ಹಾಸನ: ಸಿಡಿಲು ಬಡಿದು ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರ ಸಾವು
ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಸಿಡಿಲು ಸಹಿತ ಮಳೆಗೆ ಜನ ಕಂಗಾಲಾಗಿದ್ದಾರೆ. ಇಂದು(ಜೂ.05) ಒಂದೇ ದಿನ ಸಿಡಿಲಿಗೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಬಳಿ ಇಬ್ಬರು ಮಹಿಳಾ ಕಾರ್ಮಿಕರು ಹಾಗೂ ವಿಜಯಪುರ ಜಿಲ್ಲೆಯ ಬಬಲೇಶ್ವರದ ಕಾಖಂಡಕಿ ಗ್ರಾಮದ ಓರ್ವ ಕುರಿಗಾಹಿ ಸೇರಿ ಮೂವರು ಬಲಿಯಾಗಿದ್ದಾರೆ.
ಹಾಸನ, ಜೂ.05: ರಾಜ್ಯಾದ್ಯಂತ ಮುಂಗಾರು ಮಳೆಯು ಚುರುಕುಗೊಂಡಿದ್ದು, ಭರ್ಜರಿ ಸಿಡಿಲು ಸಹಿತ ಮಳೆಯಾಗುತ್ತಿದೆ. ಅದರಂತೆ ಇಂದು(ಜೂ.05) ಒಂದೇ ದಿನ ಸಿಡಿಲಿಗೆ ನಾಲ್ವರು ಬಲಿಯಾಗಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು (Arkalgud) ತಾಲೂಕಿನ ದೊಡ್ಡಮಗ್ಗೆ ಬಳಿ ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರು ಸಿಡಿಲಿಗೆ ಸಾವನ್ನಪ್ಪಿದ ಘಟನೆ ನಡೆದಿದೆ. ಇಂದು ಮಧ್ಯಾಹ್ನದ ವೇಳೆ ಜೋಳ ಬಿತ್ತನೆ ಮಾಡುತ್ತಿದ್ದ ಸಂದರ್ಭದಲ್ಲಿ ಮಳೆ ಬಂದಿದ್ದು, ಈ ಹಿನ್ನಲೆ ಮರದ ಕೆಳಗೆ ಆಶ್ರಯ ಪಡೆದಿದ್ದಾರೆ. ಈ ವೇಳೆ ಸಿಡಿಲು ಬಡಿದು ಕೂಲಿ ಕಾರ್ಮಿಕರಾದ ಮುತ್ತಮ್ಮ(70) ಹಾಗೂ ಪುಟ್ಟಮ್ಮ(63) ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಶಾಸಕ ಎ.ಮಂಜು ಭೇಟಿ ನೀಡಿದ್ದಾರೆ. ಈ ಕುರಿತು ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಿಡಿಲು ಬಡಿದು ಕುರಿಗಾಹಿ ಸೇರಿ 15ಕ್ಕೂ ಹೆಚ್ಚು ಕುರಿಗಳು ಸಾವು
ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಭಾಗದಲ್ಲಿ ಇಂದು(ಜೂ.05) ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಬಬಲೇಶ್ವರದ ಕಾಖಂಡಕಿ ಗ್ರಾಮದ ಸಿಡಿಲಿಗೆ ಕುರಿಗಾಹಿ ಅಮೋಘ ಸೋಮನಿಂಗ ಕಣಮುಚನಾಳ (35) ಎಂಬಾತ ಸೇರಿ 15 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಮಳೆ ಬರುತ್ತಿದ್ದ ವೇಳೆ ಕುರಿಗಾಹಿ, ಕುರಿಗಳೊಂದಿಗೆ ಮರದ ಕೆಳೆಗೆ ನಿಂತಿದ್ದ. ಈ ಸಂದರ್ಭದಲ್ಲಿ ಮರಕ್ಕೆ ದಿಢೀರ್ ಸಿಡಿಲು ಬಡಿದು ಈ ದುರ್ಘಟನೆ ನಡೆದಿದೆ. ಈ ಘಟನೆ ಬಬಲೇಶ್ವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಚಲಿಸುವ ರೈಲಿಗೆ ಸಿಲುಕಿ 80ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿ ಸಾವು
ಸಿಡಿಲಿಗೆ ಓರ್ವ ಯುವಕ ಸಾವು
ವಿಜಯನಗರ: ಕೊಟ್ಟೂರು ತಾಲೂಕಿನ ದೂಪದಳ್ಳಿ ಬಳಿಯ ಹೊಲದಲ್ಲಿ ಸಿಡಿಲು ಬಡಿದು ಓರ್ವ ಯುವಕ ಸಾವನ್ನಪ್ಪಿದ್ದಾನೆ. ಮದ್ದಾನ್(24) ಮೃತ ರ್ದುದೈವಿ. ಇತ ಹೊಲಕ್ಕೆ ತೆರಳಿದ್ದಾಗ ಈ ದುರ್ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಕೊಟ್ಟೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟುವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ