ಅಡಿಕೆಗೆ ಒಳ್ಳೆಯ ಬೆಲೆ: ಅಡಿಕೆ ನಾಡು ಚನ್ನಗಿರಿಯಲ್ಲಿ ಚುರುಕಾಯ್ತು ವ್ಯಾಪಾರ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಅಡಿಕೆ ವ್ಯಾಪಾರ ಭರ್ಜರಿ ಏರಿಕೆ ಕಂಡಿದೆ. ಒಳ್ಳೆಯ ಬೆಲೆ ಹಾಗೂ ಒಳ್ಳೆಯ ಫಸಲು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ರಾಜ್ಯದಲ್ಲಿ ಅಡಿಕೆ ನಾಡು ಎಂದೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಪ್ರಸಿದ್ಧ. ಕಾರಣ, ಇದು ರಾಜ್ಯದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುವ ತಾಲೂಕು ಕೇಂದ್ರ. ಲಾಕ್ಡೌನ್ನಿಂದ ಬಾಡಿದ್ದ ಅಡಿಕೆ ಬೆಳೆಗಾರರ ಮುಖದಲ್ಲಿ ಈಗ ಮಂದಹಾಸವಿದೆ. ಕಾರಣ, ಮಾರುಕಟ್ಟೆಯಲ್ಲಿ ಅಡಿಕೆಗೆ ಈಗ ಒಳ್ಳೆಯ ದರ ಬಂದಿದೆ. ಆದ್ದರಿಂದಲೇ, ಚನ್ನಗಿರಿಯಲ್ಲಿ ಅಡಿಕೆ ವ್ಯಾಪಾರ ಭರ್ಜರಿ ಚೇತರಿಕೆ ಕಂಡಿದೆ.
ಚನ್ನಗಿರಿ ತಾಲೂಕಿನಲ್ಲಿ ಸುಮಾರು 30ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಿದೆ. ಕಳೆದ ವರ್ಷ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಪ್ರತಿ ಎಕರೆಗೆ 15ರಿಂದ 18 ಕ್ವಿಂಟಾಲ್ ಇಳುವರಿ ದೊರೆತಿದೆ. ಈ ಪ್ರಮಾಣದ ಇಳುವರಿಯಿಂದಾಗಿ ರೈತರ ಮುಖದಲ್ಲಿ ನಗು ಮೂಡಿದೆ. ಅಲ್ಲದೆ, ಈ ಬಾರಿ ಅಡಿಕೆ ಬೆಲೆಯೂ ಉತ್ತಮವಾಗಿದೆ. ಪ್ರತಿ ಕ್ವಿಂಟಾಲ್ ಅಡಿಕೆಗೆ 41,500ರೂ.ಗಳಿಂದ 42,500ರೂ.ಗಳವರೆಗೆ ಮಾರುಕಟ್ಟೆ ದರವಿದೆ. ಇದರಿಂದಾಗಿ ರೈತರು ಈಗ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಪರಿಣಾಮವಾಗಿ, ರೈತರು ಚನ್ನಗಿರಿ ತುಮ್ಕೋಸ್ ಸಂಸ್ಥೆಗೆ ಒಂದೇ ದಿನದಲ್ಲಿ 20 ಸಾವಿರ ಚೀಲ ಅಡಿಕೆಯನ್ನು ಮಾರಾಟ ಮಾಡಿದ್ದಾರೆ. ಉತ್ತಮ ಬೆಲೆ ಹಾಗೂ ಉತ್ತಮ ಫಸಲಿನಿಂದಾಗಿ ಕರೊನಾ ಕಷ್ಟ ಕಾಲದಲ್ಲೂ ವಾಣಿಜ್ಯ ಬೆಳೆಗಾರರ ಮೊಗದಲ್ಲಿ ಹರ್ಷ ಮೂಡಿದೆ.
ಈ ಬಾರಿ ತಾಲೂಕಿನಲ್ಲಿ ಅಷ್ಟು ಉತ್ತಮವಾಗಿ ಮಳೆಯಾಗಿಲ್ಲ. ಆದ್ದರಿಂದ ಅಡಕೆ ಕೊಯ್ಲಿನ ಕಾರ್ಯ ಚುರುಕಾಗಿದೆ. ಪ್ರತೀ ವರ್ಷ ಮಳೆಯ ಕಾರಣದಿಂದಾಗಿ ಅಡಿಕೆ ಕೊಯ್ಲು ನಿಧಾನಕ್ಕೆ ಸಾಗುತ್ತಿತ್ತು. ಆದರೆ ಈ ಬಾರಿ ಹಾಗಾಗಿಲ್ಲ. ಚನ್ನಗಿರಿಯಲ್ಲಿ ಜುಲೈನಿಂದ ಬಹುತೇಕ ಮೂರು ತಿಂಗಳ ಕಾಲ ಅಡಿಕೆ ಕೊಯ್ಲು ಮುಂದುವರೆಯುತ್ತದೆ. ಈ ಬಾರಿ ಕರೊನಾ ಕಾರಣದಿಂದಾಗಿ ಅಡಕೆ ವ್ಯಾಪಾರ ಕುಂಠಿತಗೊಂಡಿತ್ತು. ಸರ್ಕಾರದ ನಿಯಮಾವಳಿಗಳಲ್ಲಿ ಬದಲಾವಣೆಯಾಗಿರುವುದರಿಂದ ವ್ಯಾಪಾರದಲ್ಲಿ ಒಳ್ಳೆಯ ಚೇತರಿಕೆ ಕಂಡಿದೆ.
ಇದನ್ನೂ ಓದಿ: ಅಪಘಾತವಾದ ಬಾಲಕನ ಜೀವ ಉಳಿಸಿತು ‘ಬಿಗಿಲ್’ ಚಿತ್ರ; ಅಚ್ಚರಿಯ ರೀತಿಯಲ್ಲಿ ನಡೆಯಿತು ಆಪರೇಷನ್
(Areca Nut Market is increasing in Channagiri, Davanagere district farmers are happy)