ಹಾಸನ: ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಒಂದು ದಿನ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಸನ ಜಿಲ್ಲೆಯ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಎದುರು ಅಂಗನವಾಡಿ ನೌಕರರು ಧರಣಿ ನಡೆಸುತ್ತಿದ್ದು, ಭರವಸೆ ನೀಡಿ ಮೋಸಮಾಡಲಾಗಿದೆ ಎಂದು ಸರ್ಕಾರ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಕೂಲಿ ಕಾರ್ಮಿಕರ ಹೋರಾಟ:
ಎಮ್ಎನ್ಆರ್ಇಜಿ ವತಿಯಿಂದ ಸಮರ್ಪಕ ಕೂಲಿ ನೀಡದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಕರಡಿ ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗಿದೆ. ಎಮ್ಎನ್ಆರ್ಇಜಿಯಿಂದ ಸರಿಯಾಗಿ ಕೆಲಸ ನೀಡುತ್ತಿಲ್ಲ. ಕೇಳಿದರೆ ಸರಿಯಾಗಿ ಉತ್ತರಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಕರಡಿ ಗ್ರಾಮದಲ್ಲಿ ಗ್ರಾಮೀಣ ಕೂಲಿಕಾರು ಧರಣಿ ನಡೆಸಿದ್ದಾರೆ.
ಕೆಲ ಕಾರ್ಮಿಕರಿಗೆ ಮಾತ್ರ ಕೆಲಸ ನೀಡುತ್ತಾರೆ. ಬಹುತೇಕ ಗ್ರಾಮೀಣ ಕೂಲಿಕಾರರಿಗೆ ಕೆಲಸ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಪಂಚಾಯಿತಿ ಸಿಬ್ಬಂದಿ ಮೇಲೆ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮೀಣ ಕೂಲಿಕಾರರು ಆಗ್ರಹಿಸಿದ್ದಾರೆ.
ಕೂಲಿ ಕಾರ್ಮಿಕರ ಪ್ರತಿಭಟನೆ
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ:
ಇ-ಸಮೀಕ್ಷೆಗೆ ಅಸಮಾಧಾನ ವ್ಯಕ್ತಪಡಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನ ಮುಂಭಾಗದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಡಿಮೆ ಸಂಬಳ ಕೊಟ್ಟು ಎಲ್ಲಾ ಕೆಲಸ ಮಾಡಿ ಎನ್ನುತ್ತಾರೆ. ಆಶಾ ಕಾರ್ಯಕರ್ತೆಯರು ಗುಲಾಮರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇ- ಸಮೀಕ್ಷೆ ಎಂದರೆ ಮನೆ ಮನೆಗೆ ಹೋಗಿ (ಆರ್ಥಿಕ) ಎಲ್ಲಾ ದಾಖಲೆಗಳನ್ನು ಕಲೆಹಾಕುವುದು. ಇ-ಸಮೀಕ್ಷೆ ಮಾಡಲು ತರಬೇತಿ ನೀಡಲಾಗುತ್ತಿದೆ. ಆದರೆ ಕಡಿಮೆ ಅವಧಿಯಲ್ಲಿ ಟಾರ್ಗೆಟ್ ನೀಡಿ, ಸಮೀಕ್ಷೆ ಮಾಡಿ ಎನ್ನುತ್ತಿದ್ದಾರೆ. ಮೊಬೈಲ್ ಡಾಟಾ ಕೂಡ ನೀಡುತ್ತಿಲ್ಲ. ಮೊಬೈಲ್ ಇಲ್ಲಾ ಎಂದರೆ ಹೊಸ ಮೊಬೈಲ್ ತಗೊಳಿ ಎನ್ನುತ್ತಾರೆ. ಮೊಬೈಲ್ ತಗೊಂಡಿಲ್ಲಾ ಎಂದರೆ ಕೆಲಸ ಬಿಡಿ ಎಂದು ಹೇಳುತ್ತಾರೆ. ಕೇವಲ 4 ಸಾವಿರ ಅಷ್ಟೇ ಸಂಬಳ ನೀಡುತ್ತಾರೆ. ಇನ್ಸೆಂಟಿವ್ ಯಾವ ಯಾವಗೋ ಬರುತ್ತದೆ ಗೊತ್ತಿಲ್ಲ. ಫೆಬ್ರವರಿಯದ್ದೇ ಇನ್ನೂ ಇನ್ಸೆಂಟಿವ್ ಬಂದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳ ವಿರುದ್ಧ ಪೋಷಕರ ಧರಣಿ, ಕಪ್ಪು ಪಟ್ಟಿ ಹಿಡಿದು ಪ್ರತಿಭಟನೆ:
ಶುಲ್ಕ ಕಡಿತ ಮಾಡದ ಖಾಸಗಿ ಶಾಲೆಗಳ ವಿರುದ್ಧ ಇಂದು ಪ್ರತಿಭಟನೆ ನಡೆಯುತ್ತಿದ್ದು, ಮಹಾಲಕ್ಷ್ಮೀ ಲೇಔಟ್‌ನ ಶ್ರೀಚೈತನ್ಯ ಟೆಕ್ನೊ ಖಾಸಗಿ ಶಾಲೆ ಮುಂದೆ ಹಾಗೂ ಲಗ್ಗೆರೆಯ ನಾರಾಯಣ ಸ್ಕೂಲ್ ಎದುರು ಪೋಷಕರು ಧರಣಿ ನಡೆದುತ್ತಿದ್ದಾರೆ. ಸರ್ಕಾರದ ಆದೇಶ ಪ್ರತಿ ಇನ್ನೂ ಕೈ ಸೇರಿಲ್ಲ ಎಂದು ನೆಪ ಹೇಳುತ್ತಿರುವ ಖಾಸಗಿ ಶಾಲೆಗಳು, ಇದರ ಜೊತೆಗೆ ಶುಲ್ಕ ಕಡಿತದ ಆದೇಶ ವಿಚಾರ ಕೋರ್ಟ್ನಲ್ಲಿದೆ ಎಂದು ಹೇಳುತ್ತಿವೆ. ಇದಲ್ಲದೇ ಖಾಸಗಿ ಶಾಲೆಯವರು ಪೂರ್ಣ ಶುಲ್ಕ ಕಟ್ಟುವಂತೆ ನಿತ್ಯ ಟಾರ್ಚರ್ ಮಾಡುತ್ತಿದ್ದಾರೆ. ಪೂರ್ಣ ಶುಲ್ಕ ಕಟ್ಟಿಲ್ಲವಾದರೆ ಟಿಸಿ ತಗೊಳ್ಳಿ ಎಂದು ಬೆದರಿಕೆ ಹಾಕಿದ್ದಾರೆ. ಕ್ಲಾಸ್ ಟೆಸ್ಟ್ಗೂ ಹಾಲ್ ಟಿಕೆಟ್ ಕಡ್ಡಾಯ ಮಾಡಿರುವ ಕೆಲ ಖಾಸಗಿ ಶಾಲೆಗಳ ವಿರುದ್ಧ ಪೊಷಕರು ಕಪ್ಪು ಪಟ್ಟಿ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಶುಲ್ಕ ಕಡಿತ ಮಾಡದ ಖಾಸಗಿ ಶಾಲೆಗಳ ವಿರುದ್ಧ ಪೋಷಕರ ಪ್ರತಿಭಟನೆ
ಇದನ್ನೂ ಓದಿ: Bank Strike: ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಇಂದಿನಿಂದ 2 ದಿನ ಮುಷ್ಕರ