ಉತ್ತರ ಕನ್ನಡದ ನದಿ ತಿರುವು ಯೋಜನೆಗಳಿಗೆ ವಿರೋಧ ಯಾಕೆ?: ಪ್ರಮುಖ 11 ಕಾರಣ ಇಲ್ಲಿವೆ
ಉತ್ತರ ಕನ್ನಡದ ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆಗಳಿಗೆ ಭಾರೀ ವಿರೋಧ ವ್ಯಕ್ತವಾಗ್ತಿದ್ದು ಇದಕ್ಕೆ ಕಾರಣ ಏನು ಎಂಬುದನ್ನೂ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವಿವರಿಸಿದೆ. ಈ ಯೋಜನೆಗಳಿಂದ ನದಿಗಳಲ್ಲಿ ನೀರು ಕಡಿಮೆಯಾಗಿ ಪರಿಸರ ಸಮತೋಲನ ಕೆಡುತ್ತದೆ. ಜೀವವೈವಿಧ್ಯ ನಾಶ, ಭೂಕುಸಿತ, ಕರಾವಳಿ ಪ್ರದೇಶದಲ್ಲಿ ಉಪ್ಪುನೀರು ನುಗ್ಗುವಿಕೆ, ಮೀನುಗಾರಿಕೆ ಮತ್ತು ಕೃಷಿ ನಾಶವಾಗಲಿದೆ. ಸ್ಥಳೀಯರ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬೀಳುವುದರಿಂದ, ಯೋಜನೆ ಕೈಬಿಡುವಂತೆ ಸಮಿತಿ ಒತ್ತಾಯಿಸಿದೆ.

ಬೆಂಗಳೂರು, ಡಿಸೆಂಬರ್ 11: ಉತ್ತರ ಕನ್ನಡದ ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ಹಾಗೂ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗಳನ್ನು ಕೈಬಿಡುವಂತೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿತ್ತು. ಆ ಬೆನ್ನಲ್ಲೇ ಈ ಯೋಜನೆಗಳು ಯಾಕೆ ಬೇಡ ಎಂಬ ಬಗ್ಗೆ ಕಾರಣ ಸಮೇತ ವಿವರಣೆ ನೀಡಿದೆ.
1. ಹೆಚ್ಚುವರಿ ನೀರಿನ ಲಭ್ಯತೆ ಇರದಿರುವರು
ಬೇಡ್ತಿ-ಅಘನಾಶಿನಿ ನದಿಗಳಲ್ಲಿ ಜುಲೈನಿಂದ ಸಪ್ಟೆಂಬರ್ ತಿಂಗಳ ಮಳೆಗಾಲದ ಅವಧಿಯಲ್ಲಿ ಮಾತ್ರ ಮಳೆನೀರಿನ ಪ್ರವಾಹ ಇರುತ್ತದೆ. ಉಳಿದ ಒಂಬತ್ತು ತಿಂಗಳು ಇರುವ ನೀರಿನ ಹರಿವು ತೀರಾ ಕಡಿಮೆ, ಹೀಗಾಗಿ, ಹೆಚ್ಚುವರಿ ನೀರಿದೆ ಎಂಬ ಲೆಕ್ಕವೇ ತಪ್ಪು.
2. ಸ್ವಾಭಾವಿಕ ಪ್ರವಾಹ (Ecological Flow) ನಾಶ
ಬೇಡ್ತಿ ಹಾಗೂ ಅಘನಾಶಿನಿ ನದಿಗಳು ಉತ್ತರ ಕನ್ನಡ – ಅಲ್ಲಿಯ ಘಟ್ಟದ ಮೇಲಿನ ಹಾಗೂ ಕೆಳಗಿನ ಪ್ರದೇಶಗಳ ಜನವಸತಿ, ಕೃಷಿಭೂಮಿ, ಕಾಡು, ಗೋಮಾಳ, ಕೆರೆಗಳು ಇವಕ್ಕೆಲ್ಲ ನಿರಂತರ ನೀರು ಒದಗಿಸುವ ಜಲಮೂಲ. ಈ ಯೋಜನೆಗಳಿಂದ ಈ ನದಿಗಳಲ್ಲಿ ಹರಿಯಬೇಕಾದ ಕನಿಷ್ಠ ಸ್ವಾಭಾವಿಕ ಪ್ರವಾಹವೂ (Ecological Flow) ಕಣ್ಮರೆಯಾಗಿ, ಹೊಳೆ- ತೊರೆ-ಕೆರೆಗಳ ಅಂತರ್ಜಲ ಮರುಪೂರಣ ಕುಸಿಯುತ್ತದೆ. ಆಮೂಲಕ ನದಿಕಣಿವೆ ಪ್ರದೇಶಗಳಲ್ಲಿ ಗಂಭೀರ ನೀರಿನ ಕೊರತೆ ಉಂಟಾಗಲಿದೆ.
3. ಪಶ್ಚಿಮಘಟ್ಟ ಜೀವವೈವಿಧ್ಯ ನಾಶ ಹಾಗೂ ವನ್ಯ ಜೀವಿ-ಮಾನವ ಸಂಘರ್ಷ ಹೆಚ್ಚಳ
ದಕ್ಷಿಣಭಾರತ ಪರಿಸರ ಸುರಕ್ಷತೆ ಹಾಗೂ ಜಲಮೂಲ ತಾಣವಾದ ಪಶ್ಚಿಮಘಟ್ಟದ ಹೃದಯಭಾಗದಂತಿರುವ ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ಹಾಗೂ ಅಘನಾಶಿನಿ ನದಿ ತಪ್ಪಲುಗಳಲ್ಲಿ ಸುರಂಗಗಳು, ಕಾಲುವೆಗಳು, ಅಣೆಕಟ್ಟು ಇತ್ಯಾದಿ ಕಾಮಗಾರಿಗಳಾದರೆ, ಇಲ್ಲಿನ ಅನನ್ಯ ಕಾಡು-ಗೋಮಾಳ-ಕೃಷಿಭೂಮಿ ಪ್ರದೇಶಗಳ ಮೇಲೆ ಪರಿಣಾಮ ಆಗಲಿದ್ದು, ಅತ್ಯಮೂಲ್ಯ ಜೀವವೈವಿಧ್ಯ ನಾಶವಾಗುತ್ತದೆ. ಅರಣ್ಯ ಛಿದ್ರೀಕರಣಗೊಂಡು ವನ್ಯಜೀವಿ ಆವಾಸತಾಣಗಳು ಮತ್ತಷ್ಟು ನಾಶವಾಗಿ, ವನ್ಯಜೀವಿ-ಮಾನವ ಸಂಘರ್ಷ ಹೆಚ್ಚುತ್ತದೆ.
4. ಭೂಕುಸಿತದ ಅಪಾಯ ಹೆಚ್ಚಳ
ಬೃಹತ್ ಯೋಜನೆಗಳ ಕಾಮಗಾರಿಗಳಿಂದ ಮಲೆನಾಡಿನ ಇಳಿಜಾರಿನ ಗುಡ್ಡ-ಕಣಿವೆಗಳ ಕಾಡು ಛಿದ್ರವಾಗಿ, ಅತ್ಯಮೂಲ್ಯ ಮೇಲ್ಮಣ್ಣು ನಾಶವಾಗಲಿದೆ. ಇದರಿಂದ ಮಳೆಗಾಲದಲ್ಲಿ ಭಾರಿ ಭೂಕುಸಿತದ ಸಾಧ್ಯತೆಗಳು ಹೆಚ್ಚುತ್ತವೆ.
5. ಕರಾವಳಿ ಪರಿಸರದ ನಾಶ
ಈ ಯೋಜನೆಗಳಂದ ಈ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾದಾಗ, ಅಂಕೋಲಾ ತಾಲ್ಲೂಕಿನ ಗಂಗಾವಳಿ (ಬೆಡ್ತಿ ನದಿಯ ಕೆಳಹರಿವಿನ ಪ್ರದೇಶ) ಹಾಗೂ ಕುಮಟಾ ತಾಲ್ಲೂಕಿನ ಅಘನಾಶಿನಿ ನದಿ ತಪ್ಪಲಿನ ಪ್ರದೇಶಗಳ ಅಳಿವೆಗಳಗೆ ನೀರಿನ ಕೊರತೆಯಾಗಿ, ಅಲ್ಲಿನ ಕಾಂಡ್ಲಾ ಕಾಡು ನಾಶವಾಗುತ್ತದೆ. ಆ ಮೂಲಕ ಜಲಚರಗಳ ವಂಶಾಭಿವೃದ್ಧಿ ತಾಣ ವಿನಾಶವಾಗುತ್ತದೆ. ಇದರಿಂದ, ಈಗಾಗಲೇ ತಲೆದೋರಿರುವ ಕರಾವಳಿಯ ಮತ್ಯಕ್ಷಾಮ, ಇನ್ನಷ್ಟು ಬಿಗಡಾಯಿಸಿ, ಮೀನುಗಾರರ ಜೀವನೋಪಾಯ ಮಾಯವಾಗುತ್ತದೆ.
ಇದನ್ನೂ ಓದಿ: ಉತ್ತರ ಕನ್ನಡದ ನದಿ ತಿರುವು ಯೋಜನೆಗಳನ್ನ ಕೈಬಿಡಿ; ಸಿಎಂ ಸಿದ್ದರಾಮಯ್ಯಗೆ ಮನವಿ
6. ಕರಾವಳಿಯ ಒಳಪ್ರದೇಶಗಳಗೆ ಉಪ್ಪುನೀರು ನುಗ್ಗುವಿಕೆ
ನದಿಯ ಹರಿವು ಕಡಿಮೆಯಾದಾಗ ಸಮುದ್ರದ ಉಪ್ಪು ನೀರು ನದಿಗಳ ಮೂಲಕ ಕರಾವಳಿಯ ಒಳಪ್ರದೇಶಗಳಗೆ ನುಗ್ಗತೊಡಗುತ್ತದೆ. ಆಗ, ಗದ್ದೆ-ತೋಟಗಳ ಮಣ್ಣು ಹಾಗೂ ಬಾವಿ-ಕೆರೆಗಳಂಥ ಕುಡಿಯುವ ನೀರಿನ ಮೂಲ ಎಲ್ಲದರಲ್ಲೂ ಉಪ್ಪಿನ ಪ್ರಮಾಣ ಅತಿಯಾಗಿ ಹೆಚ್ಚುತ್ತದೆ. ಇದರಿಂದ ಭೂಮಿ ಫಲವತ್ತತೆ ನಾಶವಾಗಿ ಬೇಸಾಯ ಕಷ್ಟವಾಗುತ್ತದೆ. ಕುಡಿಯುವ ನೀರಿನ ಕೊರತೆ ಮತ್ತಷ್ಟು ಗಂಭೀರವಾಗುತ್ತದೆ.
7. ಮಣ್ಣು / ಪೋಷಕಾಂಶ ಸಾಗಣೆ ನಾಶ
ನದಿ ಪ್ರವಾಹವು ಮಣ್ಣು, ಪೋಷಕಾಂಶ ಮತ್ತು ಜೈವಿಕ ವಸ್ತುಗಳನ್ನು ಸಾಗಿಸಿ ಕರಾವಳಿಯ ಅಳಿವೆ, ದಿನ್ನೆ, ಕಡಲತೀರದ ಫಲವತ್ತತೆ ಹೆಚ್ಚಿಸುತ್ತದೆ. ನದಿತಿರುವು ಯೋಜನೆಗಳಂದ ನದಿಯ ಸಹಜಪ್ರವಾಹ ಕಡಿಮೆಯಾಗಿ, ಕರಾವ ಪ್ರದೇಶಕ್ಕೆ ತಲುಪಬೇಕಾದ ಪೋಶಕಾಂಶಗಳ ಪ್ರಮಾಣ ಕುಗ್ಗ ಫಲವತ್ತತೆ ಕಡಿಮೆಯಾಗಿ ಉತ್ತರ ಕನ್ನಡದ ಕರಾವಳಿ ಮೀನುಗಾರಿಕೆ ಹಾಗೂ ಕೃಷಿಯ ಇಳುವರಿ ಕುಸಿಯುತ್ತದೆ.
8. ಹೆಚ್ಚಲಿರುವ ಹೂಳಿನ ಸಮಸ್ಯೆ ಹಾಗೂ ನಿರ್ವಹಣಾ ವೆಚ್ಚ
ಘಟ್ಟಪ್ರದೇಶದ ಮೇಲ್ಮಣ್ಣು ಬಹುಸೂಕ್ಷ್ಮವಾದದ್ದು. ಇದರ ಸ್ವರೂಪದಿಂದಾಗಿ (Geomorphology) ಕಾಲುವೆಗಳು ಹಾಗೂ ಜಲಾಶಯಗಳಲ್ಲಿ ಹೂಳು ವೇಗವಾಗಿ ತುಂಬುತ್ತದೆ. ಆಗ, ನಿರಂತರ ಹೂಳು ತೆಗೆಯುವ (Dredging) ಕಾಮಗಾರಿಗಳಿಗೆ ಹಣ ವ್ಯಯಿಸಿಯುವ ಅನಿವಾರ್ಯತೆಗೆ ಎದುರಾಗುತ್ತದೆ.
9. ಸ್ಥಳೀಯ ಜೀವನೋಪಾಯಕ್ಕೆ ನೇರ ಹೊಡೆತ
ಬೇಡ್ತಿ- ಅಘನಾಕಶಿನಿ ನದಿ ತಪ್ಪಲಿನ ಲಕ್ಷಾಂತರ ಬೇಸಾಯಗಾರರು, ಸಣ್ಣ ರೈತರು, ಗೌಳಿ, ಸಿದ್ದಿ, ಒಕ್ಕಲಿಗ, ಕುಣಬಿ, ಹಾಲಕ್ಕಿ, ತೆರನ ವನವಾಸಿಗಳು, ಮೀನುಗಾರರು ಇವರೆಲ್ಲರ ಜೀವನೋಪಾಯಕ್ಕೆ ಭಂಗ ಬರಲಿದೆ. ಕೃಷಿ ಹಾಗೂ ಮೀನುಗಾರಿಕೆಯ ಇಳುವರಿ, ಅರಣ್ಯ ಕಿರುಉತ್ಪನ್ನಗಳ ಸಂಗ್ರಹಣೆ, ಚಿಪ್ಪು ಮೀನು ಇತ್ಯಾದಿ ಜಲಚರ ಸಂಕುಲಗಳ ಇಳುವರಿ ಎಲ್ಲವೂ ಕುಸಿದು ನೈಸರ್ಗಿಕ ಸಂಪನ್ಮೂಲ ಆಧಾರಿತ ಜೀವನೋಪಾಯಗಳುನೋಪಾಯಗಳು ನಾಶವಾಗಲಿದೆ.
10. ಉತ್ತರ ಕರ್ನಾಟಕಕ್ಕೆ ಸುಸ್ಥಿರ ನೀರಾವರಿ ಪದ್ಧತಿಗಳೂ ಬೇಕಿವೆ
ಉತ್ತರ ಕರ್ನಾಟಕದ ಒಳನಾಡಿನ ಎರೆಮಣ್ಣಿಗೆ ನೀರು ಹಿಡಿದಿಡುವ ಸಾಮರ್ಥ್ಯ ಹೆಚ್ಚು. ಅಲ್ಲಿ ಸುರಿಯುವಷ್ಟೇ ಮಳೆ ಹಾಗೂ ಸ್ಥಳೀಯ ಕೆರೆಗಳನ್ನು ಬಳಸಿಕೊಂಡು ಜಲಾನಯನ ಅಭಿವೃದ್ಧಿ ತತ್ವದಡಿ ಯಶಸ್ವೀ ನೀರಾವರಿ ಮಾಡಿರುವ ರೈತರ ಸಾವಿರಾರು ಯಶೋಗಾಥೆಗಳು ಈಗಾಗಲೇ ಇವೆ. ಆದರೆ, ನೀರಾವರಿ ಕಾಲುವೆಗಳಲ್ಲಿ ಭಾರಿ ಪ್ರಮಾಣದ ನೀರು ಹರಿಸಿ ನೀರಾವರಿ ಮಾಡಿದ ಕೃಷಿಪ್ರದೇಶಗಳಲ್ಲಿ ಮಾತ್ರ ಭೂಮಿ ಚೌಳಾಗಾಗಿ, ಕ್ಷಾರಗೊಂಡು ಫಲವತ್ತತೆ ಕುಸಿದು ಬೇಸಾಯ ದುಸ್ತರವಾಗುತ್ತಿರುವ ವಿದ್ಯಮಾನವನ್ನು ಹಲವೆಡೆ ಈಗಾಗಲೇ ತಜ್ಞರು ದಾಖಲಿಸಿದ್ದಾರೆ. ಹೀಗಾಗಿ, ನದಿತಿರುವು ಯೋಜನೆಗಳು ಬಯಲುನಾಡಿನ ನೀರಾವರಿಗಾಗಲೀ ಅಥವಾ ರೈತರಿಗಾಗಲೀ ನೈಜಸಹಾಯ ಮಾಡುವದಿಲ್ಲ ಎಂಬ ಅಂಶವನ್ನು ಮನಗಾಣಬೇಕಿದೆ.
ಇದನ್ನೂ ಓದಿ: ಬೇಡ್ತಿ – ವರದಾ ನದಿ ಜೋಡಣೆ ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಿದ ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ
11.ಮಲೆನಾಡಿನ ತೋಟಗಾರಿಕಾ ಬೆಳೆಗಳಿಗೆ ಸುಸ್ಥಿರ ನೀರಾವರಿ
ಮಲೆನಾಡಿನ ಬಹುಪಾಲು ತೋಟಗಾರಿಕಾ ಪ್ರದೇಶಗಳಿಗೆ ಇಗಲೂ ಸರಿಯಾದ ನೀರಾವರಿ ಸೌಲಭ್ಯವಿಲ್ಲ. ಸ್ಥಳೀಯ ನದಿತೊರೆಗಳನ್ನು ಬಳಸಿಕೊಂಡು ಜಲನಯನ ಅಭಿವೃದ್ಧಿ ತತ್ವದಡಿ ಇಲ್ಲಿನ ರೈತರಿಗೆ ಸುಸ್ಥಿರ ನೀರಾವರಿ ಯೋಜನೆ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಯಾವ ಕಾಮಗಾರಿಗಳಿಲ್ಲದೆ ಸ್ಥಳೀಯ ತೊರೆಗಳ ನೀರನ್ನು ಮಿತವಾಗಿ ಬಳಸುವ ಪರಿಸರಸ್ನೇಹಿ ನೀರಾವರಿ ಯೋಜನೆಗಳು ರೂಪುಗೊಳ್ಳಬೇಕಿವೆ.
ಈ ಎಲ್ಲ ಕಾರಣಗಳಗಾಗಿ, ಕೇಂದ್ರ ರಾಜ್ಯ ಸರ್ಕಾರಗಳು ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಆಗ್ರಹ ವ್ಯಕ್ತಪಡಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




