ಉತ್ತರಾಖಂಡ್​ ಚಾರಣಕ್ಕೆ ತೆರಳಿದ್ದ ಕರ್ನಾಟಕದ 9 ಜನ ಸಾವು: ಮೃತರ ಗುರುತು ಪತ್ತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 05, 2024 | 11:10 PM

ಉತ್ತರಾಖಂಡ್​ಗೆ ಚಾರಣಕ್ಕೆ ತೆರಳಿದ್ದ ರಾಜ್ಯದ 9 ಜನರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸೇನಾ ಹೆಲಿಕಾಪ್ಟರ್​​​ಗಳ ಮೂಲಕ ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಸದ್ಯ 23 ಜನರ ಪೈಕಿ ರಕ್ಷಣೆಗೊಳಗಾದ 8 ಚಾರಣಿಗರಿಗೆ ಡೆಹ್ರಾಡೂನ್​​ನ ರಾಜ್ಯ ಅತಿಥಿ ಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡುವ ಮೂಲಕ ಸಂಪಾತ ಸೂಚಿಸಿದ್ದಾರೆ.

ಉತ್ತರಾಖಂಡ್​ ಚಾರಣಕ್ಕೆ ತೆರಳಿದ್ದ ಕರ್ನಾಟಕದ 9 ಜನ ಸಾವು: ಮೃತರ ಗುರುತು ಪತ್ತೆ
ಉತ್ತರಾಖಂಡ್​ ಚಾರಣಕ್ಕೆ ತೆರಳಿದ್ದ ಕರ್ನಾಟಕದ 9 ಜನ ಸಾವು: ಮೃತರ ಗುರುತು ಪತ್ತೆ
Follow us on

ಬೆಂಗಳೂರು, ಜೂನ್​ 05: ಉತ್ತರಾಖಂಡ್​ಗೆ (Uttarakhand) ಚಾರಣಕ್ಕೆ ತೆರಳಿದ್ದ ರಾಜ್ಯದ 21 ಜನರ ಪೈಕಿ 9 ಜನರು ಸಾವನ್ನಪ್ಪಿದ್ದಾರೆ. ಸೇನಾ ಹೆಲಿಕಾಪ್ಟರ್​​​ಗಳ ಮೂಲಕ ಮೃತದೇಹಗಳ ರವಾನೆ ಮಾಡಲಾಗಿದೆ. ಸದ್ಯ ರಕ್ಷಣೆಯಾದ 8 ಚಾರಣಿಗರಿಗೆ ಡೆಹ್ರಾಡೂನ್​​ನ ರಾಜ್ಯ ಅತಿಥಿ ಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮೃತದೇಹಗಳನ್ನು ಬೆಂಗಳೂರಿಗೆ (bangaluru) ತರಲು ವ್ಯವಸ್ಥೆ ಮಾಡಲಾಗುತ್ತಿದೆ. ಸಿಂಧು ವಾಕೆಲಂ (ಬೆಂಗಳೂರು)​, ಆಶಾ ಸುಧಾಕರ್​, ಸುಜಾತಾ ಮುಂಗುರ್ವಾಡಿ (ಬೆಂಗಳೂರು ದಕ್ಷಿಣ), ವಿನಾಯಕ್ ಮುಂಗುರ್ವಾಡಿ (ಬೆಂಗಳೂರು ದಕ್ಷಿಣ), ಚೈತ್ರ ಪ್ರಣೀತ್ (ಬೆಂಗಳೂರು ದಕ್ಷಿಣ)​ ಮತ್ತು ಇನ್ನೂ ನಾಲ್ವರು ಮೃತ ಚಾರಣಿಗರ ಹೆಸರು ತಿಳಿದುಬಂದಿಲ್ಲ.

ಡೆಹ್ರಾಡೂನ್‌ ತೆರಳಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಈ ಕುರಿತು ಟ್ವೀಟ್​ ಮಾಡಿದ್ದಾರೆ. ರಕ್ಷಿಸಿದ 8 ಚಾರಣಿಗರು ಬಿಜಾಪುರ ಗೆಸ್ಟ್​​ಹೌಸ್​​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸೌಮ್ಯ ಕಾಲುವೆ (ಬೆಂಗಳೂರು), ಮೆಮೊರಿ ಗೊಂಬೆ, ಶೀನಾ ಲಕ್ಷ್ಮಿ (ಬೆಂಗಳೂರು ಪೂರ್ವ), ಎಸ್ ಶಿವ ಜ್ಯೋತಿ (ಬೆಂಗಳೂರು), ಅನಿಲ್ ಜಮ್ತಿಗೆ ಅರುಣಾಚಲ ಭಟ್, ಭರತ್ ಬೊಮ್ಮನ ಗೌಡರ್ (ಬೆಂಗಳೂರು ಪೂರ್ವ), ಮಧು ಕಿರಣ್ ರೆಡ್ಡಿ (ಬೆಂಗಳೂರು ದಕ್ಷಿಣ), ಜಯಪ್ರಕಾಶ್ ಬಿ.ಎಸ್ (ಬೆಂಗಳೂರು ದಕ್ಷಿಣ)​ ರಕ್ಷಣೆಗೊಳಗಾದ ಚಾರಣಿಗರು.

ಸಚಿವ ಕೃಷ್ಣ ಭೈರೇಗೌಡ ಟ್ವೀಟ್​ 

ಇನ್ನು ಸಿಲ್ಲಾ ಗ್ರಾಮವನ್ನು ತಲುಪಿರುವ ನವೀನ್ ಎ (ಬೆಂಗಳೂರು ಪೂರ್ವ) ಮತ್ತು ರಿತಿಕಾ ಜಿಂದಾಲ್ (ಬೆಂಗಳೂರು ಪೂರ್ವ)​ ಸಾಮಾನ್ಯ ಸ್ಥಿತಿಯಲ್ಲಿದ್ದಾರೆ. ನಾಟಿನ್-ಭಟ್ವಾಡಿಯಲ್ಲಿರುವ ಎಸ್ ಸುಧಾಕರ್, ವಿನಯ್ ಎಂ.ಕೆ (ಬೆಂಗಳೂರು) ಮತ್ತು ವಿವೇಕ್ ಶ್ರೀಧರ್ (ಬೆಂಗಳೂರು)​ ಚಾರಣಿಗರ ರಕ್ಷಣೆ ಬಾಕಿ ಇದೆ.

ಇದನ್ನೂ ಓದಿ: ಉತ್ತರಾಖಂಡ್​​ನಲ್ಲಿ ಚಾರಣಕ್ಕೆ ತೆರಳಿದ್ದ 23 ಜನರ ಪೈಕಿ ಕರ್ನಾಟಕದ ನಾಲ್ವರು ಸಾವು: ರಕ್ಷಣಾ ಸ್ಥಳಕ್ಕೆ ತೆರಳಿದ ಕೃಷ್ಣ ಬೈರೇಗೌಡ

ಸದ್ಯ ಪ್ರತಿಕೂಲ ಹವಾಮಾನದಿಂದ ಇಂದು ಅಪರಾಹ್ನದಿಂದ ರಕ್ಷಣಾ ಕಾರ್ಯಾಚರಣೆ ಸ್ಥಗಿತವಾಗಿದ್ದು, ನಾಳೆ ಮುಂಜಾನೆಯಿಂದ ಕಾರ್ಯಾಚರಣೆ ಆರಂಭವಾಗಲಿದೆ. ಮೃತದೇಹಗಳನ್ನು ಬೆಂಗಳೂರಿಗೆ ತರಲು ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಸಂಪರ್ಕಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ದುರಂತ ಕುರಿತಾಗಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದು, ಉತ್ತರಾಖಂಡದ ಶಾಸ್ತ್ರತಾಳ್ ಗೆ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಸಾವಿಗೀಡಾದವರ ಮೃತದೇಹಗಳನ್ನು ಆದಷ್ಟು ಶೀಘ್ರ ಕುಟುಂಬದವರಿಗೆ ತಲುಪಿಸಲಾಗುವುದು ಮತ್ತು ರಕ್ಷಿಸಲ್ಪಟ್ಟಿರುವ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು. ಇದಕ್ಕಾಗಿ ನಮ್ಮ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದೆ.

ಮೃತರ ಸಂಖ್ಯೆ 9ಕ್ಕೆ ಏರಿದ ಸಂಗತಿ ತಿಳಿದು ಬಹಳ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ. ಡೆಹ್ರಾಡೋನ್​ನಲ್ಲಿ ರಕ್ಷಣಾ ಕಾರ್ಯದ ಉಸ್ತುವಾರಿ ನಿರ್ವಹಿಸುತ್ತಿರುವ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಮತ್ತು ರಕ್ಷಿಸಲ್ಪಟ್ಟ ಚಾರಣಿಗರ ಜೊತೆ ದೂರವಾಣಿ ಮೂಲಕ ಮಾತನಾಡಿ, ಧೈರ್ಯ ತುಂಬಿದ್ದೇನೆ.

ಸಿಎಂ ಸಿದ್ದರಾಮಯ್ಯ ಟ್ವೀಟ್


ರಕ್ಷಿಸಲ್ಪಟ್ಟಿರುವ ಎಲ್ಲರನ್ನೂ ಯಾವುದೇ ಅಡಚಣೆ ಆಗದಂತೆ ಸುರಕ್ಷಿತವಾಗಿ ಮನೆಗಳಿಗೆ ಸೇರಿಸಬೇಕು. ಮೃತ ದೇಹಗಳನ್ನು ಕುಟುಂಬದವರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ತುರ್ತಾಗಿ ನಿರ್ವಹಿಸಬೇಕು ಎಂಬ ಸೂಚನೆಯನ್ನು ಕೃಷ್ಣಬೈರೇಗೌಡರಿಗೆ ನೀಡಿದ್ದೇನೆ.

ಬಾಕಿ ಉಳಿದಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕಾಪಾಡಿ ಕರೆತರುವ ಬಗ್ಗೆ ಸರ್ಕಾರಗಳ ಮಟ್ಟದಲ್ಲಿ ಸಕಲ ಪ್ರಯತ್ನಗಳೂ ನಡೆಯುತ್ತಿವೆ. ಈ ಬಗ್ಗೆ ಯಾರೊಬ್ಬರೂ ಆತಂಕಕ್ಕೆ ಒಳಗಾಗುವುದು ಬೇಡ. ಪ್ರತಿ ಕನ್ನಡಿಗನ ಪ್ರಾಣ ರಕ್ಷಣೆಯೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದಿದ್ದಾರೆ.

ನಡೆದದ್ದು ಏನು?

ಡೆಹ್ರಾಡೂನ್‌ ಚಾರಣಿಗರ ತಂಡದೊಂದಿಗಿನ ಚರ್ಚೆಯಿಂದ ಸಚಿವ ಕೃಷ್ಣ ಭೈರೇಗೌಡ ಟ್ವೀಟ್​ ಮಾಡಿದ್ದು,  ಜೂನ್ 3 ರಂದು ಇಬ್ಬರು ಚಾರಣಿಗರು ಮುಖ್ಯ ತಂಡದಿಂದ ಬೇರ್ಪಟ್ಟು ಚಾರಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಅದೇ ದಿನ ಬೆಳಿಗ್ಗೆ 20 ಚಾರಣಿಗರು ಮತ್ತು ಆ ತಂಡದ ಮಾರ್ಗದರ್ಶಿಯನ್ನೊಳಗೊಂಡ ತಂಡ ಲ್ಯಾಂಬ್ಟಾಲ್ ಕ್ಯಾಂಪ್ ಸೈಟ್‌ನಿಂದ ಸಹಸ್ರತಾಲ್‌ಗೆ ತೆರಳಿದೆ.

ಚಾರಣದ ಗಮ್ಯ ತಲುಪಿ ವಾಪಸ್‌ ಶಿಬಿರಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಅವರು ಶಿಬಿರದಿಂದ ಸುಮಾರು ಒಂದೂವರೆ ಅಥವಾ ಎರಡು ಗಂಟೆಗಳ ದೂರದಲ್ಲಿದ್ದಾಗ, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹಿಮಪಾತವು ಪ್ರಾರಂಭವಾಗಿದೆ. ಸಂಜೆ 4 ಗಂಟೆಯ ಹೊತ್ತಿಗೆ ಹಿಮಪಾತವು ತೀವ್ರಗೊಂಡಿದೆ. ಸಂಜೆ 6 ಗಂಟೆ ವೇಳೆಗೆ ಇಬ್ಬರು ಚಾರಣಿಗರು ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿದ್ದಾರೆ. ಹಿಮ ಮತ್ತು ಹಿಮಗಾಳಿಯು ಚಾರಣಿಗರು ವಾಪಸ್‌ ಶಿಬಿರಕ್ಕೆ ಹಿಂದಿರುಗುವುದನ್ನು ಅಸಾಧ್ಯಗೊಳಿಸಿದೆ. ಗೋಚರತೆಯೂ ಶೂನ್ಯಕ್ಕೆ ಇಳಿದಿದೆ.

ಆ ರಾತ್ರಿ ಎಲ್ಲರೂ ಒಟ್ಟಿಗೆ ಕಳೆದಿದ್ದಾರೆ. ಆದರೆ, ಈ ವೇಳೆ ಹಿಮಗಾಳಿಯ ತೀವ್ರತೆಗೆ ಕೆಲವರು ಅದೇ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಜೂನ್ 4 ರ ಬೆಳಿಗ್ಗೆ, ಮೊಬೈಲ್ ಸಂಪರ್ಕ ಸಿಗಬಹುದಾದ ಸ್ಥಳಕ್ಕೆ ತಂಡದ ಮಾರ್ಗದರ್ಶಕ ತಲುಪಿದ್ದಾನೆ. ಈ ನಡುವೆ ಶಿಬಿರಕ್ಕೆ ಹಿಂತಿರುಗುವ ಸ್ಥಿತಿಯಲ್ಲಿದ್ದ ಕೆಲವು ಚಾರಣಿಗರು ಬೆಳಗ್ಗೆ 11 ಗಂಟೆ ಸುಮಾರಿಗೆ ಶಿಬಿರದ ಕಡೆಗೆ ಹೊರಟಿದ್ದಾರೆ. ಮಾರ್ಗದರ್ಶಕ ಶಿಬಿರಕ್ಕೆ ಬಂದು ಸಿಕ್ಕಿಬಿದ್ದ ಚಾರಣಿಗರನ್ನು ಕಾಪಾಡಲು ಬೇಕಾದ ಸಾಮಗ್ರಿಗಳೊಂದಿಗೆ ಮತ್ತೆ ಹಿಂತಿರುಗಿದ್ದಾರೆ.

ಜೂನ್ 4 ರ ಸಂಜೆ ವೇಳೆಗೆ ಮಾರ್ಗದರ್ಶಿಯು ಫೋನ್ ಸಿಗ್ನಲ್ ಲಭ್ಯವಿರುವ ಸ್ಥಳವನ್ನು ತಲುಪಿಕೊಂಡಿದ್ದು, ಪರಿಸ್ಥಿತಿಯ ಬಗ್ಗೆ ಕರ್ನಾಟಕ ಪರ್ವತಾರೋಹಣ ಸಂಸ್ಥೆ ಮತ್ತು ಭಾರತೀಯ ಪರ್ವತಾರೋಹಣ ಒಕ್ಕೂಟ ಸಂಸ್ಥೆಗಳಿಗೆ ದುರ್ಘಟನೆಯ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ: ಟ್ರೆಕ್ಕಿಂಗ್​​ಗೆ ಹೋದ 22 ಸದಸ್ಯರ ಗುಂಪಿನ 9 ಚಾರಣಿಗರು ಸಾವು, 13 ಮಂದಿಯ ರಕ್ಷಣೆ

ಕರ್ನಾಟಕ ಮತ್ತು ಉತ್ತರಾಖಂಡ ಸರ್ಕಾರಗಳು ಜೂನ್ 4 ರ ರಾತ್ರಿ ವೇಳೆಗೆ ರಕ್ಷಣಾ ಕಾರ್ಯಾಚರಣೆಗಳ ಸಿದ್ಧತೆಗಳನ್ನು ಪ್ರಾರಂಭಿಸಿತ್ತು. ಭೂ ಸೇನೆ, ವಾಯುಪಡೆ, ಎಸ್‌ಡಿಆರ್‌ಎಫ್ ಮತ್ತು ವಿವಿಧ ಸರ್ಕಾರಿ-ಸರ್ಕಾರೇತರ ಸಂಸ್ಥೆಗಳು ಜೂನ್ 5 ರ ಬೆಳಿಗ್ಗೆ 5 ಗಂಟೆ ವೇಳೆಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:44 pm, Wed, 5 June 24