Amit Shah: ಪುತ್ತೂರು, ಮಂಗಳೂರಿಗೆ ಫೆ. 11ಕ್ಕೆ ಅಮಿತ್ ಶಾ ಭೇಟಿ; ಬಿಜೆಪಿ ಭದ್ರಕೋಟೆಯಲ್ಲಿ ಕೇಸರಿ ಕಹಳೆ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 10, 2023 | 10:41 AM

Union Home Minister Visiting Dakshina Kannada: ಹಿಂದಿನ ಭೇಟಿಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯಲ್ಲಿ ಕೇಸರಿ ಕಹಳೆ ಮೊಳಗಿಸಿದ್ದ ಮಾಜಿ ಬಿಜೆಪಿ ಅಧ್ಯಕ್ಷ ಹಾಗೂ ಚುನಾವಣಾ ಚಾಣಕ್ಯ ಎಂದು ಹೆಸರಾದ ಅಮಿತ್ ಶಾ ಪುತ್ತೂರು ಹಾಗೂ ಮಂಗಳೂರಿನಲ್ಲಿ ಒಂದು ದಿನದ ಪ್ರವಾಸ ನಡೆಸಲಿದ್ದಾರೆ.

Amit Shah: ಪುತ್ತೂರು, ಮಂಗಳೂರಿಗೆ ಫೆ. 11ಕ್ಕೆ ಅಮಿತ್ ಶಾ ಭೇಟಿ; ಬಿಜೆಪಿ ಭದ್ರಕೋಟೆಯಲ್ಲಿ ಕೇಸರಿ ಕಹಳೆ
ಅಮಿತ್ ಶಾ
Follow us on

ಮಂಗಳೂರು: ಪುತ್ತೂರಿನ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ಕೇಂದ್ರ ಸಚಿವ ಅಮಿತ್ ಶಾ ನಾಳೆ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ ಜನರು ತಾವಾಗಿಯೇ ಗೆಲ್ಲಿಸಿಕೊಡುವಷ್ಟು ಸಾಧನೆಯನ್ನು ನಾವು ಮಾಡಿಲ್ಲ ಅನ್ನೋ ಕಟು ಸತ್ಯ ಬಿಜೆಪಿಗಗೂ ತಿಳಿದಿದೆ. ಹೀಗಾಗಿ ಪ್ರಬಲ ನಾಯಕರ ಹೆಸರಲ್ಲಿ ತನ್ನ ಭದ್ರಕೋಟೆಗಳನ್ನು ಉಳಿಸಿಕೊಳ್ಳುವ ಸಾಹಸ ಮಾಡ್ತಿರುವ ಬಿಜೆಪಿ ಕರಾವಳಿ ಜಿಲ್ಲೆಗೆ ಅಮಿತ್ ಶಾ ಭೇಟಿಗೆ ರತ್ನಗಂಬಳಿ ಹಾಸಿದೆ.

ರಾಜ್ಯ ವಿಧಾನಸಭಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಪ್ರಚಾರ ಕಾರ್ಯವನ್ನು ನಡೆಸುವ ಯಾವುದೇ ಸಣ್ಣ ಅವಕಾಶವೂ ತಪ್ಪಿಹೋಗಲು ಬಿಡುತ್ತಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಜಿದ್ದಿಗೆ ಬಿದ್ದವರಂತೆ ಕರ್ನಾಟಕಕ್ಕೆ ಬರುತ್ತಲೇ ಇದ್ದಾರೆ. ಹಿಂದಿನ ಭೇಟಿಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯಲ್ಲಿ ಕೇಸರಿ ಕಹಳೆ ಮೊಳಗಿಸಿದ್ದ ಮಾಜಿ ಬಿಜೆಪಿ ಅಧ್ಯಕ್ಷ ಹಾಗೂ ಚುನಾವಣಾ ಚಾಣಕ್ಯ ಎಂದು ಹೆಸರಾದ ಅಮಿತ್ ಶಾ ಪುತ್ತೂರು ಹಾಗೂ ಮಂಗಳೂರಿನಲ್ಲಿ ಒಂದು ದಿನದ ಪ್ರವಾಸ ನಡೆಸಲಿದ್ದು, ಅವರ ಕಾರ್ಯಕ್ರಮದ ವಿವರ ಇಲ್ಲಿದೆ:

ಅಮಿತ್ ಶಾ ಮಂಗಳೂರು ಭೇಟಿ ವೇಳಾಪಟ್ಟಿ
ಫೆಬ್ರುವರಿ 11, ಶನಿವಾರ
ಮಧ್ಯಾಹ್ನ 2.15 – ಕಣ್ಣೂರು ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮನ.
ಮಧ್ಯಾಹ್ನ 2.45 – ಕಣ್ಣೂರಿನಿಂದ ಬಿಎಸ್ಎಫ್‌ ಹೆಲಿಕಾಪ್ಟರ್‌ ಮೂಲಕ ಪುತ್ತೂರಿನ ಈಶ್ವರ ಮಂಗಲಕ್ಕೆ ಆಗಮನ.
ಮಧ್ಯಾಹ್ನ 2.50 – ಈಶ್ವರಮಂಗಲ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ಮಧ್ಯಾಹ್ನ 3.35 – ಹೆಲಿಕಾಪ್ಟರ್‌ ಮೂಲಕ ಈಶ್ವರ ಮಂಗಲದಿಂದ ಪುತ್ತೂರಿಗೆ ಆಗಮನ.
ಮಧ್ಯಾಹ್ನ 3.40: ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಭಾಗಿ
ಸಂಜೆ 6.00: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮನ
ಸಂಜೆ 6:15 ರಿಂದ 8:00 : ಏರ್​ಪೋರ್ಟ್ ಸಮೀಪ ಬಿಜೆಪಿ ಪ್ರಮುಖರೊಂದಿಗೆ ಆಂತರಿಕ ಸಭೆ
ರಾತ್ರಿ 8:15 : ಮಂಗಳೂರು ಏರ್​ಪೋರ್ಟ್​ನಿಂದ ದೆಹಲಿಗೆ ಪ್ರಯಾಣ

ಇದನ್ನೂ ಓದಿ: ರೋಗಿಗೆ ಅವಧಿ ಮುಗಿದ ಔಷಧಿ ನೀಡಿದ ತುಮಕೂರಿನ ಖಾಸಗಿ ಆಸ್ಪತ್ರೆ: ಪ್ರಶ್ನಿಸಿದ್ದಕ್ಕೆ ಉಡಾಫೆ ಉತ್ತರ ನೀಡಿದ ವೈದ್ಯ

ಶನಿವಾರ ಮಧ್ಯಾಹ್ನ 2:15ಕ್ಕೆ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿಂದ ಬಿಎಸ್​ಎಫ್ ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಈಶ್ವರ ಮಂಗಲಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 2:50ಕ್ಕೆ ಈಶ್ವರ ಮಂಗಲ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಬಿಜೆಪಿ ಚಾಣಕ್ಯ ಬಳಿಕ ಹೆಲಿಕಾಪ್ಟರ್ ಮೂಲಕ ಪುತ್ತೂರಿಗೆ ಬಂದಿಳಿಯಲಿದ್ದಾರೆ. ಇಲ್ಲಿ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿರಿವ ಅಮಿತ್ ಶಾ ಸಂಜೆ ಆರು ಗಂಟೆ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಲಿದ್ದಾರೆ. ಸಂಜೆ ಆರು ಹದಿನೈದರಿಂದ ರಾತ್ರಿ ಎಂಟು ಗಂಟೆಯವರೆಗೂ ಮಂಗಳೂರು ಏರ್​ಪೋರ್ಟ್ ಸಮೀಪ ಬಿಜೆಪಿ ಪ್ರಮುಖರೊಂದಿಗೆ ಅಮಿತ್ ಶಾ ಆಂತರಿಕ ಸಭೆ ನಡೆಸಲಿದ್ದಾರೆ. ಈ ಸಭೆ ಮುಕ್ತಾಯಗೊಂಡ ಬಳಿಕ ಅಮಿತ್ ಶಾ ದೆಹಲಿಗೆ ಮರಳಲಿದ್ದಾರೆ.

ಕೊರಗಜ್ಜನ ಕೋಲ ಹಿನ್ನೆಲೆ ರದ್ದಾಯ್ತು ಮಂಗಳೂರು ರೋಡ್​ ಶೋ..!
ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದ ನೆಪದಲ್ಲಿ ಮಂಗಳೂರಿನಲ್ಲಿ ಭರ್ಜರಿ ಪ್ರಚಾರ ಕಾರ್ಯವನ್ನು ನಡೆಸಬೇಕು ಅನ್ನೋದು ಬಿಜೆಪಿ ಪ್ಲಾನ್ ಆಗಿತ್ತು. ಹೀಗಾಗಿ ಪುತ್ತೂರಿನ ಕ್ಯಾಂಪ್ಕೋ ಸುವರ್ಣ ಮಹೋತ್ಸವದಲ್ಲಿ ಭಾಷಣ ಮಾಡಿದ ಬಳಿಕ ಅಮಿತ್ ಶಾ ಮಂಗಳೂರಿನಲ್ಲಿ ಬೃಹತ್ ರೋಡ್ ಶೋನಲ್ಲಿ ಭಾಗಿಯಾಗುವವರಿದ್ದರು. ಆದರೆ ರೋಡ್ ಶೋ ಮಾರ್ಗ ಮಧ್ಯದಲ್ಲಿಯೇ ಬರುವ ಪದವಿನಂಗಡಿಯಲ್ಲಿ ಕೊರಗಜ್ಜನ ಕೋಲ ನಡೆಯುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ರೋಡ್ ಶೋ ರದ್ದುಗೊಳಿಸಲಾಗಿದೆ.

2018ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಬರೋಬ್ಬರಿ 7 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ ತನ್ನ ಹಾಲಿ ಕ್ಷೇತ್ರಗಳನ್ನು ಉಳಿಸಿಕೊಳ್ಳೋಕೆ ಇನ್ನಿಲ್ಲದ ಸರ್ಕಸ್ ಮಾಡ್ತಿದೆ. ಹೇಗಾದರೂ ಮಾಡಿ ತನ್ನ ಭದ್ರಕೋಟೆ ಛಿದ್ರವಾಗದಂತೆ ನೋಡಿಕೊಳ್ಳುವ ಒತ್ತಡ ಕೂಡ ಬಿಜೆಪಿ ಮೇಲೆ ಇರೋದ್ರಿಂದ ಅಮಿತ್ ಶಾ ಕರಾವಳಿ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.

ವರದಿ: ಅಶೋಕ್, ಟಿವಿ9 ಕನ್ನಡ, ಮಂಗಳೂರು