ಜುಲೈ ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಸಾರಥ್ಯ ವಹಿಸಿಕೊಂಡರು. 2019ರ ಡಿಸೆಂಬರ್ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತ್ತು. ಇದರ ನೈತಿಕ ಹೊಣೆ ಹೊತ್ತು ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸಿ.ಟಿ. ರವಿ

ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು
ಶಾಸಕ ಸತ್ಯನಾರಾಯಣ ಅವರ ನಿಧನದಿಂದಾಗಿ ತೆರವಾಗಿದ್ದ ಶಿರಾ ಕ್ಷೇತ್ರ ಹಾಗೂ ಶಾಸಕ ಮುನಿರತ್ನ ಅವರ ರಾಜೀನಾಮೆಯಿಂದ ತೆರವಾಗಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನ.3ರಂದು ಉಪಚುನಾವಣೆ ನಡೆದಿತ್ತು. ನ.10ರಂದು ಮತ ಎಣಿಕೆ ನಡೆದಿದ್ದು ಉಭಯ ಚುನಾವಣಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಆರ್.ಆರ್.ನಗರದಲ್ಲಿ ಮುನಿರತ್ನ ಮತ್ತು ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಜಯಗಳಿಸಿದರು.

ಮುನ್ನೆಲೆಗೆ ಬಂದ ಮೀಸಲಾತಿ ಚರ್ಚೆ
ಮೀಸಲಾತಿ ಅತೀ ಹೆಚ್ಚು ಚರ್ಚಿತವಾದ ವಿಷಯ. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಬೇಕು, ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು, ಕುರುಬ ಸಮುದಾಯವನ್ನು ಎಸ್​ಟಿ ಪಟ್ಟಿಗೆ ಸೇರಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದವು. ಈ ನಡುವೆಯೇ ಗೊಲ್ಲ, ಮರಾಠ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಗಳ ಸ್ಥಾಪನೆ ಪರ-ವಿರೋಧ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬಂತು.

ವಿಧಾನಮಂಡಲದಲ್ಲಿ ಸದ್ದುಗದ್ದಲ, ಮಸೂದೆಗಳ ಮಂಡನೆ
ಕೋವಿಡ್‌ ಬರುವ ಮುನ್ನ ಎರಡು ಬಾರಿ ಮತ್ತು ನಂತರದಲ್ಲಿ ಎರಡು ಬಾರಿ ಅಧಿವೇಶನ ವಿಧಾನಸಭೆ ಅಧಿವೇಶನ ನಡೆದಿದೆ. ಈ ಅಧಿವೇಶನಗಳಲ್ಲಿ ರಾಜ್ಯ ಸರ್ಕಾರ 76 ಮಸೂದೆಗಳನ್ನು ಮಂಡಿಸಿದ್ದು, 72ಕ್ಕೆ ಒಪ್ಪಿಗೆ ಪಡೆದಿದೆ.

ಪಂಚಾಯತ್‌ ರಾಜ್‌ ಸಂಸ್ಥೆಗಳ ಅಧ್ಯಕ್ಷರ ಅವಧಿಯನ್ನು 5 ವರ್ಷಕ್ಕೆ ವಿಸ್ತರಿಸಿ ಮತ್ತು ಕ್ಷೇತ್ರಗಳ ಮೀಸಲಾತಿಯನ್ನು ಎರಡು ಅವಧಿಗೆ ವಿಸ್ತರಿಸಿದ್ದ ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು ಬದಲಿಸುವ ತಿದ್ದುಪಡಿ ಮಸೂದೆ ವಿಧಾನಸಭೆಯಲ್ಲಿ ಮಂಡನೆಯಾಯಿತು. ಇದರ ಜತೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಮಸೂದೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಿದ್ದುಪಡಿ ಮಸೂದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದ ತಿದ್ದುಪಡಿ ಮಸೂದೆ, ಗೋಹತ್ಯೆ ನಿಷೇಧ ಮಸೂದೆಗಳು ಮಂಡನೆಯಾದವು. ಈ ಪೈಕಿ ಗೋಹತ್ಯೆ ನಿಷೇಧ ಮಸೂದೆಗೆ ವಿಧಾನ ಪರಿಷತ್ತಿನ ಒಪ್ಪಿಗೆ ದೊರೆಯುವುದು ಬಾಕಿ ಇದೆ.

ಕೃಷಿಯೇತರರಿಗೂ ಕೃಷಿ ಜಮೀನು ಖರೀದಿಗೆ ಅವಕಾಶ ಕಲ್ಪಿಸುವ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಮಸೂದೆಗೆ ಜೆಡಿಎಸ್‌ ಬೆಂಬಲದಿಂದ ವಿಧಾನ ಪರಿಷತ್‌ನಲ್ಲೂ ಒಪ್ಪಿಗೆ ದೊರಕಿದೆ. ಕೇಂದ್ರ ಸರ್ಕಾರ ಕೃಷಿ ಸಂಬಂಧಿ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿರುವಾಗಲೇ ರಾಜ್ಯದಲ್ಲೂ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ.

ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ವಿಧಾನಪರಿಷತ್ ಗದ್ದಲ
ಸಭಾಪತಿ ಹಾಜರಿದ್ದರೂ ಉಪ ಸಭಾಪತಿ ಧರ್ಮೇಗೌಡರು ಪೀಠ ಏರಿ ಕುಳಿತಿದ್ದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಅವರನ್ನು ಕೆಳಗೆ ಎಳೆದು ಹಾಕಿದ್ದರು. ಈ ಹೊತ್ತಿನಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಪರಸ್ಪರ ತಳ್ಳಾಟ ನೂಕಾಟ ನಡೆದಿರುವ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಇದಾದ ನಂತರ ಧರ್ಮೇಗೌಡರು ಡಿಸೆಂಬರ್ 28ರ ಸೋಮವಾರ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಗುಣಸಾಗರದಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರು.

2020 Year in Review | ಸಂಘರ್ಷ, ಆತಂಕದ ನಡುವೆ ಕಾಡಿದ ಒಂಟಿತನ; ಒಂದು ವರ್ಷದಲ್ಲಿ ಏನೆಲ್ಲಾ ಆಯ್ತು?

 

Published On - 8:41 pm, Wed, 30 December 20