ಬೆಂಗಳೂರು: ಕೊರೊನಾ ಎರಡನೇ ಅಲೆ ಯಾವ ಮಟ್ಟಕ್ಕೆ ಬಂದು ತಲುಪುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮೃತದೇಹವನ್ನು ಹೊತ್ತು ಬರುವ ಆ್ಯಂಬುಲೆನ್ಸ್ಗಳು ಚಿತಾಗಾರದ ಮುಂದೆ ಸಾಲುಗಟ್ಟಿ ನಿಲ್ಲುತ್ತಿವೆ. ಚಿತಾಗಾರ ಸಿಬ್ಬಂದಿ ಶಕ್ತಿ ಮೀರಿ ಕೆಲಸ ಮಾಡಿದರು ಚಿತಾಗಾರ ಬಳಿಗೆ ಬಂದ ಎಲ್ಲಾ ಮೃತದೇಹಗಳನ್ನು ಒಂದೇ ದಿನದಲ್ಲಿ ದಹನ ಮಾಡಲು ಆಗುತ್ತಿಲ್ಲ. ಶವಗಳನ್ನು ಸುಡಲು ಗಂಟೆ ಗಟ್ಟಲೆ ನಿಲ್ಲುವ ಪರಿಸ್ಥಿತಿ ಉದ್ಭವವಾಗಿದೆ. ಈ ನಡುವೆ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಆಪ್ತ ಮೊದಲು ತಮ್ಮವರ ಶವಸಂಸ್ಕಾರ ಮಾಡುವಂತೆ ಚಿತಾಗಾರ ಸಿಬ್ಬಂದಿಗೆ ಧಮ್ಕಿ ಹಾಕಿದ್ದಾರೆ.
ರಾಜ್ಯದ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಆಪ್ತರಾದ ಸಂತೋಷ್ ಎಂಬುವವರು ಬೆಂಗಳೂರಿನ ಹರಿಶ್ಚಂದ್ರ ಘಾಟ್ ಚಿತಾಗಾರದ ಸಿಬ್ಬಂದಿಗೆ ಮೊದಲು ತಮ್ಮವರ ಶವಸಂಸ್ಕಾರ ಮಾಡಬೇಕೆಂದು ಆವಾಜ್ ಹಾಕಿದ್ದಾರೆ. ಇದರ ಪರಿಣಾಮ ಸಂತೋಷ್ ನಡೆಯಿಂದ ಬೇಸತ್ತು ಚಿತಾಗಾರವನ್ನು ಮುಚ್ಚಿ ಸಿಬ್ಬಂದಿಯವರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ ಸಿಬ್ಬಂದಿ ಡಿಸಿಎಂ ಅಶ್ವತ್ಥ್ ನಾರಾಯಣ್ ಸ್ಥಳಕ್ಕೆ ಬರಬೇಕು. ಸಮಸ್ಯೆ ಪರಿಹಾರ ಮಾಡಬೇಕು. ಸಂತೋಷ್ರವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಆ ಬಳಿಕ ಶ್ರೀರಾಂಪುರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನೆ ತಡೆದು ಪ್ರತಿಭಟನಾ ನಿರತ ಸಿಬ್ಬಂದಿಯನ್ನು ಕಳಿಸಿದರು. ಪೊಲೀಸರ ಮನವೊಲಿಕೆ ಬಳಿಕ ಮತ್ತೆ ಹರಿಶ್ಚಂದ್ರ ಘಾಟ್ ಚಿತಾಗಾರವನ್ನು ತೆರೆದು ಮೃತದೇಹವನ್ನು ದಹನ ಮಾಡುವ ಕಾರ್ಯಕ್ಕೆ ಸಿಬ್ಬಂದಿ ಮುಂದಾಗಿದೆ. ಈ ಬಗ್ಗೆ ಮಾತನಾಡಿದ ಸಿಬ್ಬಂದಿ ಸಾರ್ವಜನಿಕರಿಗೆ ಸುಮ್ಮನೆ ತೊಂದರೆ ಆಗುತ್ತಿದೆ. ಹಾಗಾಗಿ ಮೃತದೇಹ ದಹನ ಮಾಡಲು ನಿರ್ಧರಿಸಿದ್ದೇವೆ. ನಮಗೆ ನ್ಯಾಯ ಸಿಗಬೇಕು. ಸಮಸ್ಯೆ ಆಗಬಾರದು ಹೇಳಿದ್ದಾರೆ.
ಚಿತಾಗಾರಗಳಲ್ಲಿ ಮುಂದುವರಿದ ಮರಣ ಮೃದಂಗ
ಮೇಡಿ ಅಗ್ರಹಾರ ಚಿತಾಗಾರದಲ್ಲಿ ನಿನ್ನೆ ರಾತ್ರಿಯಿಡೀ ಶವಸಂಸ್ಕಾರ ಕಾರ್ಯ ನೆರವೇರಿದೆ. ಜೊತೆಗೆ ಬೆಳಗ್ಗೆ 8 ಗಂಟೆಯಿಂದ ಅಂತ್ಯಸಂಸ್ಕಾರ ಕಾರ್ಯ ಆರಂಭವಾಗಿದೆ. ಸಿಬ್ಬಂದಿ ಬೆಳಿಗ್ಗೆ 2 ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಿದ್ದು, ಮತ್ತೆ ಬೆಳ್ಳಂ ಬೆಳಗ್ಗೆ ಆ್ಯಂಬುಲೆನ್ಸ್ಗಳು ಸಾಲುಗಟ್ಟಿ ನಿಂತಿದ್ದವು. ಮೇಡಿ ಅಗ್ರಹಾರ ಚಿತಾಗಾರದಲ್ಲಿ ನಿನ್ನೆ (ಏಪ್ರಿಲ್ 27) ಸುಮಾರು 37 ಕೊವಿಡ್ ಮೃತದೇಹಗಳ ದಹನವಾಗಿದೆ.
ಇದನ್ನೂ ಓದಿ
(Ashwath Narayana close friend threatens family members to be cremated first to Cemetery Staff)
Published On - 1:50 pm, Wed, 28 April 21