ಬೆಂಗಳೂರು, ಜೂನ್ 10: 5 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾದರೆ, 4 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ (Rain) ಆಗಿದೆ. ಆ ಮೂಲಕ ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 78ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವರ್ಷದ ಮುಂಗಾರು ಪರಿಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಜೂ.2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. ಹೀಗಾಗಿ ಮುಂದಿನ 15 ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ.
ಬರ ಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬರ ಪರಿಹಾರವನ್ನು ಸುಪ್ರೀಂ ಕೋರ್ಟ್ಗೆ ಹೋಗಿ ಪಡೆದುಕೊಂಡು ಬಂದಿದ್ದೇವೆ. ಮೇ ಮೊದಲ ವಾರ 27.5 ಲಕ್ಷ ರೈತರಿಗೆ ಬರ ಪರಿಹಾರ ನೀಡಿದ್ದೇವೆ. 7 ಲಕ್ಷ ರೈತರು ಹೊಸದಾಗಿ ಮಳೆಯಾಶ್ರಿತ ಬೆಳೆ ಹೊಂದಿದ್ದರು. ನೀರು ಬರದೆ ಬೆಳೆಹಾನಿ ಆದ ರೈತರಿಗೆ ಪರಿಹಾರ ಕೊಡಲು ತೀರ್ಮಾನ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಬೆಳಗಾವಿ, ಹಾಸನ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದುವರೆದ ಮಳೆ ಆರ್ಭಟ: ಮರ ಬಿದ್ದು ಯುವಕ ಸಾವು, ಅಲ್ಲಲ್ಲಿ ಅಸ್ತವ್ಯಸ್ತ
ಒಂದು ವಾರದೊಳಗೆ ರೈತರಿಗೆ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. 40-41 ಲಕ್ಷ ರೈತರಿಗೆ ಪರಿಹಾರ ಪಾವತಿ ವಿತರಣೆ ಮಾಡಿದಂತಾಗುತ್ತೆ. 17 ಲಕ್ಷದ 9 ಸಾವಿರ ರೈತ ಕುಟುಂಬಕ್ಕೆ ಜೀವನೋಪಾಯ ಪರಿಹಾರ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
2800 ರೂ. ಅಥವಾ 3000 ರೂ. ಬರಬಹುದು. ಇದು ಜೀವನೋಪಾಯ ನಷ್ಟದ ಪರಿಹಾರ. ಇದು ಸಣ್ಣ, ಅತಿ ಸಣ್ಣ ರೈತರಿಗೆ ನೀಡುವ ಪರಿಹಾರವಾಗಿದೆ. ಹಿಂದಿನ ವರ್ಷಗಳಲ್ಲಿ ಕಲಬುರ್ಗಿ, ಚಿತ್ರದುರ್ಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬರ ಪರಿಹಾರದಲ್ಲಿ ಅಕ್ರಮ ಆಗಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಸೋಲು ವಿಚಾರವಾಗಿ ಮಾತನಾಡಿದ್ದು, ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಯಾರ್ಯಾರೋ ಸೋತಿದ್ದಾರೆ. ಶಾಂತವೇರಿ ಗೋಪಾಲಗೌಡ, ನಿಜಲಿಂಗಪ್ಪ ಸೇರಿ ಹಲವರು ಸೋತಿದ್ದಾರೆ. ಹಲವು ವಿಷಯಗಳ ಆಧಾರದಲ್ಲಿ ಜನ ಮತ ಹಾಕಿರುತ್ತಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನತೆ ಯೋಚಿಸಿದ್ದಾರೆ.
ಇದನ್ನೂ ಓದಿ: Bengaluru Rain: ಕೆಆರ್ ಮಾರುಕಟ್ಟೆ, ಲಾಲ್ಬಾಗ್ ಸೇರಿದಂತೆ ಬೆಂಗಳೂರಿನ ಹಲವೆಡೆ ಮಳೆ
ಡಿ.ಕೆ.ಸುರೇಶ್ ಶಾಸಕರಿಗಿಂತಲೂ ಹೆಚ್ಚು ಕೆಲಸ ಮಾಡುತ್ತಿದ್ದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಬದಲಾವಣೆ ಬಯಸಿ ಮತ ಹಾಕಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತದಾರರ ನಿರ್ಧಾರ ಗೌರವಿಸುತ್ತೇವೆ ಎಂದಿದ್ದಾರೆ.
ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ಗ್ಯಾರಂಟಿಗಳು ರಾಜಕೀಯವಾಗಿ ಅನುಕೂಲ ಆಗಿದೆಯೋ ಇಲ್ವೋ ಗೊತ್ತಿಲ್ಲ. ನಾವು 10ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದೆವು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.