ರಾಜ್ಯದಲ್ಲಿ ಮಿತಿ ಮೀರಿದ ನದಿ ಮಾಲಿನ್ಯ: ಜನ ಕುಡಿತೀರೋ ನೀರು ಹೇಗಿದೆ ಗೊತ್ತಾ?

ರಾಜ್ಯದ ಬಹುತೇಕ ನದಿಗಳು ತೀವ್ರವಾಗಿ ಮಾಲಿನ್ಯಗೊಂಡಿದ್ದು, ಕುಡಿಯುವ ನೀರಿಗೆ ಗಂಭೀರ ಅಪಾಯ ತಂದೊಡ್ಡಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಶುದ್ಧೀಕರಿಸದ ತ್ಯಾಜ್ಯ ನೀರು ನದಿಗಳನ್ನು ಸೇರುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ಅರ್ಕಾವತಿ, ಕಾವೇರಿ, ಕೃಷ್ಣಾ ಸೇರಿದಂತೆ ಹಲವು ನದಿಗಳ ನೀರು ಕಲುಷಿತಗೊಂಡಿದ್ದು, ಇದೇ ನೀರನ್ನು ಹಲವು ನಗರ, ಪಟ್ಟಣಗಳಿಗೆ ಪೂರೈಸಲಾಗುತ್ತಿದೆ ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ.

ರಾಜ್ಯದಲ್ಲಿ ಮಿತಿ ಮೀರಿದ ನದಿ ಮಾಲಿನ್ಯ: ಜನ ಕುಡಿತೀರೋ ನೀರು ಹೇಗಿದೆ ಗೊತ್ತಾ?
ನದಿ ಮಾಲಿನ್ಯ

Updated on: Dec 15, 2025 | 11:44 AM

ಬೆಂಗಳೂರು, ಡಿಸೆಂಬರ್​​ 15: ರಾಜ್ಯದ ಬಹುತೇಕ ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ಸುದ್ದಿ ಇತ್ತಿಚೆಗಷ್ಟೇ ಸದ್ದು ಮಾಡಿತ್ತು. ಈ ನಡುವೆ ಮತ್ತೊಂದು ಆತಂಕಕಾರಿ ಮಾಹಿತಿ ಬಹಿರಂಗೊಂಡಿದೆ, ರಾಜ್ಯದಾದ್ಯಂತ ಒಟ್ಟು 693.75 ಕಿಲೋಮೀಟರ್ ಉದ್ದದ ನದಿಗಳ ಹರಿವು ಮಾಲಿನ್ಯಗೊಂಡಿದ್ದು, ಕಲುಷಿತಗೊಂಡ ಈ ನದಿಗಳಿಂದಲೇ ನಗರಗಳು ಹಾಗೂ ಪಟ್ಟಣಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂಬುದೂ ಗೊತ್ತಾಗಿದೆ.

ಯಾವ್ಯಾವ ನದಿಗಳು ಮಲಿನ?

ನಗರ ಮತ್ತು ಗ್ರಾಮೀಣ ಪ್ರದೇಶಗಳ ಮನೆಗಳಿಂದ ಹೊರಬರುವ ಶುದ್ಧೀಕರಿಸದ ತ್ಯಾಜ್ಯ ನೀರು ನೇರವಾಗಿ ನದಿಗಳಲ್ಲಿ ಸೇರುತ್ತಿರುವುದರಿಂದ ನೀರಿನ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಅರ್ಕಾವತಿ, ಲಕ್ಷಣ ತೀರ್ಥ, ತುಂಗಭದ್ರಾ, ಭದ್ರಾ, ತುಂಗಾ, ಕಾವೇರಿ, ಕಬಿನಿ, ಕಾಗಿನಾ, ಕೃಷ್ಣಾ, ಶಿಂಶಾ, ಭೀಮಾ ಮತ್ತು ನೇತ್ರಾವತಿ ನದಿಗಳು ಮಾಲಿನ್ಯಗೊಂಡಿವೆ.

ಅರ್ಕಾವತಿ ನದಿ ಅತ್ಯಂತ ಕಲುಷಿತ

ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಬಗ್ಗೆ ಮಾಹಿತಿ ನೀಡಿದ್ದು, ಬಯೋಕ್ಯಾಮಿಕಲ್ ಆಕ್ಸಿಜನ್ ಡಿಮ್ಯಾಂಡ್ ಮಟ್ಟದ ಆಧಾರದಲ್ಲಿ ನದಿಗಳನ್ನು P1 ರಿಂದ P5 ವರೆಗೆ ಐದು ವರ್ಗಗಳಾಗಿ ವಿಂಗಡಿಸಲಾಗಿದೆ. P1 ಅತ್ಯಧಿಕ ಮಾಲಿನ್ಯಗೊಂಡ ವರ್ಗ. ಲೀಟರ್‌ಗೆ 30 ಮಿಲಿಗ್ರಾಂಗಿಂತ ಹೆಚ್ಚು BOD ಇರುವ ನದಿಗಳು P1 ವರ್ಗಕ್ಕೆ ಸೇರುತ್ತವೆ. ಅರ್ಕಾವತಿ ನದಿ P1 ವರ್ಗದಲ್ಲಿದ್ದರೆ, P2 ಮತ್ತು P3 ವರ್ಗಗಳಲ್ಲಿ ಯಾವುದೇ ನದಿಗಳಿಲ್ಲ. ತುಂಗಭದ್ರಾ, ಭದ್ರಾ ಮತ್ತು ಶಿಂಶಾ ನದಿಗಳು P4 ವರ್ಗದಲ್ಲಿದ್ದು, ಉಳಿದ ಎಂಟು ಮಾಲಿನ್ಯಗೊಂಡ ನದಿಗಳು P5 ವರ್ಗಕ್ಕೆ ಸೇರಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೃಷ್ಣೆ, ಕಾವೇರಿ ಸೇರಿ ಕರ್ನಾಟಕದ 12 ನದಿಗಳ ನೀರು ಅಸುರಕ್ಷಿತ! ಮಾಲಿನ್ಯ ನಿಯಂತ್ರಣ ‌ಮಂಡಳಿ ಆಘಾತಕಾರಿ ವರದಿ

ನಗರಸಭೆಗಳು, ಪಟ್ಟಣಗಳು ಹಾಗೂ ನದಿ ತೀರದ ಗ್ರಾಮಗಳಿಂದ ಹೊರಬರುವ ಗೃಹ ತ್ಯಾಜ್ಯ ನೀರು ಕನಿಷ್ಠ 17 ನದಿಗಳಿಗೆ ಬಂದು ಸೇರುತ್ತಿರುವ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮಾಹಿತಿ ನೀಡಿದೆ. ನದಿಗಳು ಕಲುಷಿತಗೊಳ್ಳಲು ಇದೇ ಪ್ರಮುಖ ಕಾರಣ. ಮಂಡ್ಯ, ರಾಮನಗರ, ವಿಜಯಪುರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಾಲಿನ್ಯಗೊಂಡ ಈ ನದಿಗಳಿಂದಲೇ ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಮಾಲಿನ್ಯಗೊಂಡ ನದಿಗಳನ್ನೇ ನೀರು ಪೂರೈಕೆಗೆ ಅವಲಂಬಿಸಿವೆ. 2022–23ರಲ್ಲಿ ದಕ್ಷಿಣ ಪಿನಾಕಿನಿ, ಅಘನಾಶಿನಿ, ಶರಾವತಿ ಮತ್ತು ಗಂಗಾವಳಿ ನದಿಗಳನ್ನೂ ಮಾಲಿನ್ಯಗೊಂಡ ನದಿಗಳೆಂದು CPCB ಗುರುತಿಸಿತ್ತು. ಆದರೆ ರಾಜ್ಯ ಸರ್ಕಾರವು ಈ ನದಿಗಳು ಮಾಲಿನ್ಯಗೊಂಡಿಲ್ಲವೆಂದು ತಿಳಿಸಿ, ಪಟ್ಟಿಯಿಂದ ಹೆಸರು ತೆಗೆಯುವಂತೆ ಪತ್ರ ಬರೆದಿದೆ ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:43 am, Mon, 15 December 25