ಬೆಂಗಳೂರಿನಲ್ಲಿ ಅಗ್ನಿ ದುರಂತ: ಲಾಡ್ಜ್ನ ಒಂದೇ ರೂಮಿನಲ್ಲಿದ್ದ ಯುವಕ-ಯುವತಿ ಸಜೀವ ದಹನ
ಬೆಂಗಳೂರಿನ ಯಲಹಂಕದ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಕಟ್ಟಡದಲ್ಲಿದ್ದ ಲಾಡ್ಜ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಗದಗ ಮೂಲದ ಯುವಕ ಮತ್ತು ಹುನಗುಂದ ಮೂಲದ ಯುವತಿ ಸಜೀವ ದಹನವಾಗಿರುವಂತಹ ಘಟನೆ ನಡೆದಿದೆ. ಸದ್ಯ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಅಕ್ಟೋಬರ್ 09: ಬೆಂಕಿ ಅನಾಹುತದಿಂದ (Fire accident) ಯುವಕ ಮತ್ತು ಯುವತಿ ಸಜೀವ ದಹನವಾಗಿರುವಂತಹ (death) ಘಟನೆ ಬೆಂಗಳೂರಿನ ಯಲಹಂಕದಲ್ಲಿರುವ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಲಾಡ್ಜ್‌ನಲ್ಲಿ ನಡೆದಿದೆ. ಗದಗ ಮೂಲದ ಯುವಕ ರಮೇಶ್ ಮತ್ತು ಹುನಗುಂದ ಮೂಲದ ಕಾವೇರಿ ಬಡಿಗೇರ್ ಮೃತರು. ಸದ್ಯ ಇಬ್ಬರ ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಡೆದದ್ದೇನು?
ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಬಿಲ್ಡಿಂಗ್ನಲ್ಲಿದ್ದ ಲಾಡ್ಜ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ಯುವಕ ಮತ್ತು ಯುವತಿ ಲಾಡ್ಜ್ನ ಒಂದೇ ರೂಮಿನಲ್ಲಿದ್ದರು. ಲಾಡ್ಜ್ನ ಬಾತ್ರೂಂ ಒಳಗಡೆ ಯುವತಿ ಇದ್ದು, ಬಾಗಿಲು ಹಾಕಲಾಗಿತ್ತು. ಹೊಗೆ ಬಂದ ತಕ್ಷಣ ಯುವತಿಯೇ ಲಾಡ್ಜ್ನವರಿಗೆ ಕರೆ ಮಾಡಿದ್ದಳು. ರೂಂ ಕೂಡ ಲಾಕ್ ಆಗಿತ್ತು. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಬಂದು ಬಾಗಿಲು ಹೊಡೆದು ಒಳಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಇಬ್ಬರು ಮೃತಪಟ್ಟಿದ್ದರು.
ಇದನ್ನೂ ಓದಿ: ಮೂಡಲಗಿ: ಪತ್ನಿ ಕೊಂದು 2 ದಿನ ಶವದೊಂದಿಗೆ ಕಳೆದ ಪತಿ, ಕೊಲೆಗೆ ಅದೇ ಕಾರಣನಾ?
ಮೃತ ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ರೆಸ್ಟೋರೆಂಟ್ ಸಮೀಪದ ಬಿಲ್ಡಿಂಗ್ ಸ್ಫಾನಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ರೆಸ್ಟೋರೆಂಟ್ನ 3ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿಬ್ಬಂದಿ ಮತ್ತು ಗ್ರಾಹಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ರಕ್ಷಣೆ ಕಾರ್ಯ ಮಾಡಲಾಗುತ್ತಿದೆ.
ಡಿಸಿಪಿ ಸಜೀತ್ ಹೇಳಿದ್ದಿಷ್ಟು
ಈ ಬಗ್ಗೆ ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಸಜೀತ್ ಹೇಳಿಕೆ ನೀಡಿದ್ದು, ಯಲಹಂಕದ ಕಿಚನ್ 6 ರೆಸ್ಟೋರೆಂಟ್ನಲ್ಲಿ ಅವಘಡ ಸಂಭವಿಸಿದೆ. ಲಾಡ್ಜ್ನ 3ನೇ ಮಹಡಿಯ ರೂಮ್ನಲ್ಲಿದ್ದ ರಮೇಶ್ ಮತ್ತು ಕಾವೇರಿ ಬಡಿಗೇರ ಮೃತಪಟ್ಟಿದ್ದಾರೆ. ಆತ್ಮಹತ್ಯೆನಾ ಅಥವಾ ಏನು ಎಂದು ತನಿಖೆ ಮಾಡುತ್ತೇವೆ. ಇಬ್ಬರು ಕಳೆದ 1 ವಾರದಿಂದ ಲಾಡ್ಜ್ನಲ್ಲಿದ್ದರು ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ರಮೇಶ್, ಕಾವೇರಿ ನಡುವೆ ಜಗಳವಾಗಿತ್ತು. ಮಧ್ಯಾಹ್ನ ಕಾವೇರಿ ರೂಮ್ನಲ್ಲಿದ್ದರೆ, ರಮೇಶ್ ಹೊರಹೋಗಿದ್ದ. ರೂಮ್ಗೆ ಹಿಂದಿರುಗುವಾಗ ಪೆಟ್ರೋಲ್ ತುಂಬಿದ್ದ ಬಾಟಲಿ ತಂದಿದ್ದ. ರೂಮ್ನಲ್ಲಿ ರಮೇಶ್, ಕಾವೇರಿ ಮತ್ತೆ ಜಗಳವಾಡಿರುವ ಸಾಧ್ಯತೆ ಇದ್ದು, ಜಗಳ ವಿಕೋಪವಾಗಿ ರಮೇಶ್ ಪೆಟ್ರೋಲ್ ಸುರಿದುಕೊಂಡಿದ್ದಾನೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಾವೇರಿ ಬಾತ್ರೂಮ್ಗೆ ಓಡಿದ್ದಾಳೆ ಎಂದರು.
ಇದನ್ನೂ ಓದಿ: ಚಡಚಣ SBI ದರೋಡೆ ಕೇಸ್: 3 ಆರೋಪಿಗಳ ಬಂಧನ; 9 ಕೆ.ಜಿ. ಚಿನ್ನ, 86 ಲಕ್ಷ ರೂ. ನಗದು ರಿಕವರಿ
ಬಾತ್ರೂಮ್ ಡೋರ್ ಲಾಕ್ ಮಾಡಿಕೊಂಡಿದ್ದ ಕಾವೇರಿ, ತನ್ನ ಸ್ಪಾ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಳು. ಅಷ್ಟೊತ್ತಿಗಾಗಲೇ ಬೆಂಕಿ ಕೆನ್ನಾಲಿಗೆ ಇಡೀ ರೂಮ್ಗೆ ವ್ಯಾಪಿಸಿತ್ತು. ಬೆಂಕಿ ಜ್ವಾಲೆಯಲ್ಲಿ ಸಿಲುಕಿ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹೊಗೆಯಿಂದ ಉಸಿರುಗಟ್ಟಿ ಕಾವೇರಿ ಕೂಡ ಮೃತಪಟ್ಟಿದ್ದಾಳೆ. ಸದ್ಯ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಡಿಸಿಪಿ ವಿ.ಜೆ.ಸಜೀತ್ ಹೇಳಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟೆ ಕ್ರೈಂ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:51 pm, Thu, 9 October 25




