ಅತ್ತ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್; ಇತ್ತ ಸಿಡಿ ಸಂತ್ರಸ್ತೆ ಎಸ್ಐಟಿ ವಿಚಾರಣೆಗೆ ಗೈರು
ಅತ್ತ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಅವರು ಸದ್ಯಕ್ಕೆ ಬೆಂಗಳೂರಿನತ್ತ ತಲೆ ಹಾಕುವುದೇ ಅನುಮಾನವಾಗಿದೆ. ಇತ್ತ ಸಿಡಿ ಸಂತ್ರಸ್ತೆ ವಿಚಾರಣೆಗೆ ಬರಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಸಮಯ ಮಧ್ಯಾಹ್ನ 1 ಗಂಟೆಯಾದರೂ ಆಕೆ ಪತ್ತೆಯಾಗಿಲ್ಲ.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಸಂತ್ರಸ್ತ ಯುವತಿ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅತ್ತ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಅವರು ಸದ್ಯಕ್ಕೆ ಬೆಂಗಳೂರಿನತ್ತ ತಲೆ ಹಾಕುವುದೇ ಅನುಮಾನವಾಗಿದೆ. ಇತ್ತ ಸಿಡಿ ಸಂತ್ರಸ್ತೆ ವಿಚಾರಣೆಗೆ ಬರಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಸಮಯ ಮಧ್ಯಾಹ್ನ 1 ಗಂಟೆಯಾದರೂ ಆಕೆ ಪತ್ತೆಯಾಗಿಲ್ಲ.
ಅಶ್ಲೀಲ ಸಿಡಿಗೆ ಸಂಬಂಧಿಸಿದಂತೆ ನಿರಂತರ ವಿಚಾರಣೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಈಗಾಗಲೇ ಸಂತ್ರಸ್ತ ಯುವತಿಯ ಪಿಜಿಗೆ ತೆರಳಿ ಸ್ಥಳ ಮಹಜರು ಮಾಡಿ ಆಕೆಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ವಿಡಿಯೋ ಚಿತ್ರೀಕರಣ ನಡೆದಿದೆ ಎನ್ನಲಾದ ಫ್ಲ್ಯಾಟ್ಗೂ ತೆರಳಿ ವಿಚಾರಣೆ ಕೈಗೊಂಡಿದ್ದಾರೆ. ಸಂತ್ರಸ್ತ ಯುವತಿಗೆ ಸರಣಿ ಪ್ರಶ್ನಾವಳಿಗಳನ್ನು ಇಟ್ಟ ಎಸ್ಐಟಿ ತನಿಖಾಧಿಕಾರಿಗಳು ಆಕೆಯ ಹಣದ ಮೂಲ ಸೇರಿದಂತೆ ಹಲವು ವಿಚಾರಗಳನ್ನು ಕೆದಕಿದ್ದರು.
ವಿಚಾರಣೆ ವೇಳೆ ರಮೇಶ್ ಜಾರಕಿಹೊಳಿ ತನಗೆ ಸುಮಾರು ₹18 ಲಕ್ಷ ಮೌಲ್ಯದ ಆಭರಣ, ಎರಡು ಬ್ಯಾಗ್ ಬಟ್ಟೆ ಹಾಗೂ ಮೊಬೈಲ್ ಉಡುಗೊರೆ ನೀಡಿದ್ದಾರೆ ಎಂದು ಬಾಯ್ಬಿಟ್ಟಿದ್ದ ಯುವತಿ ಅವುಗಳಿಗೆ ಸಂಬಂಧಿಸಿದ ಬಿಲ್ ಸಹಿತ, ಶಾಪ್ಗಳ ಹೆಸರನ್ನೂ ತಿಳಿಸಿದ್ದರು. ಯುವತಿ ಕಡೆಯಿಂದ ಇಷ್ಟೆಲ್ಲಾ ಬೆಳವಣಿಗೆ ಆಗುತ್ತಿದ್ದರೂ ರಮೇಶ್ ಜಾರಕಿಹೊಳಿ ಮಾತ್ರ ಅನಾರೋಗ್ಯದ ನೆಪವೊಡ್ಡಿ ಅಜ್ಞಾತ ಸ್ಥಳದಲ್ಲಿ ಉಳಿದು ವಿಚಾರಣೆಯಿಂದ ದೂರವಿದ್ದಾರೆ.
ಏತನ್ಮಧ್ಯೆ ಅವರಿಗೆ ಹಾಗೂ ಅವರ ಕಾರು ಚಾಲಕ, ಅಡುಗೆ ಸಹಾಯಕರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಇನ್ನೂ ಕೆಲ ದಿನಗಳ ಕಾಲ ವಿಚಾರಣೆಯಿಂದ ವಿನಾಯಿತಿ ಪಡೆಯಲು ಅವಕಾಶ ಲಭಿಸಿದಂತಾಗಿದೆ. ಸದ್ಯ ಸಿಡಿ ಸಂತ್ರಸ್ತೆಯೂ ವಿಚಾರಣೆಗೆ ಗೈರಾಗಿರುವುದು ಎಸ್ಐಟಿ ತನಿಖೆಗೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಏನಾಗಿತ್ತು? ಉಸಿರಾಟದ ತೊಂದರೆಯಾಗಿ, ನಿನ್ನೆ ರಾತ್ರಿಯೇ ಐಸಿಯುಗೆ ದಾಖಲು ಎಂದ ಡಾ.ರವೀಂದ್ರ
ಕಾರು ಚಾಲಕ, ಅಡುಗೆ ಭಟ್ಟನಿಗೂ ಕೊರೊನಾ: ಇನ್ನು 15 ದಿನ ಬೆಂಗಳೂರು ಕಡೆ ತಲೆಹಾಕೋಲ್ಲ ರಮೇಶ್ ಜಾರಕಿಹೊಳಿ
Published On - 1:02 pm, Mon, 5 April 21