ಜನವರಿ 23 ರಂದು 545 ಪಿಎಸ್​ಐ ಮರು ಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ

| Updated By: Rakesh Nayak Manchi

Updated on: Jan 20, 2024 | 7:09 PM

545 PSI Recruitment Re-Examination: 545 ಪಿಎಸ್​ಐ ನೇಮಕಾತಿ ಮರು ಪರೀಕ್ಷೆ ಜನವರಿ 23 ರಂದು ಬೆಂಗಳೂರು ನಗರದಲ್ಲಿ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಲಿಖಿತ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಿದ್ದಾರೆ. ಪರೀಕ್ಷಾ ಅಕ್ರಮಗಳು ನಡೆಯಬಾರದೆಂದು ಪೊಲೀಸ್ ಆಯುಕ್ತರು 144 ಸೆಕ್ಷನ್ ಜಾರಿ ಮಾಡಿದ್ದಾರೆ.

ಜನವರಿ 23 ರಂದು 545 ಪಿಎಸ್​ಐ ಮರು ಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ
ಜನವರಿ 23 ರಂದು 545 ಪಿಎಸ್​ಐ ಮರು ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ
Follow us on

ಬೆಂಗಳೂರು, ಜ.20: ನಗರದಲ್ಲಿ ಜನವರಿ 23 ರಂದು 545 ಪಿಎಸ್​ಐ ನೇಮಕಾತಿ ಲಿಖಿತ ಮರು ಪರೀಕ್ಷೆ (545 PSI Recruitment Re-Examination) ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಿದ್ದಾರೆ.

545 ಪಿಎಸ್​ಐ ಮರು ಪರೀಕ್ಷೆ ಬೆಂಗಳೂರು ನಗರದಲ್ಲಿ ಮಾತ್ರ ನಡೆಯಲಿದ್ದು, ಒಟ್ಟು 117 ಕೇಂದ್ರಗಳಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 7 ಗಂಟೆಯಿಂದ ಪರೀಕ್ಷೆ ಮುಗಿಯುವವರೆಗೆ ಜೆರಾಕ್ಸ್‌ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಪಿಎಸ್​ಐ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ

545 ಪಿಎಸ್​ಐ ಮರು ಪರೀಕ್ಷೆಗೆ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಲ್ಲಾ ತಯಾರಿಗಳನ್ನು ನಡೆಸುತ್ತಿದ್ದು, ಅಭ್ಯರ್ಥಿಗಳು ಕೂಡ ಪರೀಕ್ಷೆ ಬರೆಯಲು ಸಜ್ಜಾಗಿದ್ದರು. ಈ ನಡುವೆ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: 545 ಪಿಎಸ್‌ಐ ನೇಮಕಾತಿ ಮರುಪರೀಕ್ಷೆಯ ಮಾರ್ಗಸೂಚಿ ಬಿಡುಗಡೆ, ಇಲ್ಲಿದೆ ಸಂಪೂರ್ಣ ವಿವರ

ಪ್ರಶ್ನೆ ಪತ್ರಿಕೆ ಲೀಕ್ ಆರೋಪ ಸಂಬಂಧ ಇಂಟೆಲಿಜೆನ್ಸ್ ವಿಭಾಗದ ಸಬ್​ ಇನ್ಸ್​ಪೆಕ್ಟರ್​ ಆಗಿರುವ ಲಿಂಗಯ್ಯ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಸಂಬಂಧ ಅಭ್ಯರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ. ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು, ಇನ್ಸ್​ಪೆಕ್ಟರ್​ ಲಿಂಗಯ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಪ್ರಕರಣದ ಬಗ್ಗೆ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ, ಮಾಹಿತಿ ಕಲೆ ಹಾಕಲು ಫೇಕ್ ಆಡಿಯೋ ಮಾಡಿದ್ದೆ ಅಂತ ಪಿಎಸ್ಐ ಲಿಂಗಯ್ಯ ಹೇಳಿದ್ದಾರೆ. ಆಡಿಯೋ ಸತ್ಯನಾ, ಅಲ್ವಾ ಅನ್ನೋದರ ಬಗ್ಗೆ ಸಿಸಿಬಿ ತನಿಖೆ ಮಾಡುತ್ತಿದೆ. ಮುಂಜಾಗ್ರತಾ ಕ್ರಮ ಕೈಗೊಂಡು ಪಿಎಸ್​ಐ ನೇಮಕ ಪರೀಕ್ಷೆ ನಡೆಸುತ್ತೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ