ಕೊರೊನಾ ಕರ್ತವ್ಯದ ಬಗ್ಗೆ ಬೇಜಾವಬ್ದಾರಿ ತೋರಿದರೆ ನಿರ್ದಾಕ್ಷಿಣ್ಯ ಕ್ರಮ; ಅಧಿಕಾರಿಗಳಿಗೆ ಡಿಸಿಎಂ ಅಶ್ವತ್ಥನಾರಾಯಣ ವಾರ್ನಿಂಗ್
ಎಲ್ಲರು ಸೋಂಕು ಉಲ್ಬಣ ಆಗದ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕು. ಇನ್ನೆರಡು ತಿಂಗಳ ಕಾಲ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು, ಎಲ್ಲ ಇಲಾಖೆಗಳ ಅಧಿಕಾರಿಗಳೂ ಕೊವಿಡ್ ಕರ್ತವ್ಯದಲ್ಲೇ ತೊಡಗಿಸಿಕೊಳ್ಳಬೇಕು ಎಂದು ಡಿಸಿಎಂ ಸಲಹೆ ನೀಡಿದರು. ಸದಾ ಕಾಲ ಯಾರಿಂದಲೇ ಮೊಬೈಲ್ ಕರೆ ಬಂದರೆ ಸ್ವೀಕರಿಸಿ ಕ್ರಮ ಕೈಗೊಳ್ಳಬೇಕು.
ರಾಮನಗರ: ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ಇನ್ನೆರಡು ತಿಂಗಳು ಜಿಲ್ಲಾಡಳಿತ ಮೈಮರೆಯಬಾರದು. ಎಲ್ಲ ಅಧಿಕಾರಿಗಳು ಕೊವಿಡ್ ಕರ್ತವ್ಯ ತಪ್ಪಿಸಿಕೊಳ್ಳಬಾರದು. ಒಂದು ವೇಳೆ ಉಪೇಕ್ಷಿಸಿದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ರಾಮನಗರ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಎಚ್ಚರಿಕೆ ನೀಡಿದರು. ರಾಮನಗರ ಜಿಲ್ಲೆಯ ಕೋವಿಡ್ ಪರಿಸ್ಥಿತಿಯ ಬಗ್ಗೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳು, ತಜ್ಞರ ಜೊತೆ ವರ್ಚುಯಲ್ ಮೂಲಕ ನಿನ್ನೆ (ಏಪ್ರಿಲ್ 25) ಸಭೆ ನಡೆಸಿದರು. ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ಎಲ್ಲ ಕೊವಿಡ್ ವಾರಿಯರ್ಗಳಿಗೆ ಮೊದಲ ಹಂತದಲ್ಲೇ ಲಸಿಕೆ ನೀಡಲಾಗಿದೆ. ಹೀಗಾಗಿ ಜೀವಕ್ಕೆ ಅಪಾಯವಿಲ್ಲ ಎಂದು ಮಾತನಾಡಿದ ಅವರು, ಈಗ ಜನರ ಜೀವಕ್ಕಿಂತ ದೊಡ್ಡ ವಿಷಯ ಬೇರೆ ಇಲ್ಲ ಎಂದರು.
ಎಲ್ಲರು ಸೋಂಕು ಉಲ್ಬಣ ಆಗದ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕು. ಇನ್ನೆರಡು ತಿಂಗಳ ಕಾಲ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು, ಎಲ್ಲ ಇಲಾಖೆಗಳ ಅಧಿಕಾರಿಗಳೂ ಕೊವಿಡ್ ಕರ್ತವ್ಯದಲ್ಲೇ ತೊಡಗಿಸಿಕೊಳ್ಳಬೇಕು ಎಂದು ಡಿಸಿಎಂ ಸಲಹೆ ನೀಡಿದರು. ಸದಾ ಕಾಲ ಯಾರಿಂದಲೇ ಮೊಬೈಲ್ ಕರೆ ಬಂದರೆ ಸ್ವೀಕರಿಸಿ ಕ್ರಮ ಕೈಗೊಳ್ಳಬೇಕು. ಯಾರು ಕರೆ ಸ್ವೀಕರಿಸುವುದಿಲ್ಲವೋ ಅಂಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
ಬೆಡ್ಗಳ ಸಮಸ್ಯೆ ಇಲ್ಲ ಈಗ ರಾಮನಗರದಲ್ಲಿ 400 ಕೊವಿಡ್ ಹಾಸಿಗೆಗಳಿವೆ. ಜೊತೆಗೆ ಪ್ರತಿ ತಾಲೂಕಿನಲ್ಲಿ ತಲಾ ನೂರು ಕೊವಿಡ್ ಕೇರ್ ಸೆಂಟರ್ಗಳಿವೆ. ಪ್ರತಿ ತಾಲೂಕು ಆಸ್ಪತ್ರೆಯಲ್ಲೂ ತಲಾ 100 ಹಾಸಿಗೆಗಳಿವೆ. ಜಿಲ್ಲಾ ಕೇಂದ್ರದ ಕೊವಿಡ್ ಆಸ್ಪತ್ರೆಯಲ್ಲಿ 200 ಹಾಸಿಗೆಗಳಿವೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 600 ಬೆಡ್ ಇದೆ. ದಯಾನಂದ್ ಸಾಗರ್ ಆಸ್ಪತ್ರೆಯಲ್ಲಿ 100 ಬೆಡ್ ಕೊಟ್ಟಿದ್ದಾರೆ. ಅಲ್ಲಿ ಇನ್ನೂ 500 ಬೆಡ್ ಪಡೆಯುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಇನ್ನು ಹೆಚ್ಚು ಕೋವಿಡ್ ಕೇರ್ ಸೆಂಟರ್ಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬೇಗ ಪರೀಕ್ಷೆ, ಕ್ಷಿಪ್ರ ಫಲಿತಾಂಶ, ತಕ್ಷಣ ಚಿಕಿತ್ಸೆ ಪ್ರಾಥಮಿಕ ಹಂತದಲ್ಲಿಯೇ ಕೊವಿಡ್ ಅನ್ನು ಹತ್ತಿಕ್ಕಲು ಮೂರು ಸೂತ್ರಗಳನ್ನು ಪಾಲಿಸಲಾಗುತ್ತಿದೆ. ಯಾವುದೇ ರೋಗ ಲಕ್ಷಣ ಇದ್ದರೆ ತಡ ಮಾಡದೇ ಬೇಗ ಪರೀಕ್ಷೆ ಮಾಡಿಸಿಕೊಳ್ಳುವುದು, ಕ್ಷಿಪ್ರವಾಗಿ ಫಲಿತಾಂಶ ಕೊಡುವುದು ಹಾಗೂ ರಿಸಲ್ಟ್ ಬಂದ ಕೂಡಲೇ ಒಂದು ಕ್ಷಣವನ್ನೂ ವ್ಯರ್ಥ ಮಾಡದೇ ತಕ್ಷಣ ಚಿಕಿತ್ಸೆ ಆರಂಭಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದ ಅವರು ಸೋಂಕಿಗೆ ಒಳಗಾದವರು ಸುಲಭವಾಗಿ, ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಸರಳವಾಗಿ ಸೋಂಕನ್ನು ತಡೆಗಟ್ಟಬಹುದು. ಉಲ್ಬಣವಾಗುವುದಕ್ಕೆ ಬಿಡಬಾರದು. ಚಿಕಿತ್ಸೆ ಪಡೆದುಕೊಂಡರೆ ವಾರದಲ್ಲೇ ಗುಣಮುಖರಾಗಬಹುದು. ಉಲ್ಬಣವಾದರೆ ಉಸಿರಾಟ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಆರಂಭಿಕ ಹಂತದಲ್ಲಿಯೇ ಆರಂಭಿಕ ಲಕ್ಷಣಗಳಿದ್ದಾಗಲೇ ರೋಗ ನಿರೋಧಕ ಚಿಕಿತ್ಸೆ ನೀಡಲೇಬೇಕು. ಇದನ್ನೇ ನಾನು ಜಿಲ್ಲಾಡಳಿತಕ್ಕೂ ಸೂಚಿಸಿದ್ದೇನೆ ಎಂದು ಹೇಳಿದರು.
ಕೊವಿಡ್ ನಿರ್ವಹಣಾ ತಂಡಗಳು ಪ್ರತಿ ಮನೆಮನೆಗೂ ಭೇಟಿ ನೀಡಬೇಕು. ಕೆಮ್ಮು, ನೆಗಡಿ, ಶೀತ, ಜ್ವರ, ವಾಸನೆ ಗ್ರಹಿಕೆ ಮಾಡಲಾಗದಂಥಹ ಯಾವುದೇ ಲಕ್ಷಣ ಕಂಡುಬಂದರೆ ಅಂಥವರನ್ನು ಕೂಡಲೇ ಕೊರೊನಾ ಪರೀಕ್ಷೆಗೆ ಒಳಪಡಿಸಲು ಸೂಚಿಸಿದ್ದೇನೆ. ಒಂದೇ ದಿನದಲ್ಲಿ ಪರೀಕ್ಷೆ, ಫಲಿತಾಂಶ ನೀಡುವುದು, ಚಿಕಿತ್ಸೆ ಆರಂಭಿಸುವುದು ಅಗಬೇಕು ಎಂದರು.
ಸಂಸದ ಡಿ.ಕೆ.ಸುರೇಶ್, ಶಾಸಕರಾದ ಅನಿತಾ ಕುಮಾರಸ್ವಾಮಿ, ಎಮ್ಎಲ್ಸಿಗಳಾದ ಎಸ್.ರವಿ, ಅ.ದೇವೇಗೌಡ, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಡಿಎಚ್ಓ ಡಾ.ನಿರಂಜನ, ಎಸ್ಪಿ ಗಿರೀಶ್ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ ಪರಿಸ್ಥಿತಿ ಬಗ್ಗೆ ವಿಚಾರ ವಿನಿಮಯ ಮಾಡಿದರು.
ಇದನ್ನೂ ಓದಿ
ಹಾಸನಕ್ಕೆ ರಾಷ್ಟ್ರ ಪ್ರಶಸ್ತಿ ಗರಿ; ಇನ್ನಷ್ಟು ಮಾದರಿ ಕೆಲಸಕ್ಕೆ ಪ್ರಧಾನಿ ಮೋದಿ ಕರೆ
ಮಹಿಳೆ ಆಕ್ರೋಶ : ನಾನೊಬ್ಬ ಹೋರಾಟಗಾರ್ತಿ, ನನ್ಗೆ ಬಿಬಿಎಂಪಿಯವರು BU ನಂಬರ್ ಹೆಸರಲ್ಲಿ ಅಲೆದಾಡಿಸಿದ್ದಾರೆ.!
(Ashwathnarayan warned officials to take appropriate action if there is no concern about corona duty)