ಬೆಳಗಾವಿ ಭಂಡಾರ ಜಾತ್ರೆಯಲ್ಲಿ ಕೊರೊನಾ ನಿರ್ಲಕ್ಷ್ಯ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರು ಗ್ರಾಮದಲ್ಲಿ ನಡೆಯುವ ಬಂಡಾರ ಜಾತ್ರೆಯನ್ನು ಕಳೆದ ವರ್ಷ ಕೊರೊನಾ ಲಾಕ್ಡೌನ್ಗೂ ಮುನ್ನವೇ ಮಾಡಲಾಗಿತ್ತು. ಈ ಜಾತ್ರೆಯ ವಿಶೇಷ ಎಂದರೆ ದೇವರ ಪಲ್ಲಕ್ಕಿ ಉತ್ಸವದ ವೇಳೆ ಭಂಡಾರದೋಕುಳಿ ಮಾಡುತ್ತಾರೆ.
ಬೆಳಗಾವಿ: ಕೊರೊನಾ ಆರ್ಭಟದ ನಡುವೆಯೂ ಅದ್ದೂರಿಯಾಗಿ ಜಾತ್ರೆಯೊಂದು ನಡೆದು ಹೋಗಿದೆ. ಸಾವಿರಾರು ಭಕ್ತರು ಅರಣ್ಯ ಸಿದ್ದೇಶ್ವರ ಜಾತ್ರೆಯಲ್ಲಿ ಭಾಗಿಯಾಗಿ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ಆದರೆ ಇಲ್ಲಿ ಮೆರೆದ ಭಕ್ತಿಯ ಪರಾಕಾಷ್ಠೆ ಇದೀಗ ಕುಂದಾನಗರಿಗೆ ಕಂಟಕವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಭಂಡಾರ ಜಾತ್ರೆ ಅಂತಾನೇ ಪ್ರಸಿದ್ಧಿ ಆಗಿರುವ ಜಾತ್ರೆ ಇದೀಗ ಕೊರೊನಾ ಜಾತ್ರೆ ಆಯಿತಾ ಎನ್ನುವ ಸಂಶಯ ಶುರುವಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರು ಗ್ರಾಮದಲ್ಲಿ ನಡೆಯುವ ಬಂಡಾರ ಜಾತ್ರೆಯನ್ನು ಕಳೆದ ವರ್ಷ ಕೊರೊನಾ ಲಾಕ್ಡೌನ್ಗೂ ಮುನ್ನವೇ ಮಾಡಲಾಗಿತ್ತು. ಈ ಜಾತ್ರೆಯ ವಿಶೇಷ ಎಂದರೆ ದೇವರ ಪಲ್ಲಕ್ಕಿ ಉತ್ಸವದ ವೇಳೆ ಭಂಡಾರದೋಕುಳಿ ಮಾಡುತ್ತಾರೆ. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಭಂಡಾರವನ್ನ ಪಲ್ಲಕ್ಕಿ ಮೇಲೆ ಎರಚಿ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯುತ್ತಾರೆ. ಮಾರ್ಚ್ 22ಕ್ಕೆ ನಡೆದ ಈ ಜಾತ್ರೆಯಲ್ಲಿ ಒಂದೂವರೆ ಟನ್ನಷ್ಟು ಭಂಡಾರ ಎರಚಿದ್ದು, ಎಲ್ಲಿ ನೋಡಿದರೂ ಭಂಡಾರವೇ ಕಾಣಿಸುತ್ತದೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲಿ ಭಂಡಾರದೋಕುಳಿ ಆಡುತ್ತಾರೆ. ಐದು ದಿನಗಳ ಕಾಲ ನಡೆಯುವ ಈ ದೇವರ ಜಾತ್ರೆಯಂದು ವಿಶೇಷ ಪೂಜೆಗಳನ್ನು ನೆರವೇರಿಸಿ ಡೊಳ್ಳು ಕುಣಿತ ಮೂಲಕ ಪಲ್ಲಕ್ಕಿಯನ್ನು ಮೆರವಣಿಗೆ ಮಾಡುತ್ತಾರೆ. ಇದಾದ ಬಳಿಕ ವರ್ಷದ ನುಡಿಯಾಗುತ್ತದೆ. ಈ ಬಾರಿ ಕೂಡ ಕೆಲವು ಕಡೆಗಳಲ್ಲಿ ಹೆಚ್ಚು ಮಳೆಯಾಗುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ಮಳೆ ಕಡಿಮೆಯಾಗುತ್ತದೆ. ಕೆಲವು ಪ್ರದೇಶದಲ್ಲಿ ಭೂಕಂಪ ಕೂಡ ಆಗಲಿದೆ ಇದರ ಜೊತೆಗೆ ಮಹಾಮಾರಿ ಕೊರೊನಾ ಕೂಡ ತೊಲಗಲಿದೆ ಅಂತಾ ಭವಿಷ್ಯವಾಯಿತು.
ಈ ವರ್ಷ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಅದ್ದೂರಿ ಜಾತ್ರೆಗಳಿಗೆ ಸರ್ಕಾರ ಬ್ರೇಕ್ ಹಾಕಿದೆ. ಒಂದು ವೇಳೆ ಜಾತ್ರೆ ಮಾಡಬೇಕು ಎಂದರೆ ಜಿಲ್ಲಾಡಳಿತದ ಅನುಮತಿ ಪಡೆಯಬೇಕು. ಜಿಲ್ಲಾಡಳಿತದ ಅನುಮತಿ ಪಡೆದು ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಜಾತ್ರೆಯನ್ನು ಮಾಡುತ್ತೀವಿ ಎಂದಿದ್ದ ಜಾತ್ರಾ ಕಮೀಟಿಯವರು ನಿಯಮಗಳನ್ನು ಬ್ರೇಕ್ ಮಾಡಿ ಅದ್ದೂರಿಯಾಗಿ ಜಾತ್ರೆ ಮಾಡಿದ್ದಾರೆ.
ಕ್ರಮ ತೆಗೆದುಕೊಳ್ಳುವ ಸಾಧ್ಯತೆ ನೆರೆಯ ಮಹಾರಾಷ್ಟ್ರ ಸೇರಿದಂತೆ ಬೆಳಗಾವಿ ಮತ್ತು ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಜಾತ್ರೆ ಮಾಡಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಂತೂ ಕೊರೊನಾ ರಣಕೇಕೆ ಹಾಕುತ್ತಿದ್ದು, ಅಲ್ಲಿಂದಲೂ ಸಾವಿರಾರು ಜನ ಭಕ್ತರು ಬಂದು ಜಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಜಾತ್ರೆಯನ್ನ ಮಾಡದಂತೆ ತಡೆಯಬೇಕಿದ್ದ ಜಿಲ್ಲಾಡಳಿತ ಕೂಡ ವಿಫಲ ಆಗಿದ್ದು, ಸದ್ಯ ಈ ಜಾತ್ರೆಯ ದೃಶ್ಯವನ್ನು ನೋಡಿದರೆ ಕೊರೊನಾ ಜಾತ್ರೆಯಾಗಿ ಇದು ಮಾರ್ಪಟ್ಟಿತ್ತಾ ಎನ್ನುವ ಅನುಮಾನ ಕೂಡ ಕಾಡುತ್ತಿದ್ದು, ಈಗ ಎಚ್ಚೇತ್ತುಕೊಂಡಿರುವ ತಾಲೂಕು ಆಡಳಿತ ಕಮೀಟಿಯವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಕಂಡುಬಂದಿದೆ.
ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳನ್ನು ಕಣ್ತುಂಬಿಕೊಂಡು ದೇವರ ದರ್ಶನ ಪಡೆದು ತಮ್ಮಲ್ಲೆ ಕಷ್ಟ ಕಾರ್ಪಣ್ಯಗಳನ್ನ ಕಳೆದುಕೊಳ್ಳಲು ಭಕ್ತರು ಬರುತ್ತಾರೆ. ಅದೇ ರೀತಿ ಅರಣ್ಯ ಸಿದ್ದೇಶ್ವರ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಜಾತ್ರೆಯಲ್ಲಿ ಮಿಂದೆದ್ದಿದ್ದಾರೆ. ಆದರೆ ಕೊರೊನಾ ಸಂದರ್ಭದಲ್ಲಿ ಇಷ್ಟೊಂದು ಅದ್ದೂರಿ ಜಾತ್ರೆ ಬೇಕಿತ್ತಾ ಎಂಬ ಪ್ರಶ್ನೆಗಳು ಕಾಡುತ್ತಿದ್ದು, ಇದೇ ಜಾತ್ರೆ ಬಂದ ಭಕ್ತರಿಗೆ ಕಂಟಕವಾಗದಿದ್ದರೆ ಸಾಕು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಇದನ್ನೂ ಓದಿ
Bangalore Covid-19 Case Updates: ಜುಲೈವರೆಗೂ ಕೊರೊನಾ ಸೋಂಕು ಕಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ ತಜ್ಞರು
ಬಾಲಿವುಡ್ ನಟ ಆಮೀರ್ಖಾನ್ಗೆ ಕೊರೊನಾ ಸೋಂಕು; ಮನೆಯಲ್ಲೇ ಕ್ವಾರಂಟೈನ್
Published On - 1:21 pm, Wed, 24 March 21