ಬೆಂಗಳೂರು, ಮಾರ್ಚ್ 4: ವಿಧಾನಸೌಧದ (Vidhana Soudha) ಆವರಣದಲ್ಲಿಯೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಬಗ್ಗೆ ಸ್ವಯಂ ಪ್ರೇರಿತವಾಗಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು, ಈಗ ದೆಹಲಿ ಮೂಲದ ಇಲ್ತಾಜ್, ಆರ್.ಟಿ. ನಗರ ಮೂಲದ ಮುನಾವರ್ ಹಾಗೂ ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಅವರನ್ನು ಬಂಧಿಸಿದ್ದಾರೆ. ಸದ್ಯ ಈ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಬಳಿಕ ನ್ಯಾಯಾಲಕ್ಕೆ ಹಾಜರುಪಡಿಸಲಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಓರ್ವ ಪಾಕಿಸ್ತಾನ ಅಂತಾ ಕೂಗಿದರೆ ಉಳಿದ ಇಬ್ಬರು ಜಿಂದಾಬಾದ್, ಜಿಂದಾಬಾದ್ ಅಂತಾ ಕೂಗುತ್ತಾರೆ. ರಾಜ್ಯಸಭಾ ಚುನಾವಣೆಯಲ್ಲಿ ನಾಸಿರ್ ಹುಸೇನ್ ಗೆಲುವು ಸಾಧಿಸಿದ್ದರು. ಗೆದ್ದ ಖುಷಿಯಲ್ಲಿ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಜಿಂದಾಬಾದ್ ಕೂಗಿದ ಆರೋಪ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಪಾಕ್ ಪರ ಘೋಷಣೆ ಕೂಗಿದ್ದ ಮೂವರು ಆರೋಪಿಗಳ ಬಂಧನವನ್ನು ಖಚಿತಪಡಿಸಿರುವ ಬೆಂಗಳೂರಿನ ಕೇಂದ್ರ ವಿಭಾಗದ ಪೊಲೀಸರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. FSL ವರದಿ, ಸಾಂದರ್ಭಿಕ ಸಾಕ್ಷ್ಯಗಳು, ಆರೋಪಿಗಳ ಹೇಳಿಕೆ ಹಾಗೂ ತನಿಖೆ ವೇಳೆ ಸಿಕ್ಕ ಸಾಕ್ಷ್ಯಗಳ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದೇವೆ. ಸದ್ಯ ಆರೋಪಿಗಳನ್ನು ಬಂಧಿಸಿದ್ದು ವೈದ್ಯಕೀಯ ಪರೀಕ್ಷೆ ನಡೀತಾ ಇದೆ. ವೈದ್ಯಕೀಯ ಪರೀಕ್ಷೆ ಬಳಿಕ ಕೋರಮಂಗಲದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ಬಳಿಕ ಕಸ್ಟಡಿಗೆ ಪಡೆಯಲಿದ್ದಾರೆ.
ಇದನ್ನೂ ಓದಿ: ಪಾಕ್ ಪರ ಘೋಷಣೆ ಆರೋಪ: ಡಿಜಿ&ಐಜಿಪಿ ಕಚೇರಿಗೆ ಬಿಜೆಪಿ ನಿಯೋಗ ಭೇಟಿ, FSL ವರದಿ ಬಿಡುಗಡೆಗೆ ಮನವಿ
ಪಾಕಿಸ್ತಾನ ಪರ ಘೋಷಣೆ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಡಿ, 26 ಮಂದಿಯ ಪಟ್ಟಿಯನ್ನ ಸಿದ್ದಪಡಿಸಲಾಗಿತ್ತು. ಇದರಲ್ಲಿ 7 ಮಂದಿ ವಿಚಾರಣೆ ಮಾಡಲಾಗಿತ್ತು, ಮೂವರ ವಾಯ್ಸ್ ಸ್ಯಾಂಪಲ್ಸ್ಗಳನ್ನ ಎಫ್ಎಸ್ಎಲ್ಗೆ ರವಾನೆ ಮಾಡಲಾಗಿತ್ತು. ಮೆಲುಧ್ವನಿ, ಏರುಧ್ವನಿ ಮಾದರಿಯಲ್ಲಿ ಸ್ಯಾಂಪಲ್ಸ್ಗಳನ್ನ ಸಂಗ್ರಹಿಸಲಾಗಿದ್ದು, ಎಫ್ಎಸ್ಎಲ್ ತಂಡ ಪರಿಶೀಲನೆ ಮಾಡಿದೆ. ಘಟನೆ ನಡೆದ ದೃಶ್ಯಗಳನ್ನು ಸಹ ರವಾನಿಸಲಾಗಿತ್ತು.
ಸರ್ಕಾರ ಕೂಡ ಕಟ್ಟುನಿಟ್ಟಿನ ತನಿಖೆಗೆ ಮುಂದಾಗಿದ್ದು, ಎಫ್ಎಸ್ಎಲ್ ಮೇಲೆ ಇಡೀ ಪ್ರಕರಣವೇ ನಿಂತಿದೆ. ಸರ್ಕಾರ ಇನ್ನು ಎಫ್ಎಸ್ಎಲ್ ವರದಿ ಬಂದಿಲ್ಲ ಅಂತಿದ್ದರೆ, ಇತ್ತ ಬಿಜೆಪಿ ನಾಯಕರು ಮಾತ್ರ ನಿನ್ನೆಯೇ ವರದಿ ಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಇದನ್ನೂ ಓದಿ: ಬಿಜೆಪಿಯ ಖಾಸಗಿ ಎಫ್ಎಸ್ಎಲ್ ವರದಿ ಗಣನೆಗೆ ತೆಗೆದುಕೊಳ್ಳಲ್ಲ : ಜಿ ಪರಮೇಶ್ವರ್
ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಎಫ್ಎಸ್ಎಲ್ ವರದಿ ಕಾಂಗ್ರೆಸ್ ಕೈ ಸೇರಿದೆ. ಆದರೆ ಬಿಡುಗಡೆ ಮಾಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಎಫ್ಎಸ್ಎಲ್ ವರದಿ ಬಿಡುಗಡೆ ಬಿಜೆಪಿಯವರು ಒತ್ತಾಯಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ವರದಿ ಬಂದ ತಕ್ಷಣವೇ ಬಿಡುಗಡೆ ಮಾಡುತ್ತೇವೆ. ದೇಶಭಕ್ತಿಯನ್ನ ಬಿಜೆಪಿಯವರು ಹೇಳಿಕೊಡುವ ಅಗತ್ಯವಿಲ್ಲ ಅಂತ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:03 pm, Mon, 4 March 24