ಕೃಷ್ಣೆ, ಕಾವೇರಿ ಸೇರಿ ಕರ್ನಾಟಕದ 12 ನದಿಗಳ ನೀರು ಅಸುರಕ್ಷಿತ! ಮಾಲಿನ್ಯ ನಿಯಂತ್ರಣ ಮಂಡಳಿ ಆಘಾತಕಾರಿ ವರದಿ
ಜೀವನದಿ ಕಾವೇರಿ ಸೇರಿದಂತೆ ಜನರ ಜೀವನಾಡಿ ಎಂದು ಕರೆಸಿಕೊಳ್ಳುವ ಕರ್ನಾಟಕದ 12 ನದಿಗಳ ನೀರು ಅಸುರಕ್ಷಿತ ಎಂಬ ವರದಿ ಬಹಿರಂಗವಾಗಿದೆ. ಅದರಲ್ಲಿ ಉತ್ತರ ಕರ್ನಾಟಕ ಜನರ ಜೀವನದಿ ಕೃಷ್ಣಾ ನದಿಕೂಡ ಸೇರಿದೆ. ಕೃಷ್ಣಾ ನದಿ ನೀರು ಕೂಡ ಕುಡಿಯಲು ಯೋಗ್ಯವಲ್ಲ ಎಂಬ ವರದಿ ಆಘಾತ ಮೂಡಿಸಿದೆ.

ಬಾಗಲಕೋಟೆ, ಅಕ್ಟೋಬರ್ 25: ಜನರು ಕುಡಿಯಲು ಉಪಯೋಗಿಸುವ ಕರ್ನಾಟಕದ 12 ನದಿಗಳ ನೀರಿನ ಗುಣಮಟ್ಟದ ಕುರಿತು ಆಘಾತಕಾರಿ ವರದಿ ಹೊರಬಿದ್ದಿದೆ. ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (Karnataka State Pollution Control Board) ನೀಡಿದ ವರದಿ ಬೆಚ್ಚಿ ಬೀಳಿಸುವಂತಿದೆ. ಜೀವನದಿ ಕಾವೇರಿ (Cauvery River), ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿ (Krishna River) ನೀರು ಸೇರಿದಂತೆ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ತಿಳಿಸಿದೆ. ವರದಿಯಲ್ಲಿ ಕೃಷ್ಣಾ ನದಿ ಸಿ ದರ್ಜೆಯಲ್ಲಿ ಗುರುತಿಸಿಕೊಂಡಿರುವುದು ಉತ್ತರಕರ್ನಾಟಕ, ಹೈದರಾಬಾದ್ ಕರ್ನಾಟಕದ ಕೃಷ್ಣಾ ತೀರದ ಜನರಿಗೆ ಆತಂಕ ಮೂಡಿಸಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಕಲ್ಮಶ ನೀರು, ಜನರು ಬಳಸಿ ಬಿಡುವ ಮಲಿನ ನೀರು, ಚರಂಡಿ ನೀರು ಹಳ್ಳ ಕೊಳ್ಳಗಳ ಮೂಲಕ ಕೃಷ್ಣಾ ನದಿಗೆ ಸೇರ್ಪಡೆಯಾಗುತ್ತಿದೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ, ರಾಯಚೂರು, ಯಾದಗಿರಿ ಜನರ ಜೀವನಾಡಿ ಕೃಷ್ಣಾ ನದಿಯೂ ಕಲುಷಿತವಾಗಿದೆ. ಸ್ವಚ್ಛತೆಯಲ್ಲಿ ಕೃಷ್ಣಾ ನದಿ ಸಿ ದರ್ಜೆಗೆ ಸೇರಿದ್ದು , ಶುದ್ದೀಕರಣ ಮಾಡಿಯೇ ನೀರು ಕುಡಿಯಬೇಕು. ಇಲ್ಲದಿದ್ದರೆ ಅಪಾಯ ಖಚಿತ ಎಂಬುದು ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷಾ ವರದಿಯಿಂದ ಗೊತ್ತಾಗಿದೆ.
ಬಾಗಲಕೋಟೆ ಜಿಲ್ಲೆಯ 205 ಹಳ್ಳಿಹಳಿಗೆ ಕೃಷ್ಣಾ ನದಿನೀರು ಜೀವಜಲವಾಗಿದೆ. ಈ ಹಳ್ಳಿಗಳ ಜನರ ದಾಹ ನೀಗಿಸುವ ಕೃಷ್ಣಾ ನದಿ ಕಲ್ಮಶವಾಗುತ್ತಿದೆ. ನೋಡಲು ತಿಳಿಯಾಗಿ ಕಂಡರೂ ಅಗೋಚರವಾಗಿರುವ ಕಲ್ಮಶ ಜನರ ದೇಹ ಸೇರುತ್ತಿದೆ ಎಂಬ ಸಂಶಯ ಶುರುವಾಗಿದೆ.
ಕೃಷ್ಣಾ ನದಿಯ ನೀರು ಶುದ್ದೀಕರಣ: ಟಿವಿ9 ರಿಯಾಲಿಟಿ ಚೆಕ್
ಕೃಷ್ಣಾ ನದಿಯ ನೀರು ಶುದ್ದೀಕರಣ ಬಗ್ಗೆ ಟಿವಿ9 ರಿಯಾಲಿಟಿ ಚೆಕ್ ಮಾಡಿದ್ದು, ಜಿಲ್ಲೆಯ ಬೀಳಗಿ ತಾಲ್ಲೂಕಿನ ತೆಗ್ಗಿ ಗ್ರಾಮದಲ್ಲಿ ಜಾಕ್ವೆಲ್ ಪಂಪ್ ಹೌಸ್ನಲ್ಲಿ ಕೃಷ್ಣಾ ನದಿ ನೀರನ್ನು ಫಿಲ್ಟರ್ ಮಾಡಿಯೇ ಬೀಳಗಿ ಪಟ್ಟಣ ಹಾಗೂ ಸುತ್ತ ಹಳ್ಳಿಗೆ ಸರಬರಾಜು ಮಾಡಲಾಗುತ್ತಿದೆ. ಆದರೂ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಜನರಲ್ಲಿ ಭಯ ಹುಟ್ಟಿಸಿದೆ.
ಕೃಷ್ಣಾ ನದಿ ಎಲ್ಲೆಲ್ಲಿ ಹರಿಯುತ್ತದೆ?
ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾಬಲೇಶ್ವರ ವ್ಯಾಪ್ತಿಯಲ್ಲಿ ಹುಟ್ಟುವ ಕೃಷ್ಣಾ ನದಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು ಮಾರ್ಗವಾಗಿ ಆಂಧ್ರ ಪ್ರದೇಶ ಸೇರುತ್ತದೆ. ಮಹಾರಾಷ್ಟ್ರದಿಂದ ಒಟ್ಟು 1400 ಕಿಮೀ ಹರಿಯುವ ನದಿ ಮಹಾರಾಷ್ಟ್ರದಲ್ಲಿ 272 ಕಿಮೀ, ಕರ್ನಾಟಕದಲ್ಲಿ 483 ಕಿಮೀ ಹರಿಯುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡನೇ ಹಂತದಲ್ಲಿ 6 ಲಕ್ಷ ಹೆಕ್ಟೇರ್ ನೀರಾವರಿ, ಮೂರನೇ ಹಂತದಲ್ಲಿ 15 ಲಕ್ಷ ಎಕರೆಗೆ ನೀರಾವರಿ ಒದಗಿಸುವ ನದಿ ಇದಾಗಿದೆ.
ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ, ಬೆಂಗಳೂರಿಗೂ ಮಳೆ ಮುನ್ಸೂಚನೆ
ಒಟ್ಟಿನಲ್ಲಿ ಜೀವಜಲ ಅಸುರಕ್ಷಿತ ಎಂಬ ಆಘಾತಕಾರಿ ಅಂಶ ಜನರನ್ನು ಬೆಚ್ಚಿ ಬೀಳಿಸಿದೆ. ನದಿಗಳಿಗೆ ವಿಷಪ್ರಾಶನವಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.
