ಬೆಂಗಳೂರು: ಐತಿಹಾಸಿಕ ಮಹತ್ವ ಹೊಂದಿರುವ ಅಪರೂಪದ ಚಿನ್ನದ ನಾಣ್ಯವೊಂದು ನಗರದಲ್ಲಿ ಹರಾಜಿಗೆ ಹಾಕಲಾಗಿದೆ. 10.9 ಗ್ರಾಂ ತೂಕವಿರುವ ಚಿನ್ನದ ನಾಣ್ಯ ಮೊಘಲ್ ಚಕ್ರವರ್ತಿ ಔರಂಗಜೇಬನ ಐದನೇ ಪುತ್ರ ಕಮ್ ಬಕ್ಷ್ನದ್ದಾಗಿದೆ. ಇಲ್ಲಿನ ಪ್ರಮುಖ ನಾಣ್ಯಶಾಸ್ತ್ರೀಯ ವೇದಿಕೆ, ಮರುಧಾರ್ ಆರ್ಟ್ಸ್ ಹರಾಜು ಪ್ರಕ್ರಿಯೆ ನಡೆಸಿಕೊಡಲಿದೆ. ಇತಿಹಾಸ ಕಾಲದ 10.9 ಗ್ರಾಂ ತೂಗುವ ಚಿನ್ನದ ನಾಣ್ಯದ ಮೂಲ ಬೆಲೆ ಸುಮಾರು 45ರಿಂದ 50 ಲಕ್ಷ ರೂಪಾಯಿ ಆಗಿರಲಿದೆ.
ಈ ನಾಣ್ಯವು ಚಲಾವಣೆಯಾಗಿಲ್ಲ. 10.9 ಗ್ರಾಂ ತೂಕದ ಚಿನ್ನದ ನಾಣ್ಯ ಬಹುತೇಕ ಚಲಾವಣೆಗೊಳ್ಳದೆ ಉಳಿದಿದೆ. ಹಾಗಾಗಿ, ಈ ನಾಣ್ಯ ವೈಶಿಷ್ಟ್ಯಪೂರ್ಣ ಎನಿಸಿಕೊಂಡಿದೆ ಎಂದು ಹರಾಜು ಪ್ರಕ್ರಿಯೆ ಆಯೋಜಕ ಹಾಗೂ ಮರುಧಾರ್ ಆರ್ಟ್ಸ್ನ ಸಿಇಒ ರಾಜೇಂದ್ರ ಮರು ತಿಳಿಸಿದ್ದಾರೆ.
ಮರುಧಾರ್ ಆರ್ಟ್ಸ್ ಪೋರ್ಟಲ್ ನೀಡುವ ಮಾಹಿತಿಯಂತೆ, ಕಮ್ ಬಕ್ಷ್ ಯುದ್ಧಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರಾಗಿದ್ದ. 1707ರಲ್ಲಿ ಬಿಜಾಪುರವನ್ನು (ಈಗಿನ ವಿಜಯಪುರ) ವಶಪಡಿಸಿಕೊಂಡ ಔರಂಗಜೇಬನ ಐದನೇ ಪುತ್ರ ಕಮ್ ಬಕ್ಷ್, ತನ್ನನ್ನು ತಾನು ರಾಜನೆಂದು ಘೋಷಿಸಿಕೊಂಡಿದ್ದ.
ಕ್ರಮೇಣ ಕಮ್ ಬಕ್ಷ್ ದಖ್ಖನ್ ಪ್ರದೇಶದ ವಿವಿಧೆಡೆ ಕಮ್ ಬಕ್ಷ್ ಅಧಿಕಾರ ವಿಸ್ತರಿಸಿಕೊಂಡ. ಗುಲ್ಬರ್ಗಾ (ಈಗಿನ ಕಲಬುರ್ಗಿ), ಹೈದರಾಬಾದ್, ಶಾಪುರ್ ಮತ್ತು ವಾಕಿನ್ಖೆರ ಪ್ರದೇಶಗಳನ್ನು ಆತ ತನ್ನದಾಗಿಸಿಕೊಂಡಿದ್ದ. ಆದರೆ, ಆಡಳಿತವನ್ನು ಸುಸೂತ್ರವಾಗಿ ನಡೆಸಲು ಆಗದ ಕಾರಣ ಕಮ್ ಬಕ್ಷ್ ಸಾಮ್ರಾಜ್ಯ ಪತನಗೊಂಡಿತು. ಜನವರಿ 13, 1709ರಲ್ಲಿ ಕಮ್ ಬಕ್ಷ್ ಯುದ್ಧವೊಂದರಲ್ಲಿ ಸೆರೆಯಾಗಿದ್ದ. ಯುದ್ಧದಲ್ಲಿ ತೀವ್ರ ಗಾಯಗಳಾಗಿದ್ದ ಪರಿಣಾಮ ಮಾರನೇ ದಿನವೇ ಮೃತಪಟ್ಟಿದ್ದ.
ಈ ನಾಣ್ಯವು ವಿಶಿಷ್ಟ ಮತ್ತು ಪ್ರಮುಖವಾದದ್ದಾಗಿದೆ. ಬಿಜಾಪುರ, ಅಶಾನಬಾದ್, ನುಸ್ರತಾಬಾದ್, ಹೈದರಾಬಾದ್, ತೋರ್ಗಲ್, ಗೋಕಾಕ್, ಇಮ್ತಿಯಾಜ್ಘರ್ ಮುಂತಾದೆಡೆಗಳ ನಾಣ್ಯ ಮುದ್ರಣ ಸ್ಥಳಗಳಿಂದ ಕಮ್ ಬಕ್ಷ್ ಕಾಲದ ನಾಣ್ಯವು ಪ್ರಖ್ಯಾತಿ ಹೊಂದಿದೆ.
ಕಮ್ ಬಕ್ಷ್ ತನ್ನನ್ನು ತಾನು ರಾಜ ಎಂದು ಯಾವಾಗ ಘೋಷಿಸಿಕೊಂಡ ಎಂಬ ಬಗ್ಗೆ ತಿಳಿದಿಲ್ಲ. ಮಾರ್ಚ್ 1707ರ ಸುಮಾರಿಗೆ ತನ್ನನ್ನು ತಾನು ರಾಜ ಎಂದು ಘೋಷಿಸಿಕೊಂಡಿದ್ದ ಎಂಬ ಮಾಹಿತಿ ಇದೆ. ಬಿಜಾಪುರದ ಕೋಟೆ ಅವನ ಸುಪರ್ದಿಗೆ ಬಂದ ಮೇಲೆ ಕಮ್ ಬಕ್ಷ್ ರಾಜನಾಗಿದ್ದ. ಈ ಘಟನೆಯ ದಿನಾಂಕ ತಿಳಿದಿಲ್ಲ ಎಂದು ಮರು ಹೇಳಿಕೆ ನೀಡಿದ್ದಾರೆ.
Published On - 8:24 pm, Sat, 27 February 21