ವಿಧಾನಸಭೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಸುದ್ದು; ಬೆಟ್ಟಿಂಗ್ ಬ್ಯಾನ್ಗೆ ಪಕ್ಷಾತೀತವಾಗಿ ಒತ್ತಾಯಿಸಿದ ಶಾಸಕರು
ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಇಂದು ಸದ್ದು ಮಾಡಿದೆ. ದಂಧೆಕೋರರು ಮೂರು ಪಕ್ಷಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ, ಕ್ರಿಕೆಟ್ ಬೆಟ್ಟಿಂಗ್ ಅನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು ಎಂದು ಪಕ್ಷಾತೀತವಾಗಿ ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸಭೆ, ಫೆ.13: ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ (Cricket Betting) ದಂಧೆ ಇಂದು ವಿಧಾನಸಭೆ ಅಧಿವೇಶನದಲ್ಲೂ (Karnataka Assembly Session) ಸದ್ದು ಮಾಡಿದೆ. ದಂಧೆಕೋರರು ಮೂರು ಪಕ್ಷಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ (Ravikumar Ganiga) ಹೇಳಿದ್ದಾರೆ. ಅಲ್ಲದೆ, ಕ್ರಿಕೆಟ್ ಬೆಟ್ಟಿಂಗ್ ಅನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು ಎಂದು ಪಕ್ಷಾತೀತವಾಗಿ ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದು, ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G.Parameshwara) ಭರವಸೆ ನೀಡಿದ್ದಾರೆ.
ಕಲಾಪದ ವೇಳೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರು ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಸರ್ಕಾರದ ಗಮನ ಸೆಳೆದರು. ಕ್ರಿಕೆಟ್ ಬೆಟ್ಟಿಂಗ್ ರೌಡಿಸಂ ಅನ್ನು ಜಾಸ್ತಿ ಮಾಡುತ್ತಿದೆ. ಕ್ರಿಕೆಟ್ ಬುಕ್ಕಿಗಳು ಮೂರು ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದಾರೆ. ಮಂಡ್ಯದಲ್ಲಿ ಕ್ರಿಕೆಟ್ ಬುಕ್ಕಿಯನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಅವತ್ತು ಮಾಜಿ ಸಿಎಂ ಮಂಡ್ಯಕ್ಕೆ ಬಂದಿದ್ದರು, ಅವತ್ತು ಅವರು ಪೊಲೀಸರಿಗೆ ಪೋನ್ ಮಾಡಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಬಂಧಿಸಿದ್ದೀರಿ, ಬಿಡುತ್ತೀರಾ ಇಲ್ವಾ ಅಂತಾ ಕೇಳಿದ್ದರು ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಮಂಡ್ಯದಲ್ಲಿ ಮಾತ್ರ ಅಲ್ಲ, ಬೆಂಗಳೂರಿನಲ್ಲಿ ಕೂಡಾ ಇದೆ. ಪೊಲೀಸರಿಗೆ ಅವರು ಬಗ್ಗುವುದೇ ಇಲ್ಲ. ಅವರು ಎಷ್ಟು ಪ್ರಭಾವಿಗಳು ಎಂದರೆ ಸದನದಲ್ಲಿ ಇರುವವರನ್ನೂ ನಮ್ಮ ಬಳಿ ಕರೆದುಕೊಂಡು ಬರುತ್ತಾರೆ. ನಾನು ಗೃಹ ಸಚಿವನಾಗಿದ್ದಾಗ ಸದನದಲ್ಲಿ ಇದ್ದವರನ್ನೇ ನನ್ನ ಬಳಿ ಕರೆದುಕೊಂಡು ಬಂದಿದ್ದರು ಎಂದರು.
ಇದನ್ನೂ ಓದಿ: ಗದಗ: ಮರಳು ದಂಧೆಗೆ ಕಾಂಗ್ರೆಸ್ ಮುಖಂಡ ಡಾ. ಶಶಿಧರ್ ಹಟ್ಟಿ ಬಲಿ
ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್, ರಮ್ಮಿ ಗೇಮ್ ಅತ್ಯಂತ ಅಪಾಯಕಾರಿಯಾಗಿದೆ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳಿದ್ದಾರೆ. ಪ್ರತಿಯೊಂದು ತಾಲೂಕಿನಲ್ಲಿ ಬೆಟ್ಟಿಂಗ್ ನಡೆಸುತ್ತಾರೆ. ಸಚಿವರು ಆದೇಶ ಮಾಡಿದರೆ ಸಂಜೆಯೊಳಗೆ ಬಿಲ ಸೇರುತ್ತಾರೆ. ಹೀಗೆ ಬಿಟ್ಟರೆ ಕ್ರಿಕೆಟ್ ಬೆಟ್ಟಿಂಗ್ ನಡೆಸುವ 50 ಜನ ಶಾಸಕರಾಗುತ್ತಾರೆ. ಬೆಟ್ಟಿಂಗ್ ಮಟ್ಟ ಹಾಕಿದರೆ ಗೃಹ ಸಚಿವ ಪರಮೇಶ್ವರ್ ದೇವರಾಗುತ್ತಾರೆ ಎಂದರು.
ಅಲ್ಲದೆ, ಕ್ರಿಕೆಟ್ ಬೆಟ್ಟಿಂಗ್ ಮತ್ತು ಮೊಬೈಲ್ ಆನ್ ಲೈನ್ ಗೇಮ್ಗಳ ವಿರುದ್ಧ ಕೂಡಾ ಕ್ರಮ ತೆಗೆದುಕೊಳ್ಳುವಂತೆ ಸದನದಲ್ಲಿ ಪಕ್ಷಾತೀತವಾಗಿ ಆಗ್ರಹಿಸಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್, ಬೆಟ್ಟಿಂಗ್ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಖಂಡಿತವಾಗಿ ಹೊಸ ಕಾನೂನನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ