ಪೂಜಾ ಕುಣಿತವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡ ಅಂಕನಹಳ್ಳಿ ಶಿವಣ್ಣ; 40 ವರ್ಷದಿಂದ ಜಾನಪದ ಕಲೆ ಪ್ರದರ್ಶನ

| Updated By: preethi shettigar

Updated on: Jul 13, 2021 | 8:04 AM

ರಾಜಸ್ಥಾನ, ಹೈದರಾಬಾದ್, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಿವಣ್ಣ ಪ್ರದರ್ಶನ ನೀಡಿದ್ದಾರೆ. ಅಂದಹಾಗೆ ಪೂಜಾ ಕುಣಿತವನ್ನೇ ಜೀವನದ ಉಸಿರಾಗಿಸಿಕೊಂಡಿರುವ ಅಂಕನಹಳ್ಳಿ ಶಿವಣ್ಣ ಅವರಿಗೆ 2019-20ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಪೂಜಾ ಕುಣಿತವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡ ಅಂಕನಹಳ್ಳಿ ಶಿವಣ್ಣ; 40 ವರ್ಷದಿಂದ ಜಾನಪದ ಕಲೆ ಪ್ರದರ್ಶನ
ಪೂಜಾ ಕುಣಿತದಲ್ಲಿ ನಿರತರಾಗಿರುವ ಅಂಕನಹಳ್ಳಿ ಶಿವಣ್ಣ
Follow us on

ರಾಮನಗರ: ತಮಟೆಯ ಹಿಮ್ಮೇಳದ ಜತೆಗೆ ಬರುವ ಪೂಜಾ ಕುಣಿತ ಜನಪದ ಕಲೆಗಳಲ್ಲಿಯೇ ಗಂಡು ಕಲೆ ಎಂಬ ಪ್ರಸಿದ್ಧಿ ಪಡೆದಿದೆ. ‘ಜಗ್ಗುಣಕ ಣಕ್ಕ ಣಕ್ಕ, ಜಗ್ಗುಣಕ್ಕ ಣಕ್ಕ ಣಕ್ಕ’ ಎನ್ನುವ ತಮಟೆಯ ಸದ್ದಿಗೆ ತಲೆದೂಗುವದವರಿಲ್ಲ. ತಮಟೆಯ ನಾದ ಎಂತಹವರನ್ನೂ ಕೂಡ ಕುಣಿಯುವಂತೆ ಪ್ರೇರೇಪಿಸುತ್ತದೆ. ಇಂತಹ ಪೂಜಾ ಕುಣಿತವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಪ್ರದರ್ಶಿಸಿ, ಸಾಧನೆ ಮೆರೆದವರು ಹಲವರಿದ್ದಾರೆ. ಅಂತಹವರಲ್ಲಿ ರಾಮನಗರ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ಶಿವಣ್ಣ ಕೂಡ ಒಬ್ಬರು.

ಸಾಮಾನ್ಯವಾಗಿ ವಿಶೇಷ ಪೂಜೆ, ಜಾತ್ರೆ, ಇನ್ನಿತರ ಮಹೋತ್ಸವಗಳಲ್ಲಿ ಪೂಜಾ ಕುಣಿತವನ್ನು ನಾವು ಕಂಡಿರುತ್ತೇವೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಕೂಡ ಈ ಕುಣಿತಕ್ಕೆ ತಲೆದೂಗುತ್ತಾರೆ. 30 ರಿಂದ 40 ಕೆಜಿಯಷ್ಟು ಭಾರವಾದ ದೇವರ ಪೂಜೆಯನ್ನು ಹೊತ್ತು ದೇಹದ ಸಮತೋಲನ ಕಾಪಾಡಿಕೊಂಡು, ಲೋಟ, ಮಡಿಕೆ, ಏಣಿಯ ಮೇಲೆ ನಡೆಯುವ ಇವರ ಸಾಹಸ ಪ್ರದರ್ಶನ ಮೈನವಿರೇಳಿಸುತ್ತದೆ. ಪೂಜೆಯ ಪಟವನ್ನು ಹೊತ್ತು ತಮಟೆ ಬಡಿಯುವುದು, ಮಕ್ಕಳನ್ನು ಎತ್ತಿಕೊಂಡು ಕಂಕುಳಲ್ಲಿರಿಸುವುದು, ಕಣ್ಣಿನ ರೆಪ್ಪೆಯ ಮೂಲಕ ನೆಲದ ಮೇಲಿನ ನೋಟು ತೆಗೆಯುವುದು ಸೇರಿದಂತೆ ಹಲವು ಸಾಹಸ ಪ್ರದರ್ಶನವನ್ನು ಈ ಸಮಯದಲ್ಲಿ ಮಾಡುವುದು ವಾಡಿಕೆ.

ಈ ಎಲ್ಲಾ ಪ್ರದರ್ಶನಗಳನ್ನು ಶಿವಣ್ಣ ಕೂಡ ಮಾಡುತ್ತಾರೆ. ಪೂಜಾ ಕುಣಿತದ ಕಲೆ ಹಾಗೂ ಸಂಸಾರದ ನೊಗ ಎರಡನ್ನು ಒಟ್ಟಿಗೆ ಹೊರುವ ಮೂಲಕ ಸಮತೋಲನವನ್ನು ಇವರು ಕಾಯ್ದುಕೊಂಡಿದ್ದಾರೆ. ರಾಷ್ಟ್ರ ಹಾಗೂ ರಾಜ್ಯದ ಪ್ರಮುಖ ಎಲ್ಲಾ ಉತ್ಸವಗಳಲ್ಲೂ ಶಿವಣ್ಣ ಪ್ರದರ್ಶನ ನೀಡಿದ್ದಾರೆ. ಮೂರನೇ ತರಗತಿಯವರೆಗೆ ಓದಿರುವ ಇವರು 14ನೇ ವಯಸ್ಸಿಗೆ ಪೂಜಾ ಕುಣಿತವನ್ನು ಕಲಿತರು. ಒಮ್ಮೆ ನಾಗವಾರ ಶಿವಲಿಂಗಯ್ಯ ಶಿವಣ್ಣ ಅವರ ಊರಿನಲ್ಲಿ ಪೂಜಾ ಕುಣಿತವನ್ನು ಪ್ರದರ್ಶಿಸಿದ್ದು, ಇದು ಇವರ ಮೇಲೆ ಪ್ರಭಾವ ಬೀರಿತು. ನಂತರದ ದಿನಗಳಲ್ಲಿ ಶಿವಣ್ಣ ಅಭ್ಯಾಸ ಪ್ರಾರಂಭಿಸಿದರು.

ರಾಗಿ ಮಾಡುವ ಕಣದಲ್ಲಿ ಮಡಕೆ, ಒನಕೆ, ನಂತರ ಮಕ್ಕಳನ್ನು ಎತ್ತಿಕೊಂಡು ಅಭ್ಯಾಸ ಮಾಡಿದರು. ಮೊದಲ ಪ್ರದರ್ಶನಕ್ಕೆ 10 ರೂಪಾಯಿ ತೆಗೆದುಕೊಂಡಿದ್ದ ಇವರು ಈಗ ಒಂದು ಪ್ರದರ್ಶನಕ್ಕೆ ಎರಡು ಸಾವಿರ ತೆಗೆದುಕೊಳ್ಳುತ್ತಾರೆ. ರಾಮನಗರ ಜಿಲ್ಲೆಯಲ್ಲಿ ಪೂಜಾ ಕುಣಿತದ ಪ್ರದರ್ಶನ ನೀಡುವವರಲ್ಲಿ ಅಂಕನಹಳ್ಳಿ ಶಿವಣ್ಣ ಪ್ರಮುಖರು. ಹೆಜ್ಜೆಯ ಗತ್ತು, ದೇಹವನ್ನು ಕುಣಿತಕ್ಕೆ ಬಾಗಿ ಬಳುಕಿಸಿ ಚಂದ ಕಟ್ಟುವ ರೀತಿ, ಭಾವಕ್ಕೆ ಹೊಂದಿಸುವ ಕ್ರಮ, ಪ್ರದರ್ಶನದ ಬಿರುಸನ್ನು ಕಾಯ್ದುಕೊಳ್ಳುವ ಬಗೆಯನ್ನು ಇವರ ಪ್ರದರ್ಶನದಲ್ಲಿ ಕಾಣಬಹುದು.

ರಾಜಸ್ಥಾನ, ಹೈದರಾಬಾದ್, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಿವಣ್ಣ ಪ್ರದರ್ಶನ ನೀಡಿದ್ದಾರೆ. ಅಂದಹಾಗೆ ಪೂಜಾ ಕುಣಿತವನ್ನೇ ಜೀವನದ ಉಸಿರಾಗಿಸಿಕೊಂಡಿರುವ ಅಂಕನಹಳ್ಳಿ ಶಿವಣ್ಣ ಅವರಿಗೆ 2019-20ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಜಾನಪದ ಲೋಕದ ನಿರ್ಮಾತೃ ಎಚ್.ಎಲ್. ನಾಗೇಗೌಡರ ಪರಿಚಯವಾದುದು ನನ್ನ ಪೂಜಾ ಕುಣಿತದ ಪ್ರದರ್ಶನಕ್ಕೆ ತಿರುವು ನೀಡಿತು. ಸುಮಾರು 40 ವರ್ಷಗಳಿಂದ ಪೂಜಾ ಕುಣಿತ ಪ್ರದರ್ಶನವನ್ನು ಮಾಡುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ನೀಡಿದ್ದೇನೆ. ಸಾವಿರಾರು ಜನರಿಗೆ ಪೂಜಾ ಕುಣಿತ ಕಲಿಸಿ ಕೊಟ್ಟಿದ್ದೇನೆ. ಯುವ ಸಮುದಾಯಕ್ಕೆ ಜನಪದ ಕಲೆಗಳನ್ನು ಕಲಿಯಲು ಆಸಕ್ತಿ ಇದೆ. ಆದರೆ ಕಲಿಸುವವರ ಕೊರತೆ ನಮ್ಮಲ್ಲಿದೆ. ಜನಪದ ಕಲೆಗಳನ್ನು ಕಲಿತರೆ ಭವಿಷ್ಯವಿಲ್ಲ, ಜೀವನ ನಡೆಸಲು ಸಾಧ್ಯವಿಲ್ಲ ಎಂದು ಬಿಂಬಿಸಲಾಗುತ್ತಿದೆ. ಈಗಲೂ ನಾನು ಜನಪದ ಕಲೆಗಳ ಪ್ರದರ್ಶನದ ಮೂಲಕ ಉತ್ತಮವಾದ ಜೀವವನ್ನು ನಡೆಸುತ್ತಿದ್ದೇನೆ. ನನಗೆ ಜನಪದ ಕಲಾವಿದನೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಪೂಜಾ ಕುಣಿತದ ಹಿರಿಯ ಕಲಾವಿದ ಅಂಕನಹಳ್ಳಿ ಶಿವಣ್ಣ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:
ಶಿವಮೊಗ್ಗ ರಂಗಾಯದಲ್ಲಿ ಕಲಾಕೃತಿಗಳ ಅನಾವರಣ: ಸಿಮೆಂಟ್​ನಲ್ಲಿ ನಿರ್ಮಾಣವಾದ ಕಲೆಗೆ ಮನಸೋತ ಸ್ಥಳೀಯರು

ಕಲಾಪ್ರಿಯರನ್ನು ಸೆಳೆಯುತ್ತಿದೆ ಉಡುಪಿಯ ಚಿತ್ರಾಲಯ ಆರ್ಟ್ ಗ್ಯಾಲರಿ; ಮಣ್ಣಿನಲ್ಲಿಯೇ ತಯಾರಾಗುತ್ತೆ ವಿಶಿಷ್ಟ ಕಲಾಕೃತಿ