ಹುಬ್ಬಳ್ಳಿ: ದೇಶದಾದ್ಯಂತ ಕೊರೊನಾ ಎರಡನೇ ಅಲೆ ಅತಿ ವೇಗವಾಗಿ ಪ್ರಸರಣವಾಗುತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದೆ. ಇನ್ನು ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ಕೂಡ ಏರಿಕೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಹೀಗಿರುವಾಗಲೇ ಹಲವೆಡೆ ಆಕ್ಸಿಜನ್ ಕೊರತೆ, ವೆಂಟಿಲೇಟರ್ ಬೆಡ್ ಇಲ್ಲ ಎನ್ನುವ ಕೂಗು ಕೇಳಿ ಬಂದಿದ್ದು. ಹುಬ್ಬಳಿಯಲ್ಲೂ ಕೂಡ ಸದ್ಯ ಇಂತಹದ್ದೆ ಸಮಸ್ಯೆ ಎದುರಾಗಿದೆ.
ಈ ಆತಂಕ್ಕೆ ಪ್ರಮುಖ ಕಾರಣ ಹುಬ್ಬಳ್ಳಿಯ ಗೋಕುಲ ರಸ್ತೆಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಎಂಟು ಗಂಟೆ ಸುಮಾರಿಗೆ ಚಿಕಿತ್ಸೆ ಪಡೆಯುತ್ತಿದ್ದ ಐದು ಕೊರೊನಾ ರೋಗಿಗಳು ಒಮ್ಮೆಲೆ ಮೃತಪಟ್ಟಿದ್ದಾರೆ. ಅಂದಹಾಗೇ ಕಳೆದ ನಾಲ್ಕೈದು ದಿನಗಳಿಂದ ಕೊರೊನಾ ಪಾಸಿಟಿವ್ ಆಗಿ ಚಿಕಿತ್ಸೆ ಪಡೆಯುತ್ತಿದ್ದ, ಐದು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹಿಗಾಗೇ ಅವರನ್ನ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಸಂಜೆಯಾಗುತ್ತಿದ್ದಂತೆ ಐಸಿಯುನಲ್ಲಿದ್ದ ಐದು ಜನ ಏಕಾಎಕಿ ಪ್ರಾಣ ಬಿಟ್ಟಿದ್ದಾರೆ.
ಮೃತ ಸಂಬಂಧಿಕರು ಆಸ್ಪತ್ರೆಯವರನ್ನ ಕೇಳಿದರೆ ಆಕ್ಸಿಜನ್ ಸಮಸ್ಯೆಯಾಗಿದೆ ಎನ್ನುವ ಉತ್ತರ ನೀಡಿದ್ದಾರೆ. ಇನ್ನು ಮೃತ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಬಂದು ಅಳಲು ಹೇಳಿಕೊಳ್ಳಲು ಪ್ರಾರಂಭ ಮಾಡಿದ ತಕ್ಷಣ ಆಸ್ಪತ್ರೆಯ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೂ ಕುಟುಂಬಸ್ಥರು ಮಾತ್ರ ಆಕ್ಸಿಜನ್ ಇಲ್ಲದೆ ಇರುವುದರಿಂದಲೇ ಒಮ್ಮೆಲೆ ಐವರ ಸಾವಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತರನ್ನ ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿ ವಾಣಿ ಜನ್ನು (51), ಶಿರಸಿಯ ವಿನಯಾ ನಾಯಕ (47),
ಬಾಲಚಂದ್ರ ಡಿ. (61) , ದೇಸಾಯಿಗೌಡ ಪಾಟೀಲ (59), ಮಾಜಿ ಜಿಪಂ ಹಾಗೂ ಪಾಲಿಕೆ ಸದಸ್ಯ
ಸುಹಾಷ್೯ ದ್ರೋಣಾವತ (39) ಎಂದು ಗುರುತಿಸಲಾಗಿದೆ. ಎಲ್ಲರ ಮೃತದೇಹವನ್ನ ಕೊರೊನಾ ಪ್ರೊಟೊಕಾಲ್ ಪ್ರಕಾರ ಅಂತ್ಯಸಂಸ್ಕಾರಕ್ಕೆ ಕಳುಹಿಸಲಾಯಿತು. ಆದರೆ ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ್ ಮಾತ್ರ ಆಕ್ಸಿಜನ್ ತೊಂದರೆಯಿಂದ ಸಾವಾಗಿದೆ ಎನ್ನುವುದನ್ನು ಅಲ್ಲಗೆಳೆಯುತ್ತಿದ್ದಾರೆ.
ಐವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೆ ಕೊರೊನಾದಿಂದಲೇ ಮೃತಪಟ್ಟಿದ್ದಾರೆ. ಲೈಫ್ ಲೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವ 30 ಜಂಬೂ ಸಿಲಿಂಡರ್ ಇವೆ. ಇನ್ನು 2 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಕಂಟೇನರ್ ಇದ್ದು, ನೈಸರ್ಗಿಕವಾಗಿ ಗಾಳಿ ಬಳಸಿಕೊಂಡು ಪ್ರತಿ ನಿಮಿಷಕ್ಕೆ 85 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದಿಸುವ (O2 ಕಾನ್ಸ್ ನ್ ಟ್ರೇಟೆಡ್) ಘಟಕವನ್ನು ಲೈಫ್ ಲೈನ್ ಆಸ್ಪತ್ರೆ ಹೊಂದಿದೆ. ಮೃತರ ಸಾವಿನ ಬಗ್ಗೆ ನಿಖರ ಕಾರಣ ತಿಳಿಯಲು ಡೆತ್ ಆಡಿಟ್ ಕಮೀಟಿ ರಚನೆ ಮಾಡಿದ್ದು, ಅದರ ರಿರ್ಪೊರ್ಟ್ ಬರಲಿ ಎಂದು ಧಾರವಾಡ ಡಿಹೆಚ್ ಓ ಡಾ.ಯಶವಂತ ಮದೀನಕರ್ ಹೇಳಿದ್ದಾರೆ.
ಪ್ರತಿ ಐಸಿಯುನಲ್ಲಿ ಆಕ್ಸಿಜನ್ ಕೊರತೆ ಉಂಟಾದಲ್ಲಿ ಎಚ್ಚರಿಸಲು ಅಲಾರಮಿಂಗ್ ಸಿಸ್ಟಮ್ ಸಹ ಅಳವಡಿಸಲಾಗಿದೆ. ಆದ್ದರಿಂದ ಇಂದು ಸಂಭವಿಸಿರುವ ಕೊವಿಡ್ ಸೋಂಕಿತರ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಡಿಹೆಚ್ ಓ ಡಾ.ಯಶವಂತ ಮದೀನಕರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಸದ್ಯ ಪ್ರಾಥಮಿಕ ಮಾಹಿತಿ ಪ್ರಕಾರ ಆಕ್ಸಿಜನ್ ಕೊರತೆಯಿಲ್ಲ ಎಂದು ಷರಾ ಬರೆದಿದ್ದು, ಅದನ್ನೆ ವರದಿ ರೂಪದಲ್ಲಿ ಸಿದ್ದ ಪಡಿಸುರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಮೃತ ಕುಟುಂಬಸ್ಥರು ಮಾಡುತ್ತಿರುವ ಆರೋಪಕ್ಕೆ ಜಿಲ್ಲಾಡಳಿತ ಉತ್ತರಿಸಬೇಕಿದೆ ಎನ್ನುವುದು ಮಾತ್ರ ನಿಜ.
ಇದನ್ನೂ ಓದಿ:
ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ ಯತ್ನ ಪ್ರಕರಣ; ಕಲಬುರಗಿಯಲ್ಲಿ ಅಧಿಕಾರಿಗಳಿಂದ ದಿಢೀರ್ ದಾಳಿ
Published On - 5:29 pm, Wed, 5 May 21