ಬೆಂಗಳೂರು: ಜನವರಿ 1ರಿಂದ ಶಾಲಾ-ಕಾಲೇಜುಗಳು ಪ್ರಾರಂಭವಾಗಲಿದೆ.. ಆದರೆ ಕೊವಿಡ್-19 ನಿಯಂತ್ರಣಾ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಹೇಳಿದ್ದಾರೆ.
ತಾಂತ್ರಿಕ ಸಲಹಾ ಸಮಿತಿ ಬಳಿಕ ಸುದ್ದಿಗೋಷ್ಠಿ ನಡೆಸಿದ ಸುರೇಶ್ ಕುಮಾರ್, ಒಂದು ತರಗತಿಯಲ್ಲಿ 15 ಮಕ್ಕಳಿಗೆ ಅಷ್ಟೇ ಪಾಠ ಮಾಡಲು ಅವಕಾಶ. ಶಾಲೆ ಪ್ರಾರಂಭ ಮಾಡಲು ಮುಂದಡಿ ಇಟ್ಟಿರುವ ನಮ್ಮ ಜತೆ ಗ್ರಾಮೀಣಾಭಿವೃದ್ಧಿ, ಆರೋಗ್ಯ, ಸಾರಿಗೆ ಇಲಾಖೆಗಳು ಸಹಕರಿಸಬೇಕು ಎಂದಿದ್ದಾರೆ.
ಇನ್ನು ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂಬುದನ್ನು ಪೋಷಕರು ಬರೆದು, ಸಹಿ ಮಾಡಿಕೊಡಬೇಕು. ಪ್ರತಿ ಜಿಲ್ಲಾಡಳಿತವೂ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳು ಪೋಷಕರ ಒಪ್ಪಿಗೆ ಪತ್ರದ ಜತೆಗೇ ಶಾಲೆಗೆ ಬರುವುದು ಕಡ್ಡಾಯ. ಇಲ್ಲದಿದ್ದರೆ ಅವರಿಗೆ ತರಗತಿಗೆ ಪ್ರವೇಶ ಇರುವುದಿಲ್ಲ. ಅವರ ಮೇಲೆ ಜಾಸ್ತಿ ಒತ್ತಡ ಹೇರುವ ಹಾಗಿಲ್ಲ. ಶಾಲೆ ಶುರುವಾದ ಒಂದುವಾರದ ಒಳಗಡೆ ಸಿಲೆಬಸ್, ಪರೀಕ್ಷೆ ದಿನಾಂಕ ಪ್ರಕಟವಾಗಲಿದೆ. ಡಿಡಿ ಚಂದನದಲ್ಲೂ ಪಠ್ಯಕ್ರಮ ಮುಂದುವರಿಯಲಿದೆ ಎಂದು ಹೇಳಿದರು.
ಬಿಸಿಯೂಟ ಇಲ್ಲ
ಮಧ್ಯಾಹ್ನ ಬಿಸಿಯೂಟ ನೀಡುವ ಬಗ್ಗೆಯೂ ಸಲಹೆ ಇದೆ. ಆದರೆ ಸದ್ಯಕ್ಕೆ ಬಿಸಿಯೂಟ ನೀಡುವುದಿಲ್ಲ. ಊಟಕ್ಕೆ ಸೇರುವಾಗ ಮಕ್ಕಳು ಗುಂಪುಗೂಡುತ್ತಾರೆ. ಅದರ ಬದಲು ರೇಷನ್ ನೀಡುವುದಕ್ಕೆ ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಇಂದು ರಾತ್ರಿಯಿಂದಲೇ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಣೆ