ಬೆಂಗಳೂರು, ಆಗಸ್ಟ್ 1: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಕರಾವಳಿ ತೀರಗಳಲ್ಲಿ ಕಡಲ್ಕೊರೆತ ಸಮಸ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಆದರೆ, ಇತ್ತೀಚೆಗೆ ಆತಂಕಕಾರಿ ಅಧ್ಯಯನ ವರದಿಯೊಂದು ಪ್ರಕಟಗೊಂಡಿದ್ದು, 2040ರ ವೇಳೆಗೆ ಉಭಯ ನಗರಗಳ ಶೇ 5ರಷ್ಟು ಭೂಮಿ ಸಮುದ್ರ ಪಾಲಾಗಲಿದೆ ಎಂಬುದು ತಿಳಿದುಬಂದಿದೆ. ಬೆಂಗಳೂರು ಮೂಲದ ಥಿಂಕ್ಟ್ಯಾಂಕ್ (ಚಿಂತಕರ ಚಾವಡಿ) ‘ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸಸ್’ ವರದಿ ಪ್ರಕಟಿಸಿದ್ದು, ಮಂಗಳೂರಿನಲ್ಲಿ ಸಮುದ್ರ ಮಟ್ಟದಲ್ಲಿ 75.1 ಸೆಂಟಿ ಮೀಟರ್ ಹಾಗೂ ಉಡುಪಿಯಲ್ಲಿ ಸಮುದ್ರ ಮಟ್ಟದಲ್ಲಿ 75.2 ಸೆಂಟಿ ಮೀಟರ್ ಏರಿಕೆಯಾಗಲಿದೆ ಎಂದಿದೆ.
ಉಡುಪಿ, ಮಂಗಳೂರು ಮಾತ್ರವಲ್ಲದೆ ಕೊಚ್ಚಿ, ವಿಶಾಖಪಟ್ಟಣಂ ಮತ್ತು ಪುರಿಯಲ್ಲಿ ಶೇಕಡಾ 5 ರಷ್ಟು ಭೂಮಿಯನ್ನು ಸಮುದ್ರ ಆಪೋಶನ ತೆಗೆದುಕೊಳ್ಳಲಿದೆ ಎಂದು ವರದಿ ಉಲ್ಲೇಖಿಸಿದೆ.
ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನ ಇತ್ಯಾದಿ ಕಾರಣಗಳಿಂದ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಭಾರತದ 15 ನಗರಗಳು ಅಪಾಯ ಎದುರಿಸುತ್ತಿವೆ ಎಂದು ‘ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸಸ್’ ಅಧ್ಯಯನ ವರದಿ ತಿಳಿಸಿದೆ. ಚೆನ್ನೈ, ಮುಂಬೈ, ತಿರುವನಂತಪುರಂ, ಕೊಚ್ಚಿ, ಮಂಗಳೂರು, ವಿಶಾಖಪಟ್ಟಣಂ, ಕೋಯಿಕ್ಕೋಡ್, ಹಲ್ದಿಯಾ, ಕನ್ಯಾಕುಮಾರಿ, ಪಣಜಿ, ಪುರಿ, ಉಡುಪಿ, ಪರದೀಪ್, ತೂತುಕುಡಿ ಮತ್ತು ಪದುಚೇರಿಯ ಯಾಣಂ ಅಪಾಯ ಎದುರಿಸುತ್ತಿವೆ ಎಂದು ‘ಸೀ ಲೆವೆಲ್ ರೈಸ್ ಸಿನಾರಿಯೋಸ್ ಆ್ಯಂಡ್ ಇಂಡ್ಯೂಷನ್ ಮ್ಯಾಪ್ಸ್ ಫಾರ್ ಸೆಲೆಕ್ಟೆಡ್ ಇಂಡಿಯನ್ ಸಿಟೀಸ್’ ಎಂಬ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ವಾಯುಭಾರ ಕುಸಿತದಿಂದ ಅರಬ್ಬೀ ಸಮುದ್ರದಲ್ಲಿ ರಕ್ಕಸ ಗಾತ್ರದ ಅಲೆಗಳಿಂದ ಕಡಲ್ಕೊರೆತ, ಜನರಲ್ಲಿ ಭೀತಿ
1987 ರಿಂದ 2021 ರವರೆಗೆ ಮುಂಬೈ ನಗರವು ಸಮುದ್ರ ಮಟ್ಟದಲ್ಲಿ ಗರಿಷ್ಠ ಏರಿಕೆಯನ್ನು ಕಂಡಿದೆ (4.440 ಸೆಂಮೀ). ನಂತರದ ಸ್ಥಾನಗಳಲ್ಲಿ ಹಲ್ದಿಯಾ (2.726 ಸೆಂಮೀ), ವಿಶಾಖಪಟ್ಟಣಂ (2.381 ಸೆಂಮೀ), ಕೊಚ್ಚಿ (2.213 ಸೆಂಮೀ), ಪರದೀಪ್ (0.717 ಸೆಂಮೀ), ಮತ್ತು ಚೆನ್ನೈ (0.679 ಸೆಂಮೀ) ಇವೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ