ಶಿವಮೊಗ್ಗ ನಗರದಲ್ಲಿ ಚಿತ್ರಕಲೆ ರಂಗು; ಜನರ ಗಮನ ಸೆಳೆಯುತ್ತಿದೆ ಸರ್ಕಾರಿ ಗೋಡೆ ಮೇಲಿನ ಚಿತ್ತಾರ

| Updated By: ganapathi bhat

Updated on: Mar 30, 2021 | 7:57 PM

ಶಿವಮೊಗ್ಗದ ನಗರದ ಎಸ್​ಪಿ ಕಚೇರಿ, ಅರಣ್ಯ ಇಲಾಖೆಯ ಕಚೇರಿ, ಕುವೆಂಪು ರಸ್ತೆಯ ಜಿಲ್ಲಾಸ್ಪತ್ರೆ, ಪಾಲಿಕೆ ಆವರಣ ಸೇರಿದಂತೆ ನಗರದ ವಿವಿಧ ಕಚೇರಿಗಳ ಕಾಂಪೌಂಡ್ ಗೋಡೆಗಳು ಈಗ ಚಿತ್ರಕಲೆಯಿಂದ ಕಂಗೋಳಿಸುತ್ತಿದೆ. ಆಯಾ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಬಿಂಬಿಸುವ ಚಿತ್ರಕಲೆಗಳು ಅಲ್ಲಿ ಕಂಡು ಬರುತ್ತಿದೆ.

ಶಿವಮೊಗ್ಗ ನಗರದಲ್ಲಿ ಚಿತ್ರಕಲೆ ರಂಗು; ಜನರ ಗಮನ ಸೆಳೆಯುತ್ತಿದೆ ಸರ್ಕಾರಿ ಗೋಡೆ ಮೇಲಿನ ಚಿತ್ತಾರ
ಅಂಚೆ ಕಚೇರಿಯ ಚಿತ್ರಣವನ್ನು ಜನರಿಗೆ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ
Follow us on

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗ ನಗರದ ಚಿತ್ರಣ ಈಗ ಬದಲಾಗಿದೆ. ನಗರದಲ್ಲಿರುವ ಪ್ರಮುಖ ಸರ್ಕಾರಿ ಕಚೇರಿಯ ಕಾಂಪೌಂಡ್ ಗೋಡೆಗಳು ಕಲರ್ ಫುಲ್ ಆಗಿದ್ದು, ಮಲೆನಾಡಿನ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಪ್ರವಾಸೋದ್ಯಮ, ಇಲಾಖೆಯ ಕಾರ್ಯವೈಖರಿಗಳನ್ನು ಪ್ರತಿಬಿಂಬಿಸುವ ಚಿತ್ರಕಲೆಗಳು ಗೋಡೆಗಳ ಮೇಲೆ ರಾರಾಜಿಸುತ್ತಿವೆ.

ಶಿವಮೊಗ್ಗದ ಜಿಲ್ಲಾ ಕೇಂದ್ರ ನಗರಕ್ಕೆ ನಿತ್ಯ ಸಾವಿರಾರು ಜನರು ಅಗತ್ಯದ ಕೆಲಸಗಳಿಗಾಗಿ ವಿವಿಧ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡುತ್ತಾರೆ. ಇದರ ಜೊತೆಗೆ ರಾಜ್ಯದ ವಿವಿಧ ಜಿಲ್ಲೆಯಿಂದ ಪ್ರವಾಸಿಗರು ನಗರಕ್ಕೆ ಬರುತ್ತಾರೆ. ಹೀಗೆ ಬರುವ ಜನರಿಗೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ವಿಶೇಷ ಉಡುಗೊರೆಯನ್ನು ನೀಡಿದೆ. ಸ್ಮಾರ್ಟ್ ಸಿಟಿ ಯೋಜನೆಯ 52 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರದ ಸರ್ಕಾರಿ ಇಲಾಖೆಯ ಕಚೇರಿ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಇತರೆ ಕಚೇರಿಯ ಕಾಂಪೌಂಡ್ ಗೋಡೆಗಳ ಮೇಲೆ ವಿವಿಧ ಚಿತ್ರಕಲೆಗಳನ್ನು ಬಿಡಿಸಲಾಗಿದೆ.

ಖಾಲಿ ಇರುವ ಗೋಡೆಗಳ ದುರ್ಬಳಕೆ ಮತ್ತು ನಗರವು ಸುಂದರವಾಗಿ ಕಾಣುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಚಿತ್ರಕಲೆಯನ್ನು ಬಿಡಿಸಲಾಗುತ್ತಿದೆ. ಬೆಂಗಳೂರಿನ ಚಿತ್ರಕಲಾ ಪರಿಷತ್​ಗೆ ನಗರದ ಪೈಂಟಿಂಗ್ಸ್​ಗೆ ಟೆಂಡರ್ ನೀಡಲಾಗಿದೆ. ಕಲಾವಿದರು ತಮ್ಮ ಕೈಚಳದ ಮೂಲಕ ಸುಂದರ ಚಿತ್ರಗಳನ್ನು ಬಿಡಿಸಿದ್ದಾರೆ. ಸದ್ಯ ನಗರಕ್ಕೆ ಬರುವ ಜನರು ಮತ್ತು ಸ್ಥಳೀಯರನ್ನು ಈ ಕಾಂಪೌಂಡ್ ಗೋಡೆ ಮೇಲಿನ ಪೈಂಟಿಂಗ್ಸ್ ಗಮನ ಸೆಳೆಯುತ್ತಿವೆ.

ಪೊಲೀಸ್​ ಸೇವೆಗಳ ಚಿತ್ರ ಕಾಂಪೌಂಡ್​ ಗೋಡೆ ಮೇಲೆ ಬಿಡಿಸಲಾಗಿದೆ.

ಶಿವಮೊಗ್ಗದ ನಗರದ ಎಸ್​ಪಿ ಕಚೇರಿ, ಅರಣ್ಯ ಇಲಾಖೆಯ ಕಚೇರಿ, ಕುವೆಂಪು ರಸ್ತೆಯ ಜಿಲ್ಲಾಸ್ಪತ್ರೆ, ಪಾಲಿಕೆ ಆವರಣ ಸೇರಿದಂತೆ ನಗರದ ವಿವಿಧ ಕಚೇರಿಗಳ ಕಾಪೌಂಡ್ ಗೋಡೆಗಳು ಈಗ ಚಿತ್ರಕಲೆಯಿಂದ ಕಂಗೋಳಿಸುತ್ತಿದೆ. ಆಯಾ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಬಿಂಬಿಸುವ ಚಿತ್ರಕಲೆಗಳು ಅಲ್ಲಿ ಕಂಡು ಬರುತ್ತಿದೆ. ಪೊಲೀಸ್ ಇಲಾಖೆ ಕಾಪೌಂಡ್ ಗೋಡೆ ಮೇಲೆ ಪೊಲೀಸರ ನಿತ್ಯ ಕೆಲಸಗಳು, ಅವರ ಸೇವೆಗಳ ಚಿತ್ರಕಲೆಗಳನ್ನು ಬಿಡಿಸಲಾಗಿದೆ. ಮುಖ್ಯ ರಸ್ತೆ ಆಗಿದ್ದರಿಂದ ಎಸ್​ಪಿ ಮತ್ತು ಪೊಲೀಸ್ ಡಿಆರ್ ಮೈದಾನಕ್ಕೆ ಬರುವ ಎಲ್ಲರಿಗೂ ಈ ಚಿತ್ರಕಲೆಗಳು ಪ್ರಮುಖ ಆಕರ್ಷಣೆಯಾಗಿವೆ.

ಪೊಲೀಸ್ ಇಲಾಖೆ ಕಾಪೌಂಡ್ ಗೋಡೆ ಮೇಲಿನ ಚಿತ್ರಣ

ಅರಣ್ಯ ಇಲಾಖೆ, ಅಂಚೆ ಕಚೇರಿ, ಕುವೆಂಪು ರಸ್ತೆಗಳ ಸರ್ಕಾರಿ ಕಚೇರಿಗಳ ಕಾಪಾಂಡ್​ಗಳ ಮೇಲೆ ಗ್ರಾಮೀಣ ಕ್ರೀಡೆಗಳ ವಿವಿಧ ಚಿತ್ರಕಲೆಗಳಿವೆ. ಇನ್ನು ಅಂಚೆ ಕಚೇರಿಯ ಕಾರ್ಯ ಚಟುವಟಿಕೆಗಳು ನೋಡಿಗರ ಕಣ್ಣಿಗೆ ಕಣ್ಮನ ಸೇಳೆಯುತ್ತಿದೆ. ರಾಷ್ಟ್ರಕವಿ ಕುವೆಂಪು, ವೀರ ಮದಕರಿ ನಾಯಕ, ಶಿವಪ್ಪ ನಾಯಕ ಕೋಟೆ ಸೇರಿದಂತೆ ಶಿವಮೊಗ್ಗ ಇತಿಹಾಸ ನೆನಪಿಸುವ ಚಿತ್ರಗಳು ಕೂಡ ಇಲ್ಲಿ ಇದೆ.

ಅರಣ್ಯ ಇಲಾಖೆಯ ಕಚೇರಿಯ ಗೋಡೆಯ ಚಿತ್ರಣ

ಅತ್ಯುತ್ತಮ ಗುಣಮಟ್ಟದಿಂದ ಚಿತ್ರಕಲೆಗಳನ್ನು ಬಿಡಿಸಿದ್ದು, ಆಯಿಲ್ ಪೈಂಟ್​ ಬಳಕೆ ಮಾಡಲಾಗಿದೆ. ಈ ಪೈಂಟಿಂಗ್ಸ್​ಗಳು ಕನಿಷ್ಠ ಮೂರು ವರ್ಷದ ವರೆಗೆ ಬರಲಿವೆ. ಮೊದಲ ಹಂತದಲ್ಲಿ ಕೆಲ ಕಚೇರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಜನರ ಮತ್ತು ಪ್ರವಾಸಿಗರ ಅಭಿರುಚಿಗೆ ಅನುಗುಣವಾಗಿ ಈ ಕಾಂಪೌಂಡ್​ಗಳ ಮೇಲಿನ ಚಿತ್ರಕಲೆಯ ಯೋಜನೆಯನ್ನು ಮುಂದುವರೆಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮುಂದಾಗಿದ್ದಾರೆ.

ಸ್ಮಾರ್ಟ್ ಸಿಟಿಯ ಈ ಯೋಜನೆಗೆ ನಗರದ ಜನರು ಸ್ಪಂಧಿಸುತ್ತಿದ್ದಾರೆ. ಈ ಚಿತ್ರಕಲೆಗಳು ಯುವ ಕಲಾವಿದರಿಗೆ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿವೆ. ಈ ಚಿತ್ರಕಲೆಗೆ ಸಾರ್ವಜನಿಕರ ಮೆಚ್ಚುಗೆ ಮತ್ತು ಚಿತ್ರಕಲೆಗಳು ಅತ್ಯುತ್ತವಾಗಿ ಮೂಡಿಬಂದಿರುವುದಕ್ಕೆ ಸ್ಥಳೀಯ ಕಲಾವಿದರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಪಾಲಿಕೆಯ ಆಯಕ್ತರಾದ ಚಿದಾನಂದ ವಠಾರೆ ಹೇಳಿದ್ದಾರೆ.

ನಗರದ ವಿವಿಧ ಕಚೇರಿಗಳ ಕಾಪೌಂಡ್ ಗೋಡೆಗಳ ಮೇಲೆ ಪೈಂಟಿಂಗ್

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನೂರಾರು ಕೋಟಿ ವೆಚ್ಚ ಮಾಡಿ ನಗರವನ್ನು ಸ್ಮಾರ್ಟ್ ಮಾಡಲಾಗುತ್ತಿದೆ. ಈ ನಡುವೆ ಸರ್ಕಾರಿ ಕಚೇರಿಯ ಕಾಪೌಂಡ್​ಗೆ ಚಿತ್ರಕಲೆಯ ಟಚ್ ನೀಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವುದು ವಿಶೇಷ. ಹೀಗೆ ಹೊಸತನದೊಂದಿಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದ ಚಿತ್ರಣವು ಹಂತ ಹಂತವಾಗಿ ಬದಲಾಗುತ್ತಿದೆ.


ಇದನ್ನೂ ಓದಿ;

ತ್ಯಾಜ್ಯಾ ವಸ್ತುಗಳಿಗೆ ಸಿಕ್ತು ಮರುಜೀವ: ಚಿತ್ರಕಲಾ ಶಿಕ್ಷಕಿಯ ಮಾರ್ಗದರ್ಶನದಲ್ಲಿ ನೂರಾರು ಕಲಾಕೃತಿಗಳನ್ನ ತಯಾರಿಸಿದ ಶಾಲಾ ಮಕ್ಕಳು‌..!