ವಯಸ್ಕರು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಕಲಬುರಗಿ ಜಿಲ್ಲಾಡಳಿತದಿಂದ ವಿನೂತನ ಅಭಿಯಾನ

| Updated By: ganapathi bhat

Updated on: Apr 05, 2021 | 8:29 PM

ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಆತಂಕ ಹೆಚ್ಚಿಸಿದೆ. ಏಕೆಂದರೆ ಲಸಿಕೆ ಹಾಕಿಸಿಕೊಂಡರೆ, ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಸಾವಿನ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ವೃದ್ಧರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಕೆ ಪಡುತ್ತಿರುವುದರಿಂದ, ಅವರ ಮನವೊಲಿಕೆಗೆ ಇದೀಗ ಆರೋಗ್ಯ ಇಲಾಖೆ ಅಧಿಕಾರಿಗಳು ಕಸರತ್ತು ನಡೆಸುತ್ತಿದ್ದಾರೆ.

ವಯಸ್ಕರು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಕಲಬುರಗಿ ಜಿಲ್ಲಾಡಳಿತದಿಂದ ವಿನೂತನ ಅಭಿಯಾನ
ಕಲಬುರಗಿ ಜಿಲ್ಲಾಧಿಕಾರಿ ವಿ. ವಿ ಜೋತ್ಸ್ನಾ ಅವರು ತಮ್ಮ ತಂದೆಗೆ ಕೊರೊನಾ ಲಸಿಕೆ ಕೊಡಿಸಿದ ದೃಶ್ಯ
Follow us on

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾದಿಂದ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿಗೆ ಬಲಿಯಾಗುತ್ತಿರುವವರಲ್ಲಿ ಹೆಚ್ಚಿನವರು ವೃದ್ದರೇ ಆಗಿದ್ದಾರೆ. ಮತ್ತೊಂದಡೆ ಜಿಲ್ಲೆಯಲ್ಲಿ ವೃದ್ದರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಜಿಲ್ಲಾಡಳಿತ ವೃದ್ದರಿಗೆ ಲಸಿಕೆ ಹಾಕಿಸಿಕೊಳ್ಳಲು ಹೊಸದಂದು ಅಭಿಯಾನ ಪ್ರಾರಂಭ ಮಾಡಿದೆ. ದೇಶದಲ್ಲಿ ಕೊರೊನಾ ಮೊದಲು ಬಲಿ ಪಡೆದಿದ್ದೇ ಕಲಬುರಗಿ ನಗರದ ವೃದ್ದನನ್ನು. ಮಾರ್ಚ್ 10, 2020 ರಂದು ಕಲಬುರಗಿ ನಗರದ 76 ವರ್ಷದ ವೃದ್ದನನ್ನು ಬಲಿ ಪಡೆದಿತ್ತು. ದೇಶದಲ್ಲಿ ಇದು ಮೊದಲ ಕೊರೊನಾದ ಸಾವು ಎಂದು ದೊಡ್ಡ ಸುದ್ದಿಯಾಗಿತ್ತು. ಜೊತೆಗೆ ದೇಶದಲ್ಲಿಯೇ ಕಲಬುರಗಿ ಜನರನ್ನು ಭಯದಿಂದ ನೋಡುವ ವಾತಾವರಣ ನಿರ್ಮಾಣವಾಗಿತ್ತು.

ಕೊರೊನಾ ಮೊದಲು ಬಲಿ ಪಡೆದು ವರ್ಷವಾಗಿದೆ. ಆದರೆ ಇಂದಿಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡೆಮೆಯಾಗುತ್ತಿಲ್ಲ. ಜಿಲ್ಲೆಯಲ್ಲಿ ಕೊರೊನಾದ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಿದ್ದು, ಇದೀಗ ಮತ್ತೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ವೃದ್ಧರು ಮೃತಪಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿರುವ ವೃದ್ಧರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ವೃದ್ದರಿಗೆ ಪ್ರಾಣ ಕಂಟಕವಾದ ಕೊರೊನಾ
ಕಳೆದ ಆರೇ ದಿನಗಳಲ್ಲಿ ಜಿಲ್ಲೆಯಲ್ಲಿ ಒಂಬತ್ತು ಜನರು ಕೊರೊನಾಗೆ ಬಲಿಯಾಗಿದ್ದಾರೆ. ಏಪ್ರಿಲ್ ನಾಲ್ಕರಿಂದ ಜಿಲ್ಲೆಯಲ್ಲಿ ಮೂರು ಜನ ಮೃತಪಟ್ಟಿದ್ದಾರೆ. ಏಪ್ರಿಲ್ ಮೂರರಂದು ಓರ್ವ, ಎರಡರಂದು ಓರ್ವ, ಒಂದರಂದು ಓರ್ವ, ಕಳೆದ ಮಾರ್ಚ್ 31 ರಂದು ಇಬ್ಬರು, ಮಾರ್ಚ್ ಮೂವತ್ತರಂದು ಓರ್ವ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನು ಮೃತರೆಲ್ಲರು ಕೂಡ ಆರವತ್ತು ವರ್ಷ ಮೇಲ್ಪಟ್ಟವರೇ ಆಗಿದ್ದಾರೆ.

ರಕ್ತದೊತ್ತಡ, ಸಕ್ಕರೆ ಖಾಯಿಲೆ, ಮೂತ್ರ ಪಿಂಡದ ತೊಂದರೆ ಸೇರಿದಂತೆ ಅನೇಕ ಕಾರಣಗಳಿಂದ ಬಳಲುತ್ತಿದ್ದವರು, ಕೊರೊನಾ ಸೋಂಕು ತಗುಲಿದ ನಂತರ ಮೃತಪಟ್ಟಿದ್ದಾರೆ. ಒಂಬತ್ತು ಜನರಲ್ಲಿ ಎಂಟು ಜನ ಪುರುಷರು ಇದ್ದರೆ, ಓರ್ವ ಮಾತ್ರ ವೃದ್ಧೆ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಇಲ್ಲಿವರಗೆ ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಬರೋಬ್ಬರಿ 349 ಜನರನ್ನು ಬಲಿ ಪಡೆದಿದೆ. ಇದರಲ್ಲಿ ಬಹುತೇಕರು ವೃದ್ಧರಾಗಿದ್ದಾರೆ.

ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕ್ತಿರೋ ವೃದ್ಧರು
ಒಂದೆಡೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ವೃದ್ಧರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೂಡ ಅನೇಕ ವೃದ್ಧರು ಆಸಕ್ತಿ ತೋರದೆ ಇರುವುದು ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ನಡೆಸಿದ ಸರ್ವೇ ಪ್ರಕಾರ, 1.90 ಲಕ್ಷ ಜನ ಆರವತ್ತು ವರ್ಷ ಮೇಲ್ಪಟ್ಟ ವೃದ್ಧರಿದ್ದಾರೆ. ಆದರೆ 1.90 ಲಕ್ಷ ವೃದ್ಧರ ಪೈಕಿ ಇಲ್ಲಿವರೆ ಲಸಿಕಿ ಹಾಕಿಸಿಕೊಂಡವರು ಮಾತ್ರ ಕೇವಲ ಹದಿನೈದು ಸಾವಿರ ವೃದ್ಧರು ಮಾತ್ರ.

ಅಂಕಿ ಸಂಖ್ಯೆಗಳನ್ನು ನೋಡಿದರೆ, ಬಹುತೇಕ ವೃದ್ಧರು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ವೃದ್ಧರಿಗೆ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಯನ್ನು ಹಾಕುತ್ತಿದೆ. ಆದರೆ ಉಚಿತವಾಗಿ ಲಸಿಕೆ ನೀಡಿದರು ಕೂಡ ಹೆಚ್ಚಿನ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೆಮುಂದೆ ನೋಡುತ್ತಿದ್ದಾರೆ. ಅದರಲ್ಲೂ ನಗರಕ್ಕಿಂತ ಗ್ರಾಮೀಣ ಬಾಗದಲ್ಲಿರುವ ಬಹುತೇಕ ವೃದ್ದರು ಲಸಿಕೆ ಹಾಕಿಸಿಕೊಂಡಿಲ್ಲ.

ಇದು ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಆತಂಕ ಹೆಚ್ಚಿಸಿದೆ. ಏಕೆಂದರೆ ಲಸಿಕೆ ಹಾಕಿಸಿಕೊಂಡರೆ, ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಸಾವಿನ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ವೃದ್ಧರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಕೆ ಪಡುತ್ತಿರುವುದರಿಂದ, ಅವರ ಮನವೊಲಿಕೆಗೆ ಇದೀಗ ಆರೋಗ್ಯ ಇಲಾಖೆ ಅಧಿಕಾರಿಗಳು ಕಸರತ್ತು ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜಾಗೃತಿ ಕೊರತೆಯಿಂದ ಹೆಚ್ಚಿನ ಜನರಿಗೆ ಇನ್ನು ಕೂಡ ಹಿಂಜರಿಕೆ ಇದೆ. ಇನ್ನು ಆರೋಗ್ಯ ಇಲಾಖೆಗೆ ಹೋಗಿ ಬರಲು ವಾಹನದ ಸೌಕರ್ಯಗಳಿಲ್ಲದೇ ಇರುವುದರಿಂದ ಹೆಚ್ಚಿನ ವೃದ್ಧರು ಲಸಿಕೆ ಹಾಕಿಸಿಕೊಂಡಿಲ್ಲ.

ಹಿರಿಯರಿಗೆ ಲಸಿಕೆ ಹಾಕಿಸಿ ಅಭಿಯಾನ
ಜಿಲ್ಲೆಯಲ್ಲಿ ವೃದ್ಧರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದ ಜಿಲ್ಲಾಡಳಿತ, ಇದೀಗ ಹೊಸದೊಂದು ಅಭಿಯಾನ ಪ್ರಾರಂಭಿಸಿದೆ. ಆ ಪ್ರಕಾರ ವೃದ್ಧರನ್ನು ಆಸ್ಪತ್ರೆಗೆ ಕರೆ ತಂದು ಅವರಿಗೆ ಲಸಿಕೆ ಹಾಕಿಸುವ ಜವಾಬ್ದಾರಿ ಇದೀಗ ಮಕ್ಕಳು ಮತ್ತು ಮೊಮ್ಮಕಳ ಮೇಲಿದೆ.

ಈ ಬಗ್ಗೆ ಮಕ್ಕಳಲ್ಲಿ ಮನವಿ ಮಾಡಿಕೊಳ್ಳುತ್ತಿರುವ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ, ವೃದ್ಧರನ್ನು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಲು ಪ್ರೋತ್ಸಾಹಿಸುತ್ತಿದೆ. ಸ್ವತಃ ಕಲಬುರಗಿ ಜಿಲ್ಲಾಧಿಕಾರಿ ವಿ. ವಿ ಜೋತ್ಸ್ನಾ ಅವರು ತಮ್ಮ ತಂದೆಯನ್ನು ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅವರಿಗೆ ಲಸಿಕೆ ಕೊಡಿಸುವ ಮೂಲಕ, ನಾನು ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ನೀವು ನಿಮ್ಮ ಜವಾಬ್ದಾರಿ ನಿರ್ವಹಿಸಿ ಎಂದು ಮನವಿ ಮಾಡಿದ್ದಾರೆ.

ಮಕ್ಕಳಿದ್ದಾಗ ಮನೆಯಲ್ಲಿನ ಹೆತ್ತವರು ಮಕ್ಕಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸುವ ಮೂಲಕ, ಅವರು ಮಕ್ಕಳ ಬಗ್ಗೆ ಇದ್ದ ಜವಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಇದೀಗ ಮಕ್ಕಳ ಜವಬ್ದಾರಿಯಿದೆ. ನಿಮ್ಮ ಮನೆಯಲ್ಲಿ ವಯಸ್ಸಾದ ತಂದೆ ತಾಯಿ, ಅಜ್ಜ -ಅಜ್ಜಿಯಿದ್ದರೆ, ಅವರನ್ನು ಕರೆದುಕೊಂಡು ಹೋಗಿ ಮೊದಲು ಅವರಿಗೆ ಲಸಿಕೆ ಹಾಕಿಸಿ. ಆ ಮೂಲಕ ನೀವು ಇದೀಗ ನಿಮ್ಮ ಜವಾಬ್ದಾರಿಯನ್ನು ಪೂರ್ತಿಗೊಳಿಸಬೇಕು. ಯಾರು ಕೂಡ ಲಸಿಕೆ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸ್ವತಃ ನಾನು ಲಸಿಕೆ ತೆಗೆದುಕೊಂಡಿದ್ದೇನೆ. ನನ್ನ ತಂದೆಯನ್ನು ಕೂಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಲಸಿಕೆ ಕೊಡಿಸಿದ್ದೇನೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ. ವಿ ಜೋತ್ಸ್ನಾ ಹೇಳಿದ್ದಾರೆ.

(ವರದಿ: ಸಂಜಯ್ ಚಿಕ್ಕಮಠ- 9980510149)

ಇದನ್ನೂ ಓದಿ: ಅತ್ತ ರಮೇಶ್​ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್​; ಇತ್ತ ಸಿಡಿ ಸಂತ್ರಸ್ತೆ ಎಸ್​ಐಟಿ ವಿಚಾರಣೆಗೆ ಗೈರು

(An innovative campaign by the District Administration of Kalaburagi to prevent coronavirus infection in old age)