ಬೆಂಗಳೂರು, ಜುಲೈ 10: ರಾಜ್ಯದಲ್ಲಿ 24 ಗಂಟೆ ಅವಧಿಯಲ್ಲಿ ಬೆಂಗಳೂರು ನಗರವೊಂದರಲ್ಲೇ 91 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ನಗರದಲ್ಲಿ ಡೆಂಘೀ ಪಾಸಿಟಿವ್ ಸಂಖ್ಯೆ 2,174ಕ್ಕೆ ಏರಿಕೆ ಆಗಿದೆ. ಆತಂಕದ ವಿಷಯವೆಂದರೆ, 24 ಗಂಟೆಯಲ್ಲಿ 82 ಮಕ್ಕಳು ಡೆಂಗ್ಯೂ ಸೋಂಕಿಗೆ ತುತ್ತಾಗಿದ್ದಾರೆ.
ಡೆಂಘೀ ಮಹಾಮಾರಿ ಶಿವಮೊಗ್ಗದಲ್ಲಿಯೂ ದಿಗಿಲು ಹುಟ್ಟಿಸಿದೆ. ನಿತ್ಯ ನೂರಾರು ಕೇಸ್ಗಳು ದಾಖಲಾಗುತ್ತಿದ್ದು, ಪುಟಾಣಿಗಳನ್ನೇ ಬಲಿ ಪಡೆಯುತ್ತಿದೆ. ಹಾಸನ ಜಿಲ್ಲೆ ಬಳಿಕ ಶಿವಮೊಗ್ಗದಲ್ಲಿ ಇಸೀಗ ಮಹಿಳೆಯೊಬ್ಬರು ಡೆಂಘೀಯಿಂದ ಸಾವಿಗೀಡಾಗಿದ್ದಾರೆ. ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ನಿವಾಸಿ ರಶ್ಮಿ ಮೃತ ದುರ್ದೈವಿ. ಕಳೆದ 15 ದಿನದಿಂದ ತೀವ್ರ ಜ್ವರದಿಂದ ನರಳುತ್ತಿದ್ದರು. ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ.
ಡೆಂಗ್ಯೂ ಇದೀಗ ಸರ್ಕಾರವನ್ನೂ ನಡುಗುವಂತೆ ಮಾಡಿದೆ. ಐಎಎಸ್ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ದ ಸಿಎಂ ಸಿದ್ದರಾಮಯ್ಯ, ಮಂಗಳವಾರ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಮಳೆಗಾಲದಲ್ಲೇ ಡೆಂಘೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ನೀರು ನಿಲ್ಲದಂತೆ ಸ್ವಚ್ಛತೆಗೆ ಆದ್ಯತೆ ನೀಡುವುದು, ಸೊಳ್ಳೆಗಳ ನಾಶಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ 10 ಪ್ರತ್ಯೇಕ ಡೆಂಘೀ ವಾರ್ಡ್ ತೆರೆಯಬೇಕು. ಡೆಂಘೀ ಕಂಟ್ರೋಲ್ಗೆ ಟಾಸ್ಕ್ಫೋರ್ಸ್ ರಚನೆ ಮಾಡಬೇಕು. ಕೊಳಗೇರಿ ಪ್ರದೇಶದಲ್ಲೇ ಹೆಚ್ಚು ಡೆಂಘೀ ವ್ಯಾಪಿಸಿದೆ. ಹೀಗಾಗಿ ಸ್ಲಂ ನಿವಾಸಿಗಳಿಗೆ ಉಚಿತವಾಗಿ ಸೊಳ್ಳೆ ಪರದೆ ವಿತರಣೆ ಮಾಡುವಂತೆ ಸೂಚಿಸಿದ್ದೇವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಡೆಂಗ್ಯೂ ಸೊಳ್ಳೆಗಿಂತ ವೇಗವಾಗಿ ಬಿಜೆಪಿಯವರು ಸುಳ್ಳು ಹರಡಿಸ್ತಿದ್ದಾರೆ: ದಿನೇಶ್ ಗುಂಡೂರಾವ್ ವಾಗ್ದಾಳಿ
ಹಾಸನದ ಹಿಮ್ಸ್ನಲ್ಲಿ ಸೋಮವಾರ ಅರಸೀಕೆರೆಯ ನಿವಾಸಿ ಸುಚಿತ್ರಾ ಎಂಬ ಯುವತಿ ಡೆಂಗ್ಯೂವಿನಿಂ ಮೃತಪಟ್ಟಿದ್ದರು. ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಯುವತಿ ಕುಟುಂಬ ಆರೋಪಿಸಿತ್ತು. ಹಿಗಾಗಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಶಿವಲಿಂಗೇಗೌಡ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದ ಡೆಂಘೀ ಡಂಗುರ ಬಾರಿಸುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಶ್ರೀಮಾನ್ ಸಿದ್ದರಾಮಯ್ಯನವರ ಸರ್ಕಾರ ಗಾಢ ನಿದ್ರೆಯಲ್ಲಿದೆ ಎಂದು ಬಿಜೆಪಿ ಟೀಕಿಸಿದೆ. ಬಿಜೆಪಿ ಟೀಕೆಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಾರೆ. ಅವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೆ ಏನು ಗೊತ್ತು ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:06 am, Wed, 10 July 24