ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಶಾಕ್; ಏಪ್ರಿಲ್​ನಿಂದ ದುಬಾರಿಯಾಗಲಿವೆಯೇ ಹಲವು ಸೇವೆಗಳು? ಇಲ್ಲಿದೆ ಪೂರ್ಣ ವಿವರ

Price Hike: ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಜನರಿಗೆ ಬೆಲೆ ಏರಿಕೆಯ ಶಾಕ್ ತಟ್ಟಲಿದೆ. ಇತ್ತೀಚೆಗಷ್ಟೇ ಎಲ್​ಪಿಜಿ ದುಬಾರಿಯಾಗಿತ್ತು. ಇಂಧನ ದರವೂ ನಿಧಾನವಾಗಿ ಏರಲು ಆರಂಭವಾಗಿದೆ. ಇದರೊಂದಿಗೆ ಮತ್ತಷ್ಟು ಸೇವೆಗಳು ದುಬಾರಿಯಾಗುವ ಸೂಚನೆ ಸಿಕ್ಕಿದೆ. ಯಾವೆಲ್ಲಾ ಸೇವೆಗಳ ದರ ಏರಿಕೆಯಾಗಲಿದೆ ಎನ್ನುವುದರ ಕುರಿತ ಪೂರ್ಣ ವರದಿ ಇಲ್ಲಿದೆ.

ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಶಾಕ್; ಏಪ್ರಿಲ್​ನಿಂದ ದುಬಾರಿಯಾಗಲಿವೆಯೇ ಹಲವು ಸೇವೆಗಳು? ಇಲ್ಲಿದೆ ಪೂರ್ಣ ವಿವರ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: shivaprasad.hs

Mar 24, 2022 | 8:25 AM

ಕೊರೊನಾ ಹೊಡೆತದಿಂದ ತತ್ತರಿಸಿರುವ ಜನರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ (Price Hike) ಶಾಕ್ ಎದುರಾಗಿದೆ. ಈಗಾಗಲೇ ದೈನಂದಿನ ವಸ್ತುಗಳ ಬೆಲೆಗಳು ಮುಗಿಲುಮುಟ್ಟುತ್ತಿದ್ದು, ಜನರು ತತ್ತರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿ ಜನರಿಗೆ ಮತ್ತಷ್ಟು ಹೊರೆಯಾಗಿತ್ತು. ಈ ನಡುವೆ ವಿದ್ಯುತ್, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಮತ್ತೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಬಹಳ ಕಾಲದಿಂದ ಸ್ಥಿರವಾಗಿದ್ದ ಇಂಧನ ದರವೂ ನಿಧಾನಗತಿಯಲ್ಲಿ ಏರಿಕೆ ಕಾಣಲು ಆರಂಭಿಸಿದೆ. ಇದರ ಬೆನ್ನಲ್ಲೇ ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ದರ ಏರಿಕೆಯಾದರೆ ಜನರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ. ಹಲವು ಸೇವೆಗಳು ದರ ಹೆಚ್ಚಿಸಲು ಸಿದ್ಧರಾಗಿರುವುದು ಗಮನಕ್ಕೆ ಬಂದಿದ್ದು, ಯಾವೆಲ್ಲಾ ಸೇವೆಗಳ ದರ ಏರಿಕೆಯಾಗಲಿದೆ? ಜನರಿಗೆ ಇದರಿಂದ ಹೇಗೆ ಹೊಡೆತ ಬೀಳಲಿದೆ ಎನ್ನುವುದರ ಕುರಿತ ಪೂರ್ಣ ವರದಿ ಇಲ್ಲಿದೆ.

ಬೆಂಗಳೂರು ನಗರವಾಸಿಗಳಿಗೆ ಬೆಸ್ಕಾಂ ಬಿಗ್ ಶಾಕ್!

ಬೆಂಗಳೂರಿನ ಜನರಿಗೆ ಏಪ್ರಿಲ್ 1ರಿಂದ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ. ಈ ಬಗ್ಗೆ ಬೆಸ್ಕಾಂ ನಿರ್ಧರಿಸಿದೆ. ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC- Karnataka Electricity Regulatory Commission) ಮುಂದಾಗಿದ್ದು, ಏಪ್ರಿಲ್ 1ರಿಂದ ಅನ್ವಯವಾಗುವಂತೆ ಹೊಸ ದರ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಈಗಾಗಲೇ ಫೆಬ್ರವರಿಯಲ್ಲಿ ಎಸ್ಕಾಂಗಳು ಹಾಗೂ ಸಾರ್ವಜನಿಕರಿಂದ ಕೆಇಆರ್​ಸಿ ಅಭಿಪ್ರಾಯ ಸಂಗ್ರಹ ಮಾಡಿದೆ. ಶೀಘ್ರದಲ್ಲೇ ಹೊಸ ವಿದ್ಯುತ್ ಪರಿಷ್ಕರಣೆ ದರದ ಪಟ್ಟಿಯನ್ನು KERC ಬಿಡುಗಡೆ ಮಾಡಲಿದೆ.

ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ KERC ದರ ಪರಿಷ್ಕರಣೆ ಮಾಡುತ್ತದೆ. ಕಂಪನಿಗಳ ನಿರ್ವಹಣೆ ವೆಚ್ಚ ಹೆಚ್ಚಳ ಹಿನ್ನಲೆಯಲ್ಲಿ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಸೇರಿದಂತೆ ಇತರೆ ವಿದ್ಯುತ್ ಸರಬರಾಜು ಕಂಪನಿಗಳಿಂದ ವಿದ್ಯುತ್ ದರ ಪರಿಷ್ಕರಣೆಗೆ ಒತ್ತಡ ಹೆಚ್ಚುತ್ತಿದೆ. ಪ್ರತಿ ಯೂನಿಟ್​ಗೆ 1.50 ರೂ. ಹೆಚ್ಚಿಸುವಂತೆ ಬೆಸ್ಕಾಂ ಪ್ರಸ್ತಾವನೆ ಕಳುಹಿಸಿದೆ. ಜನರಿಗೆ ಹೊರೆಯಾಗದಂತೆ ವಿದ್ಯುತ್ ದರ ಪರಿಷ್ಕರಣೆ ಮಾಡಲು KERC ಮುಂದಾಗಿದೆ. 2022-23 ರ ಸಾಲಿನಲ್ಲಿ ಪ್ರತಿ ಯೂನಿಟ್​ಗೆ 35 ರಿಂದ 45 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದ್ದು ಈ ತಿಂಗಳ ಅಂತ್ಯದಲ್ಲಿ ಹೊಸ ವಿದ್ಯುತ್ ದರ ಪರಿಷ್ಕರಣೆ ಪಟ್ಟಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಯಾವ ವರ್ಷ ಎಷ್ಟೆಷ್ಟು ದರ ಪರಿಷ್ಕರಣೆಯಾಗಿತ್ತು? – 2009 ರಲ್ಲಿ ಪ್ರತಿ ಯೂನಿಟ್​ಗೆ 34 ಪೈಸೆ ಹೆಚ್ಚಳ – 2010 ರಲ್ಲಿ ಪ್ರತಿ ಯೂನಿಟ್​ಗೆ 30 ಪೈಸೆ ಹೈಕ್ – 2011 ರಲ್ಲಿ ಪ್ರತಿ ಯೂನಿಟ್​ಗೆ 28 ಪೈಸೆ ಹೈಕ್ – 2012 ರಲ್ಲಿ ಪ್ರತಿ ಯೂನಿಟ್​ಗೆ 13 ಪೈಸೆ ಹೆಚ್ಚಳ – 2013 ರಲ್ಲಿ ಪ್ರತಿ ಯೂನಿಟ್​ಗೆ 13 ಪೈಸೆ ಹೈಕ್ – 2017 ರಲ್ಲಿ ಪ್ರತಿ ಯೂನಿಟ್​ಗೆ 48 ಪೈಸೆ ಹೆಚ್ಚಳ – 2019 ರಲ್ಲಿ ಪ್ರತಿ ಯೂನಿಟ್​ಗೆ 35 ಪೈಸೆ ಹೆಚ್ಚಳ – 2020 ರಲ್ಲಿ ಪ್ರತಿ ಯೂನಿಟ್​ಗೆ 30 ಪೈಸೆ ಹೆಚ್ಚಳ

ಏಪ್ರಿಲ್​ನಿಂದ ಹಾಲಿನ ದರ ಏರಿಕೆಯಾಗುವ ಸಾಧ್ಯತೆ:

ಮುಂದಿನ ತಿಂಗಳು ಅಂದರೆ ಏಪ್ರಿಲ್​ನಿಂದ ಹಾಲಿನ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಹಾಲು ಒಕ್ಕೂಟಗಳು ಬೆಲೆ ಏರಿಕೆಗೆ ಪಟ್ಟು ಹಿಡಿದಿದ್ದು, 5 ರೂಪಾಯಿ ಏರಿಕೆಗೆ ಮನವಿ ಮಾಡಿವೆ. ಕನಿಷ್ಠ 2 ರೂಪಾಯಿ ಏರಿಕೆ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದೆ. ಅಧಿವೇಶನ ಮುಗಿದ ಬಳಿಕವೇ ದರ ಏರಿಕೆಗೆ ಅನುಮತಿ ನೀಡಲಾಗುತ್ತದೆ ಎನ್ನಲಾಗಿದೆ. ಕಳೆದ 2 ವರ್ಷಗಳಿಂದ ಕೆಎಂಎಫ್ ಹಾಲಿನ ದರ ಏರಿಕೆ ಮಾಡಿಲ್ಲ. ಹೀಗಾಗಿ 14 ಹಾಲು ಒಕ್ಕೂಟಗಳಿಂದ ದರ ಏರಿಕೆಗೆ ಒತ್ತಡ ಹೇರಲಾಗಿದೆ. ಹಾಲಿನ ದರ ಏರಿಕೆ ಮಾಡದಿದ್ದರೆ ಪ್ರತಿಭಟನೆ ಎಚ್ಚರಿಕೆಯನ್ನೂ ನೀಡಲಾಗಿದೆ. ಹೀಗಾಗಿ ಏಪ್ರಿಲ್‌ನಲ್ಲಿ ಹಾಲು ದರ ಹೆಚ್ಚಳವಾಗುವ ಸಾಧ್ಯತೆ ಇದೆ.

ಟಿವಿ9ಗೆ ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಹೇಳಿಕೆ ನೀಡಿ ‘‘ಹಾಲಿನ ದರ ಏರಿಕೆಯಾಗಬೇಕು. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ. ಸದ್ಯ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಇದ್ದು, ದರ ಏರಿಕೆಗೆ ಇದು ಸೂಕ್ತವಾದ ಸಮಯವಾಗಿದೆ. ಮಾರ್ಚ್ 28 ರಂದು‌ ಸಭೆ ನಡೆಸುವ ಕುರಿತು ಚರ್ಚೆ ನಡೆಸುತ್ತಿದ್ದೇವೆ’’ ಎಂದು ಹೇಳಿದ್ದಾರೆ.

ಇತ್ತೀಚೆಗೆ ಏರಿದ್ದ ಎಲ್​ಪಿಜಿ ಸಿಲಿಂಡರ್ ಬೆಲೆ:

ಮಾ.22ರಂದು 14.2 ಕೆಜಿ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 50 ರೂ. ಏರಿಕೆ ಮಾಡಲಾಗಿತ್ತು. ಇದರಿಂದ 902.50 ಇದ್ದ ಎಲ್​ಪಿಜಿ ಸಿಲಿಂಡರ್ ಬೆಲೆ 952.50 ರೂಗೆ ಏರಿತ್ತು. ವಾಣಿಜ್ಯ ಸಿಲಿಂಡರ್​ನಲ್ಲಿ 100 ರೂ ಏರಿಕೆಯಾಗಿದ್ದು, 19 ಕೆಜಿಯ ಸಿಲಿಂಡರ್​ಗೆ 2,100 ರೂ ದರ ನಿಗದಿಯಾಗಿತ್ತು.

ದರ ಏರಿಕೆ ಮಾಡಲಿವೆಯೇ ಹೋಟೆಲ್​ಗಳು? ​ ಅಗತ್ಯ ವಸ್ತುಗಳ ದರ ಏರಿಕೆಯಿಂದ ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಹೋಟೆಲ್ ತಿಂಡಿ ದರ ಏರಿಕೆಯ ಬಗ್ಗೆ ಹೋಟೆಲ್ ಮಾಲೀಕರು ಇನ್ನೂ ತೀರ್ಮಾನಿಸಿಲ್ಲ. ಸದ್ಯ ಅಡುಗೆ ಎಣ್ಣೆ, ಸಿಲಿಂಡರ್ ದರ ದುಬಾರಿಯಾಗಿದ್ದು, ತರಕಾರಿ, ದಿನಸಿ ಪದಾರ್ಥಗಳ ದರದಲ್ಲಿ ಏರಿಕೆ ಆಗಿಲ್ಲ. ಒಂದು ವೇಳೆ ಇವು ಏರಿಕೆಯಾದರೆ ತಿಂಡಿ, ಊಟದ ದರ ಏರಿಸಲು ಚಿಂತನೆ ನಡೆಸಲಾಗಿದೆ. ಹೀಗಾಗಿ ಮುಂದಿನ ತಿಂಗಳಿನವರೆಗೆ ಕಾದು ನೋಡುವ ತಂತ್ರಕ್ಕೆ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.

ಇದನ್ನೂ ಓದಿ:

Petrol Diesel Price: ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ: ಪ್ರಮುಖ ನಗರಗಳಲ್ಲಿ ಇಂಧನ ದರದ ವಿವರ ಹೀಗಿದೆ

‘ಜೇಮ್ಸ್​​’ ಚಿತ್ರ ತೆಗೆಯದಂತೆ ಫಿಲ್ಮ್ ಚೇಂಬರ್​ಗೆ ಸಿಎಂ ಕಚೇರಿಯಿಂದ ಫೋನ್​​ ಕರೆ; ಮಹತ್ವದ ಸಭೆಗೆ ಸಿದ್ಧತೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada