ಬೆಂಗಳೂರು ಅ.19: ಅನ್ನಭಾಗ್ಯ ಯೋಜನೆ (Anna Bhagya) ಅಡಿಯಲ್ಲಿ ಹೆಚ್ಚುವರಿ ಐದು ಕೆಜೆ ಅಂದರೆ ಒಟ್ಟು 10 ಕೆಜಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಧಾನಸಭೆ ಚುನಾವಣೆ (Assembly Election) ಪೂರ್ವದಲ್ಲಿ ಘೋಷಣೆ ಮಾಡಿದ್ದರು. ಆದರೆ ಅಧಿಕಾರಕ್ಕೆ ಬಂದ್ ನಂತರ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಫಲಾನುಭವಿಗಳ ಅಕೌಂಟ್ಗೆ ಐದು ಕೆಜಿ ಅಕ್ಕಿಯ ಹಣವನ್ನು ನೇರ ನಗದು ಪಾವತಿ (ಡಿಬಿಟಿ) ಮೂಲಕ ಪಾವತಿ ಮಾಡಲಾಗುತ್ತಿದೆ. ಇದರಿಂದ ಪಡಿತರ ವಿತರಕರು ಸರ್ಕಾರದ ವಿರುದ್ಧ ಸಿಡಿದೆದಿದ್ದಾರೆ. ಇಂದು (ಅ.19) ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಬಂದ್ ಮಾಡಲು ನಿರ್ಧರಿಸಿದ್ದಾರೆ.
ಡಿಬಿಟಿ ಇನ್ನೂ ಮುಂದುವರೆಸಿರುವ ಸರ್ಕಾರದ ಕ್ರಮಕ್ಕೆ ಪಡಿತರ ವಿತರಕರು ಆಕ್ರೋಶಗೊಂಡಿದ್ದಾರೆ. ಹೀಗಾಗಿ ರಾಜ್ಯದ 20,350 ಪಡಿತರ ಅಂಗಡಿಗಳಲ್ಲಿ ರೇಷನ್ ವಿತರಣೆಯನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಇಂದು ಆಹಾರ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಲಿದ್ದು, ಧರಣಿಯಲ್ಲಿ ರಾಜ್ಯದ ಎಲ್ಲಾ ರೇಷನ್ ವಿತರಕರು ಭಾಗಿಯಾಗಲಿದ್ದಾರೆ.
ಪಡಿತರ ವಿತರಣೆಯನ್ನು ನಂಬಿಕೊಡವರಿಗೆ ಸರ್ಕಾರದ ನಡೆಯಿಂದ ಆರ್ಥಿಕ ಸಂಕಷ್ಟ ಎದರಾಗಿದೆ. ಸಮಸ್ಯೆಯ ಕುರಿತು ಸಚಿವರ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಒಂದೆರೆಡು ತಿಂಗಳು ಅಂತ ಹೇಳಿ ಡಿಬಿಟಿಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ. ಈ ಕುರಿತಾಗಿ ಸರ್ಕಾರ ಕ್ರಮ ವಹಿಸದೆ ಇದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುತ್ತದೆ. ಈ ತಿಂಗಳ ಒಳಗಾಗಿ ಹೆಚ್ಚುವರಿ ಅಕ್ಕಿ ವಿತರಣೆಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಲು ಸರ್ಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘ ನಿರ್ಧರಿಸಿದೆ.
ರಾಜ್ಯದಲ್ಲಿ 1.14 ಕೋಟಿ ಪಡಿತರ ಚೀಟಿಗಳಿದ್ದು, 4.30 ಕೋಟಿ ಫಲಾನುಭವಿಗಳಿದ್ದಾರೆ. ತಲಾ ಐದು ಕೆಜಿಯಂತೆ ಅಕ್ಕಿ ವಿತರಣೆ ಮಾಡಲು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಅಕ್ಕಿ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ವ್ಯಕ್ತಿಗೆ 170 ರೂ. ನೀಡುತ್ತಿದೆ.
ಒಂದು ಕೆಜಿ ಅಕ್ಕಿಗೆ ಸರ್ಕಾರ 1.24 ರೂಪಾಯಿ ಕಮಿಷನ್ ನೀಡುತ್ತೆ. ಆದರೆ ಇದೀಗ ಫಲಾನುಭವಿಗಳ ಅಕೌಂಟ್ಗೆ ನೇರವಾಗಿ ಹಣ ಹಾಕುವುದರಿಂದ ಸರಾಸರಿ ಒಬ್ಬ ಪಡಿತರ ವಿತರಕರಿಗೆ ಸರಾಸರಿ 13 ಸಾವಿರ ರೂಪಾಯಿ ಕೈತಪ್ಪಿ ಹೋಗುತ್ತಿದೆ. ಸರ್ಕಾರಕ್ಕೆ ಉಳಿತಾಯವಾಗುತ್ತಿದೆ.
ಹಣ ವರ್ಗಾವಣೆ ಮಾಡಲು ಮಾಸಿಕ 733 ಕೋಟಿ ರೂ. ಸರ್ಕಾರಕ್ಕೆ ವೆಚ್ಚವಾಗುತ್ತಿದೆ. ಅಕ್ಕಿ ನೀಡುತ್ತಿದ್ದರೆ ಈ ಮೊತ್ತ 856 ಕೋಟಿ ರೂ. ಆಗ್ತಿತ್ತು. ಅಕ್ಕಿ ನೀಡಲು ಸಾಗಣೆ ವೆಚ್ಚ, ಸಗಟು ಮತ್ತು ಚಿಲ್ಲರೆ ಕಮಿಷನ್ ಕೊಡಬೇಕಾಗಿತ್ತು. ಇದೀಗ ಅಕ್ಕಿ ಬದಲು ಜನರ ಖಾತೆಗೆ ನೇರವಾಗಿ ಹಣ ಹಾಕುತ್ತಿರುವುದರಿಂದ ಸಾಗಣೆ ವೆಚ್ಚ, ಕಮೀಷನ್ ಎಲ್ಲ ಸೇರಿ ಮಾಸಿಕ 123 ಕೋಟಿ ರೂ. ಉಳಿತಾಯವಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ