ಬೆಂಗಳೂರು ಮಡ್ಪೈಪ್ ರೆಸ್ಟೋರೆಂಟ್ ಅಗ್ನಿ ಅವಘಡಕ್ಕೆ ಕಾರಣವೇನು? ಬೆಂಕಿ ಹೊತ್ತಿಕೊಂಡ 15 ನಿಮಿಷದಲ್ಲಿ ಆಗಿದ್ದೇನು? ಇಲ್ಲಿದೆ ವಿವರ
ಬೆಂಗಳೂರಿನ ಕೊರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಮಡ್ಪೈಪ್ನ ಆರನೇ ಮಹಡಿಯಲ್ಲಿ ಬುಧವಾರ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಮಹಡಿಯಿಂದ ಪ್ರೇಮ್ ಸಿಂಗ್ ಜಿಗಿಯಲು ಕಾರಣವೇನು? ಬೆಂಕಿ ಬಿದ್ದ ತಕ್ಷಣ ಅಲ್ಲಿಂದ ಪರಾರಿಯಾಗಲು ಜಾಗ ಇರಲಿಲ್ಲವೇ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ
ಬೆಂಗಳೂರು ಅ.19: ಬುಧವಾರ ಕೊರಮಂಗಲದ (Kormangala) ಫೋರಂ ಮಾಲ್ ಮುಂಭಾಗದಲ್ಲಿರುವ ಮಡ್ಪೈಪ್ ಆರನೇ ಮಹಡಿಯಲ್ಲಿ 8 ರಿಂದ10 ಸಿಲಿಂಡರ್ಗಳು ಸ್ಫೋಟಗೊಂಡು ಅಗ್ನಿ ಅವಘಡ (Fire Accident) ಸಂಭವಿಸಿತ್ತು. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಪ್ರೇಮ್ ಸಿಂಗ್ ಎಂಬುವರು ಆರನೇ ಮಹಡಿಯಿಂದ ಕೆಳಗೆ ಜಿಗಿದಿದ್ದು, ಬಲಗೈ ಮೂಳೆ ಮುರಿದಿದೆ. ಅಷ್ಟಕ್ಕೂ ಆರನೇ ಮಹಡಿಯಿಂದ ಪ್ರೇಮ್ ಸಿಂಗ್ ಜಿಗಿಯಲು ಕಾರಣ ಏನು? ಬೆಂಕಿ ಬಿದ್ದ ತಕ್ಷಣ ಅಲ್ಲಿಂದ ಪರಾರಿಯಾಗಲು ಜಾಗ ಇರಲಿಲ್ಲವೇ ? ಆರನೇ ಮಹಡಿಯ ರೆಸ್ಟೋರೆಂಟ್ನಲ್ಲಿ ಸುರಕ್ಷಿತ ಕ್ರಮಗಳು ಇರಲಿಲ್ಲವೇ ? ಬೆಂಕಿ ಬಿದ್ದ ಬಳಿಕ ನಡೆದ ಆ 15 ನಿಮಿಷದಲ್ಲಿ ಆಗಿದ್ದೇನು? ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಆರನೇ ಮಹಡಿಯ ಮಡ್ಪೈಪ್ ರೆಸ್ಟೋರೆಂಟ್ನ ರೂಫ್ ಟಾಪ್ನಲ್ಲಿ ರಾತ್ರಿಯ ವೀವ್ ಅನುಭವಿಸುತ್ತಾ ಊಟ ಮಾಡುವ ರೀತಿ 12 ಟೇಬಲ್ಗಳನ್ನು ಬುಧವಾರ ಮಧ್ಯಾಹ್ನ ತಯಾರಿಸಲಾಗುತ್ತಿತ್ತು. ಕಳೆದ ಒಂದು ವಾರದಿಂದ ರೂಫ್ ಟಾಪ್ನಲ್ಲೇ ಅಡುಗೆ ಮಾಡುತ್ತಾ ಇದ್ದರು. ಹೀಗಾಗಿ ಆರು ಸಿಲಿಂಡರ್ಗಳನ್ನು ರೂಫ್ ಟಾಪ್ನಲ್ಲಿ ಇಡಲಾಗಿತ್ತು. ಇದೇ ರೂಫ್ಟಾಪ್ನ ಅಡುಗೆ ಮನೆ ಬಳಿ ಪ್ರೇಮ್ ಸಿಂಗ್ ಇದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ಅಗ್ನಿ ದುರಂತ: ಅಪಾರ್ಟ್ಮೆಂಟ್, ಅಂಗಡಿ, ಹೋಟೆಲ್, ರೆಸ್ಟೋರೆಂಟ್ಗಳನ್ನು ಪರಿಶೀಲಿಸುವಂತೆ ಸೂಚನೆ
ಮಧ್ಯಾಹ್ನ 12 ಗಂಟೆ ಮಡ್ಪೈಪ್ ರೆಸ್ಟೋರೆಂಟ್ನ ಅಡುಗೆ ಮನೆಯಲ್ಲಿ ನಾಲ್ಕು ಜನ ಸಿಬ್ಬಂದಿಗಳು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸಿಲಿಂಡರ್ ಸೋರಿಕೆಯಾಗಿದೆ. ಇದನ್ನು ತಿಳಿಯದ ಸಿಬ್ಬಂದಿ ಲೈಟ್ ಹಾಕಿದಾಗ ಬೆಂಕಿ ಹತ್ತಿಕೊಂಡಿದೆ. ಕೂಡಲೆ ಸಿಬ್ಬಂದಿ ಅಲ್ಲಿಂದ ಓಡುತ್ತಾ ಕೆಳಗಡೆ ಬಂದಿದ್ದಾರೆ. ಆದರೆ ರೂಫ್ ಟಾಪ್ನ ಕಿಚನ್ ಬಳಿ ಇದ್ದ ಪ್ರೇಮ್ ಸಿಂಗ್ಗೆ ಕೆಳಗೆ ಬರಲು ಆಗಲಿಲ್ಲ. ಈ ವೇಳೆ ಬೆಂಕಿಯ ಜ್ವಾಲೆ ಇಡೀ ಮಹಡಿಯನ್ನು ಆವರಿಸಿಕೊಂಡಿದೆ.
ಬೆಂಕಿ ರೂಫ್ ಟಾಪ್ಗೂ ಆವರಿಸಿಕೊಂಡು ಸಿಲಿಂಡರ್ ಸ್ಪೋಟಗೊಳ್ಳುತ್ತದೆ ಎಂದು ತಪ್ಪಿಸಿಕೊಳ್ಳಲು ಸುಮಾರು 15 ನಿಮಿಷಗಳ ಕಾಲ ರೂಪ್ ಟಾಪ್ನ ಎಲ್ಲ ಕಡೆ ಓಡಾಡಿದ್ದಾನೆ. ಆದರೆ ತಪ್ಪಿಸಿಕೊಳ್ಳಲು ಜಾಗ ಸಿಗಲಿಲ್ಲ. ಕೊನೆಗೆ ಭಯದಿಂದ ಪ್ರೇಮ್ ಸಿಂಗ್ ಮೇಲಿಂದ ಜಿಗಿದಿದ್ದಾನೆ. ಸದ್ಯ ಪ್ರೇಮ್ ಸಿಂಗ್ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ರೆಸ್ಟೋರೆಂಟ್ ಮಾಲೀಕ ಕರಣ್ ಜೈನ್ ವಿರುದ್ಧ ದೂರು ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ