
ಬೆಂಗಳೂರು, ಅಕ್ಟೋಬರ್ 09: ತಮ್ಮ ಹೆಸರಿನಲ್ಲಿರುವ ಜಾಗದ ಮೇಲೆ ಇನ್ಯಾರೋ ಸಾಲ ಮಾಡಿದ ಪರಿಣಾಮ ಬಡ ದಂಪತಿ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಯಲಹಂಕ ಮಾರುತಿ ನಗರದ 15ನೇ ಕ್ರಾಸ್ ನಲ್ಲಿ ನಡೆದಿದೆ. 40 ಲಕ್ಷ ಲೋನ್ (Loan) ಕಟ್ಟಿಲ್ಲ ಎಂದು ಖಾಸಗಿ ಫೈನಾನ್ಸ್ ಸಿಬಂದಿ ಮನೆ ಸೀಜ್ ಮಾಡಿರುವ ಕಾರಣ ಕೂಲಿ ಮಾಡಿ ಜೀವನ ನಡೆಸುತ್ತಿದ್ದ ದಂಪತಿ ಕಂಗಾಲಾಗಿದ್ದಾರೆ. ನ್ಯಾಯಕ್ಕೆ ಆಗ್ರಹಿಸಿ ಮನೆ ಮುಂದೆ ಪಾತ್ರೆಗಳನ್ನು ಇಟ್ಟು ಕಣ್ಣೀರು ಹಾಕುತ್ತಿದ್ದಾರೆ.
ತಂದೆಯಿಂದ ದಾನಪತ್ರದ ಮೂಲಕ ಬಂದಿದ್ದ 40×45 ಅಳತೆಯ ಸೈಟ್ ನಲ್ಲಿ ಸಣ್ಣ ಮನೆ ಕಟ್ಟಿಕೊಂಡು ಕಳೆದ 30 ವರ್ಷಗಳಿಂದ ರತ್ನಮ್ಮ ಮತ್ತು ವೆಂಕಟೇಶ್ ದಂಪತಿ ವಾಸವಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಮನೆ ಬಳಿಗೆ ಬಂದ ಖಾಸಗಿ ಫೈನಾನ್ಸ್ ಸಿಬ್ಬಂದಿ, ಈ ಸೈಟ್ ಮೇಲೆ 40 ಲಕ್ಷ ಲೋನ್ ತೆಗೆದುಕೊಂಡು ವಾಪಸ್ ಕಟ್ಟಿಲ್ಲ ಅಂತ ಮನೆಗೆ ನೋಟಿಸ್ ಅಂಟಿಸಿದ್ದಾರೆ. ಜೊತೆಗೆ ಲೋನ್ ಕಟ್ಟದ ಕಾರಣ ಮನೆ ಸೀಜ್ ಮಾಡುವುದಾಗಿ ಹೇಳಿ ಮನೆಯಲ್ಲಿದ್ದ ಪಾತ್ರೆ ಸಾಮಾನುಗಳನ್ನ ಹೊರಗಡೆ ಹಾಕಿ ಮನೆಗೆ ಬೀಗ ಹಾಕಿದ್ದಾರೆ. ಇದರಿಂದ ಯಾವುದೇ ಲೋನ್ ಮಾಡದೆ ಜೀವನ ನಡೆಸುತ್ತಿದ್ದ ಈ ದಂಪತಿ ಕಂಗೆಟ್ಟಿದ್ದಾರೆ.
ಇದನ್ನೂ ಓದಿ: ಚಡಚಣ SBI ದರೋಡೆ ಕೇಸ್: 3 ಆರೋಪಿಗಳ ಬಂಧನ; 9 ಕೆ.ಜಿ. ಚಿನ್ನ, 86 ಲಕ್ಷ ರೂ. ನಗದು ರಿಕವರಿ
ಎಲ್ಲ ದಾಖಲೆಗಳು ರತ್ನಮ್ಮ ಹೆಸರಿನಲ್ಲೇ ಇದ್ದರೂ ಖಾಸಗಿ ಫೈನಾನ್ಸ್ ಸಂಸ್ಥೆಯವರು ಜಯಪ್ರಕಾಶ್ ಎಂಬುವವರ ಹೆಸರಲ್ಲಿ 40 ಲಕ್ಷ ಲೋನ್ ನೀಡಿದ್ದಾರೆ. ಅವರು ಯಾರು ಎಂಬುದೇ ನಮಗೆ ಗೊತ್ತಿಲ್ಲ. ನಮ್ಮ ಗಮನಕ್ಕೂ ತರದೆ ಲೋನ್ ನೀಡಿದ್ದು ಇದೀಗ ಮನೆ ಸೀಜ್ ಮಾಡಿ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಮನೆ ದಾಖಲೆಗಳ ಸಮೇತ ಪೊಲೀಸ್ ಠಾಣೆಗೆ ನ್ಯಾಯ ಕೇಳಲು ಹೋದರೂ ಯಾರೊಬ್ಬರು ಸ್ವಂದಿಸುತ್ತಿಲ್ಲ ಎನ್ನುವುದು ದಂಪತಿ ಆರೋಪ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.