ಬೆಂಗಳೂರು, (ಫೆಬ್ರವರಿ 13): ಕರ್ನಾಟಕ ರಾಜ್ಯವನ್ನು ಡ್ರಗ್ಸ್ (Drugs)ಮುಕ್ತ ಕರ್ನಾಟಕವನ್ನಾಗಿಸಲು ನಮ್ಮ ಸರಕಾರ ಸಂಕಲ್ಪ ತೊಟ್ಟಿದ್ದು, ಅದರಂತೆ ಡ್ರಗ್ಸ್ ಮುಕ್ತ ನಾಡನ್ನಾಗಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ 6764 ಪ್ರಕರಣಗಳನ್ನು(Drug Cases )ದಾಖಲಿಸಲಾಗಿದ್ದು, 142 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ ಪಡಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ತಿಳಿಸಿದರು.
ಇಂದು ಸದನದಲ್ಲಿ ಶಾಸಕ ರವಿಕುಮಾರಗೌಡ ಗಣಿಗ ಅವರ ಗಮನಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಜಿ.ಪರಮೇಶ್ವರ್ , ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ 6764 ಪ್ರಕರಣಗಳನ್ನು ದಾಖಲಿಸಲಾಗಿದೆ. 9645 ಕೆಜಿ ಗಾಂಜಾ ಹಾಗೂ 233 ಕೆಜಿ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಈ ಡ್ರಗ್ಸ್ ಮೌಲ್ಯವೇ 142 ಕೋಟಿ ರೂ.ಗಳಾಗಿದೆ ಎಂದು ಮಾಹಿತಿ ನೀಡಿದರು.
ಡ್ರಗ್ಸ್ ವಿಷಯವನ್ನು ನಮ್ಮ ಸರಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಎಲ್ಲ ಜಿಲ್ಲೆಯ ಎಸ್ಪಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. 102 ಜನ ವಿದೇಶಿಯರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. 245 ಜನ ವಿದೇಶಿಯರನ್ನು ಗಡಿಪಾರು ಮಾಡಲಾಗಿದೆ ಎಂದು ಅವರು ವಿವರಿಸಿದರು.
ಬೆಟ್ಟಿಂಗ್ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು,ಇದನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರಕಾರಗಳು ಚರ್ಚಿಸಿ ಕಠಿಣ ಕಾಯ್ದೆ ರೂಪಿಸಬೇಕಾದ ಅಗತ್ಯತೆ ಇದೆ. ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು,ರಾಜ್ಯ ಸರಕಾರದಿಂದಲೂ ಈ ಬೆಟ್ಟಿಂಗ್ ಭೂತಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾನೂನು ರೂಪಿಸಲಾಗುವುದು. ಬೆಟ್ಟಿಂಗ್ ದಂಧೆಕೊರರಿಗೆ ಈಗ ನಮ್ಮಲ್ಲಿ ಲಭ್ಯವಿರುವ ಕಾನೂನುಗಳಡಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಎಂದು ಹೇಳಿದ ಗೃಹ ಸಚಿವ ಪರಮೇಶ್ವರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ