ಕಾಂಗ್ರೆಸ್ ನಾಯಕರೊಬ್ಬರು ಬಿಜೆಪಿ ವರಿಷ್ಠರ ಭೇಟಿ: ಕುಮಾರಸ್ವಾಮಿ ಹೇಳಿಕೆಗೆ ಈಶ್ವರ್ ಖಂಡ್ರೆ ತಿರುಗೇಟು
ಕಾಂಗ್ರೆಸ್ ನಾಯಕರೊಬ್ಬರು ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಸಚಿವ ಈಶ್ವರ್ ಖಂಡ್ರೆ, ಕುಮಾರಸ್ವಾಮಿ ತಿರುಕನ ಕನಸು ಕಾಣುತ್ತಿದ್ದಾರೆ ಎಂದರು. ಅಲ್ಲದೆ, ಈ ದೇಶದ ಸಮಗ್ರತೆ, ಏಕತೆ, ಅಖಂಡತೆಗೆ ಧಕ್ಕೆ ತರುವ ಕೆಲಸ ಬಿಜೆಪಿ ಮಾಡುತ್ತಿದೆ. ಅದನ್ನು ಖಂಡಿಸುತ್ತೇನೆ ಎಂದರು.
ಹಾಸನ, ಡಿ.10: ಕಾಂಗ್ರೆಸ್ ನಾಯಕರೊಬ್ಬರು ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಈಶ್ವರ್ ಖಂಡ್ರೆ (Eshwar Khandre), ಕುಮಾರಸ್ವಾಮಿ ಇನ್ನೂ ತಿರುಕನ ಕನಸು ಕಾಣುತ್ತಿದ್ದಾರೆ. ಅವರ ಬಳಿ ಮಾತನಾಡಲು ಏನು ಇಲ್ಲ, ಮಾಡಲು ಕೆಲಸವೂ ಇಲ್ಲ ಎಂದರು.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲವಿದ್ದರೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಕುಮಾರಸ್ವಾಮಿ ಈ ಬಗ್ಗೆ ಮಾತನಾಡುವುದು ಬಿಟ್ಟು ತಿರುಕನ ಕನಸು ಕಾಣುತ್ತಿದ್ದಾರೆ ಎಂದರು.
60 ಶಾಸಕರನ್ನು ತಗೊಂಡು ಹೋಗುತ್ತಾರೆ, ಹಾಗೆ ಮಾಡುತ್ತಾರೆ ಹೀಗೆ ಮಾಡುತ್ತಾರೆ ಅಂತ ಕಾಯುತ್ತಿದ್ದಾರೆ. ಏನು ಆಗುವುದಿಲ್ಲ, ರಾಜ್ಯದಲ್ಲಿ ಜನರು ತೀರ್ಪು ಕೊಟ್ಟಿದ್ದಾರೆ. 136 ಜನ ಶಾಸಕರಿದ್ದಾರೆ, ಒಗ್ಗಟ್ಟಾಗಿದ್ದೇವೆ, ಜನಪರ ಆಡಳಿತ ಕೊಡುತ್ತಿದ್ದೇವೆ. ಎಲ್ಲಾ ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಿದ್ದೇವೆ, ಅಭಿವೃದ್ಧಿ ಮಾಡುತ್ತಿದ್ದೇವೆ. ಐದು ವರ್ಷ ಉತ್ತಮ ಆಡಳಿತ ಕೊಡುತ್ತೇವೆ ಎಂದರು.
ಇದನ್ನೂ ಓದಿ: ಅರ್ಜುನ ಆನೆ ಸಾವು: ಅರಣ್ಯ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ – ಈಶ್ವರ ಖಂಡ್ರೆ
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹರಿಪ್ರಸಾದ್ ಏನು ಹೇಳಿದ್ದಾರೆಂದು ಗೊತ್ತಿಲ್ಲ. ಮುಖ್ಯಮಂತ್ರಿ ಅವರು ಉತ್ತಮ ಆಡಳಿತ ಕೊಡುತ್ತಿದ್ದಾರೆ ಎಂದರು.
ಬಿಜೆಪಿ ವಿರುದ್ಧ ಈಶ್ವರ್ ಖಂಡ್ರೆ ವಾಗ್ದಾಳಿ
ಮುಸ್ಲಿಂ ಸಮುದಾಯ ಅಭಿವೃದ್ಧಿಗೆ 10 ಸಾವಿರ ಕೋಟಿ ನೀಡುತ್ತೇನೆ ಎಂಬ ಹೇಳಿಕೆಗೆ ವಿಪಕ್ಷ ಶಾಸಕರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರ್ ಖಂಡ್ರೆ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಅಂತಾ ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಈ ರಾಜ್ಯದಲ್ಲಿರುವ ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ, ಸಂವಿಧಾನ ಬದ್ಧ ಆಡಳಿತ ಕೊಡುತ್ತೇವೆ ಅಂತ ಹೇಳಿದ್ದಾರೆ, ಅದರಲ್ಲಿ ತಪ್ಪೇನಿದೆ ಎಂದರು.
ಯಾರಿಗೂ ಅನ್ಯಾಯ ಮಾಡಲ್ಲ, ಬೇರೆಯವರ ರೀತಿ ಅವರಿಗೂ ಸಂಪೂರ್ಣವಾದಂತಹ ಹಕ್ಕಿದೆ. ನ್ಯಾಯಯುತವಾಗಿ ಏನು ಮಾಡಬೇಕು ಅದನ್ನು ಜಾರಿ ಮಾಡುತ್ತೇವೆ ಅಂತ ಹೇಳಿದ್ದಾರೆ. ನೀವು ಅದಕ್ಕೂ ಧೃವಿಕರಣ ಮಾಡುತ್ತೀರಿ, ಅದರಲ್ಲೂ ಜಾತಿ, ಧರ್ಮ ತರುತ್ತೀರಿ. ಬರೀ ಜಾತಿ ಜಾತಿಗಳಲ್ಲಿ, ಧರ್ಮ ಧರ್ಮಗಳಲ್ಲಿ ಒಡೆದಾಳುವ ನೀತಿಯನ್ನು ಅನುಸರಿಸಿ ಇಡೀ ಸಾಮರಸ್ಯ ಕದಡುತ್ತಿದ್ದೀರಿ. ಈ ದೇಶದ ಸಮಗ್ರತೆ, ಏಕತೆ, ಅಖಂಡತೆಗೆ ಧಕ್ಕೆ ತರುವ ಕೆಲಸ ಬಿಜೆಪಿ ಮಾಡುತ್ತಿದೆ. ಅದನ್ನು ಖಂಡಿಸುತ್ತೇನೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:32 pm, Sun, 10 December 23