ಕರ್ನಾಟಕದ 18ನೇ ರಾಜ್ಯಪಾಲರಾಗಿ 2014ರ ಸೆಪ್ಟೆಂಬರ್ನಲ್ಲಿ ಅಧಿಕಾರ ಸ್ವೀಕರಿಸಿದ ವಜುಭಾಯಿ ವಾಲಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 1939ರ ಜನವರಿ 13ರಂದು ಜನಿಸಿರುವ ವಿ.ಆರ್.ವಾಲಾ ಇಂದು 82ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಗುಜರಾತ್ನ ರಾಜ್ಕೋಟ್ನಲ್ಲಿ ಜನಿಸಿರುವ ವಿ.ಆರ್. ವಾಲಾ, ಕರ್ನಾಟಕ ರಾಜ್ಯಪಾಲರಾಗಿ ಬರುವುದಕ್ಕೂ ಮೊದಲು ಗುಜರಾತ್ ವಿಧಾನಸಭೆಯ ಸ್ಪೀಕರ್ ಆಗಿದ್ದರು. 2012ರಿಂದ 2014ರವರೆಗೆ ವಿಧಾನಸಭಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಬಜೆಟ್ ಮಂಡನೆಯಲ್ಲಿ ದಾಖಲೆ
ವಜುಭಾಯಿ ವಾಲಾ ಅವರು ಆರ್ಎಸ್ಎಸ್ ಸ್ವಯಂಸೇವಕರಾಗಿ ರಾಜಕೀಯಕ್ಕೆ ಬಂದವರು. ಶಾಲಾ ಜೀವನದಿಂದಲೂ ಒಂದಿಲ್ಲೊಂದು ಹೋರಾಟದಲ್ಲಿ ಪಾಲ್ಗೊಂಡವರು. 1971ರಲ್ಲಿ ಜನಸಂಗ್ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ. 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸವನ್ನೂ ಕಂಡವರು. 1980ರಲ್ಲಿ ರಾಜಕೋಟ್ನ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದರು.
ನಂತರ ಇದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದಿದ್ದಾರೆ. ಹಾಗೇ ಎರಡು ಅವಧಿಗೆ ಹಣಕಾಸು ಖಾತೆಯನ್ನು ನಿಭಾಯಿಸಿದ್ದಾರೆ. ಕಾರ್ಮಿಕ ಮತ್ತು ಉದ್ಯೋಗ ಇಲಾಖೆ, ಕಂದಾಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಇನ್ನು ಹಣಕಾಸು ಸಚಿವರಾಗಿ 18 ಬಾರಿ ಬಜೆಟ್ ಮಂಡನೆ ಮಾಡಿ, ದಾಖಲೆಯನ್ನೇ ನಿರ್ಮಿಸಿದ್ದಾರೆ. 2012ರವರೆಗೆ ಸಚಿವ ಸ್ಥಾನದಲ್ಲಿ ಮುಂದುವರಿದಿದ್ದ ಅವರು, ಅದಾದ ಬಳಿಕ ಸ್ಪೀಕರ್ ಆದರು. 2014ರಲ್ಲಿ ಕರ್ನಾಟಕಕ್ಕೆ ಕಾಲಿಟ್ಟರು.
ಇನ್ನು ರಾಜ್ಕೋಟ್ ನಾಗರಿಕ ಸಹಕಾರಿ ಬ್ಯಾಂಕ್ನ ಅಭಿವೃದ್ಧಿಗಾಗಿಯೂ ಶ್ರಮಿಸಿದ್ದಾರೆ. ಒಂದು ಅವಧಿಗೆ ಈ ಬ್ಯಾಂಕ್ನ ಚೇರ್ಮನ್ ಕೂಡ ಆಗಿದ್ದ ವಿ.ಆರ್.ವಾಲಾ, ಅದರಾಚೆಗೂ ಬ್ಯಾಂಕ್ನ ಸೇವೆಯ ಗುಣಮಟ್ಟ ಸುಧಾರಿಸಲು ಪ್ರಯತ್ನಿಸಿದ್ದಾರೆ.
ವಿವಾದದಿಂದ ಹೊರತಲ್ಲ
ರಾಜ್ಯಪಾಲ ವಜುಭಾಯಿ ವಾಲಾ ಬಿಜೆಪಿಯಿಂದ ಬಂದವರು. 2018ರಲ್ಲಿ ವಿವಾದಕ್ಕೆ ಸಿಲುಕಿ, ದೇಶಮಟ್ಟದ ಚರ್ಚೆಗೂ ಕಾರಣರಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಿಶ್ಚಿತವಾಗಿ ಸರ್ಕಾರ ರಚನೆಗೂ ಮುಂದೆ ಬಂದಿದ್ದವು. ಆದರೆ ಅವರ ಮೈತ್ರಿಕೂಟದ ಮನವಿಯನ್ನು ತಿರಸ್ಕರಿಸಿ, ಬಿಜೆಪಿ ಅತಿದೊಡ್ಡ ಪಕ್ಷ ಎಂಬ ಕಾರಣಕ್ಕೆ, ಸಂಖ್ಯಾಬಲ ಇಲ್ಲದೆ ಇದ್ದರೂ ಸರ್ಕಾರ ರಚನೆಗೆ ಆಹ್ವಾನಿಸಿದ್ದರು.
ಅಷ್ಟೇ ಅಲ್ಲ, ಬಿಜೆಪಿ ಬಹುಮತ ಸಾಬೀತಿಗೆ 15 ದಿನ ಅವಕಾಶವನ್ನೂ ನೀಡಿದ್ದರು. ರಾಜ್ಯಪಾಲರಾಗಿ ಇಂಥ ನಡೆ ಸರಿಯಲ್ಲ. ಪಕ್ಷಾತೀತವಾಗಿರಬೇಕು. ಬಿಜೆಪಿ ಪರವಾಗಿದ್ದಾರೆ ಎಂಬಿತ್ಯಾದಿ ಆರೋಪಗಳನ್ನು ಪ್ರತಿಪಕ್ಷಗಳು ಮಾಡಿದ್ದವು. ಇದೇ ವಿಚಾರ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಇನ್ನು ಈ ವಿವಾದ ಹೊರತು ಪಡಿಸಿದರೆ ವಜುಬಾಯಿ ವಾಲಾ ಸಮಚಿತ್ತರು, ಸಂಯಮ ಹೊಂದಿರುವವರಾಗಿದ್ದಾರೆ.
ಮೂರು ಮುಖ್ಯಮಂತ್ರಿಗಳಿಗೆ ಪ್ರಮಾಣವಚನ
ಕರ್ನಾಟಕದಲ್ಲಿ ಹಂಸರಾಜ್ ಭಾರದ್ವಾಜ್ ನಂತರ ರಾಜ್ಯಪಾಲರಾಗಿ ಅಧಿಕಾರಕ್ಕೆ ಏರಿದ ವಜುಭಾಯಿ ರುಢಾಭಾಯ್ ವಾಲಾ ಮೂರು ಮುಖ್ಯಮಂತ್ರಿಗಳ ಆಡಳಿತವನ್ನು ನೋಡಿದ್ದಾರೆ. ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಅನೇಕ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಇಂದೂ ಕೂಡ ಯಡಿಯೂರಪ್ಪ ಕ್ಯಾಬಿನೆಟ್ನ ಏಳು ಸಚಿವರಿಗೆ ವಜುಭಾಯಿ ವಾಲಾ ಪ್ರಮಾಣವಚನ ಬೋಧಿಸಲಿದ್ದಾರೆ. ರಾಜ್ಯಪಾಲರ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸುತ್ತ ಬಂದಿರುವ ವಿ.ಆರ್. ವಾಲಾ ಅವರಿಗೆ Happy Birthday!
Published On - 11:29 am, Wed, 13 January 21