
ಬೆಂಗಳೂರು, (ಜೂನ್ 19): ಆರ್ ಸಿಬಿ (RCB) ತಂಡದ ಗೆಲುವಿನ ವಿಜಯೋತ್ಸವದ ವೇಲೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ (Bengaluru Stampede Case) ಸಂಭವಿಸಿ 11 ಜನರು ಮೃತಪಟ್ಟ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಬೃಹತ್ ರಾಜಕೀಯ ರ್ಯಾಲಿ, ಸಮಾವೇಶ, ಸಾಮೂಹಿಕ ವಿವಾಹ ಸಮಾರಂಭಗಳಿಗೆ ಸೇರುವ ಜನಸಾಗರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ನಿಯಂತ್ರಿಸುವ ಉದ್ದೇಶದಿಂದ ಹೊಸ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಅದುವೇ ಕರ್ನಾಟಕ ಜನಸಂದಣಿ ನಿಯಂತ್ರಣ ಮಸೂದೆ-2025(Karnataka Crowd Control Bill -2025) . ಈ ಕಾನೂನಿನಲ್ಲಿ ಜೈಲು ಹಾಗೂ ದಂಡ ಶಿಕ್ಷೆ ಇದೆ. ಆದ್ರೆ, ಸಂಪುಟ ಸಭೆಯಲ್ಲಿ ಬಿಲ್ ಪ್ರಸ್ತಾಪ ಮುಂದೂಡಲಾಗಿದೆ.
ಕಾನೂನು ರೂಪಿಸುವ ಉದ್ದೇಶದಿಂದ ಕಾನೂನು ಮತ್ತು ಸಂಸದೀಯ ಇಲಾಖೆ ಕರ್ನಾಟಕ ಜನಸಂದಣಿ ನಿಯಂತ್ರಣ(ಸಾಮೂಹಿಕ ಸಭೆ, ಕಾರ್ಯಕ್ರಮಗಳು ಮತ್ತು ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ) ಮಸೂದೆ -2025ರ ಕರಡು ಸಿದ್ಧಪಡಿಸಿದೆ. ಈ ಕರಡು ಮಸೂದೆಯನ್ನು ಆಡಳಿ ಇಲಾಖೆಯಾದ ಗೃಹ ಇಲಾಖೆಯು ಮುಂದಿನ ಮುಂಗಾರ ಅಧಿವೇಶನದಲ್ಲಿ ಮಂಡಿಸಲಿದೆ ಎಂದು ತಿಳಿದುಬಂದಿದೆ.
ರೋಡ್ ಶೋ, ಜಾತ್ರೆ, ವಾಣಿಜ್ಯ ಕಾರ್ಯಕ್ರಮಕ್ಕೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮತಿಗೆ ಅರ್ಜಿ ಹಾಕಬೇಕು. ಒಂದು ವೇಳೆ ಕಾರ್ಯಕ್ರಮಕ್ಕೂ ಪೂರ್ವಾನುಮತಿ ಪಡೆಯದ ವ್ಯಕ್ತಿಗಳಿಗೂ ಶಿಕ್ಷೆ. ಅಲ್ಲದೇ ಕಾರ್ಯಕ್ರಮಗಳಲ್ಲಿ ಗಲಾಟೆ, ಅಹಿತಕರ ಘಟನೆ, ಜೀವ ಹಾನಿ, ಸಾವು ನೋವಿಗೆ ಕಾರ್ಯಕ್ರಮದ ಆಯೋಜಕರೇ ಜವಾಬ್ದಾರರು. ಗಾಯಾಳು, ಮೃತರ ಕುಟುಂಬಕ್ಕೆ ಪರಿಹಾರ ನೀಡದಿದ್ರೆ ಆಯೋಜಕರ ಆಸ್ತಿ ಹರಾಜು ಮಾಡುವ ಮೂಲಕ ಪರಿಹಾರ ವಸೂಲಿ ಮಾಡಲಾಗುತ್ತದೆ. ಇನ್ನು ಶಾಂತಿ ಭಂಗ ತರುವ ಮುನ್ಸೂಚನೆ ಇದ್ದರೆ ಕಾರ್ಯಕ್ರಮ ನಿಷೇಧ ಮಾಡಬೇಕು.
ಇನ್ನು ಈ ಕಾನೂನು ಜಾರಿಗೆ ಬಂದರೆ ಬೃಹತ್ ಕಾರ್ಯಕ್ರಮ ಆಯೋಜಿಸಿ ಕಾಲ್ತುಳಿದಂಥ ಘಟನೆ ಸಂಭವಿಸಿ ಸಾವು-ನೋವು, ದೈಹಿಕವಾಗಿ ಗಾಯಕ್ಕೆ ಕಾರಣರಾದರೆ, ಕಾರ್ಯಕ್ರಮ ಆಯೋಜಕರು ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಲ್ಲದೇ 5 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಜತೆಗೆ ಇಂತಹ ಘಟನೆಯು ಜಾಮೀನು ರಹಿತ ಪ್ರಕರಣ ಎಂದು ಪರಿಗಣಿಸಲು ಮತ್ತು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ವಿಚಾರಣೆಗೆ ಒಳಪಡಿಸಲು ಉದ್ದೇಶಿತ ಕಾನೂನು ಅವಕಾಶ ಕಲ್ಪಿಸಿದೆ.
ಇನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ನಿಬಂಧನೆಗಳಿಗೆ ಯಾವುದೇ ಧಕ್ಕೆ ಆಗದಂತೆ ಜಿಲ್ಲಾ ಮಾಜಿಸ್ಟ್ರೇಟ್ ಆಗಿರುವ ಜಿಲ್ಲಾಧಿಕಾರಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿನ ಯಾವುದೇ ಸ್ಥಳದಲ್ಲಿ ಈ ಯಾಕ್ದೆಯ ನಿಬಂಧನೆಗಳ ಅಡಿಯಲ್ಲಿ ವಿವಿಧ ಗುಂಪುಗಳು, ಜಾತಿಗಳು ಅಥವಾ ಸಮುದಾಯಗಳ ಸದಸ್ಯರ ನಡುವೆ ಶಾಂತಿ ಭಂಗ ಅಥವಾ ಭಿನ್ನಾಭಿಪ್ರಾಯ ಸೃಷ್ಟಿಯಾಗುವ ಭೀತಿ ಇದೆ ಎಂದು ಗೊತ್ತಾದರೆ, ಲಿಖಿತ ಆದೇಶದ ಮೂಲಕ ಕಾರ್ಯಕ್ರಮ ನಿಷೇಧಿಸಲು ಈ ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ