24 ಗಂಟೆಗಳಲ್ಲಿ 181 ಕಿ.ಮೀ ಓಡಿದ ಅಶ್ವಿನಿ: ರೊಮೇನಿಯಾದಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ ಸಾಗರದ ಓಟಗಾರ್ತಿ
ಅಶ್ವಿನಿ 24 ಗಂಟೆಗಳಲ್ಲಿ 181 ಕಿ.ಮೀ ಓಡಿದ್ದಾರೆ. ಅಕ್ಟೋಬರ್ನಲ್ಲಿ ರೊಮ್ಯಾನಿಯಾದಲ್ಲಿ ನಡೆಯುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಅಶ್ವಿನಿ ಪ್ರತಿನಿಧಿಸಲಿದ್ದಾರೆ.
ಒಂದೆರಡು ಕಿಲೋ ಮೀಟರ್ ನಡೆಯೋದು ಎಂದರೆ ಅದು ದೊಡ್ಡ ಸವಾಲು ಎಂಬಂತೆ ನೋಡುತ್ತದೆ ಈಗಿನ ಪೀಳಿಗೆ. ಆದರೆ, ಒಂದು ದಿನದಲ್ಲಿ 180 ಕಿ.ಮೀ ಓಡುವುದು ಎಂದರೆ? ಅದು 35ನೇ ವಯಸ್ಸಿಗೆ! ಹೀಗೊಂದು ದಾಖಲೆಯನ್ನು ಸಾಗರ ಮೂಲದ ಅಶ್ವಿನಿ ಭಟ್ ಮಾಡಿದ್ದಾರೆ.
‘ಬೆಂಗಳೂರು ಸ್ಟೇಡಿಯಂ ರನ್’ ಸ್ಪರ್ಧೆಯಲ್ಲಿ ಅಶ್ವಿನಿ ಭಟ್ 24 ಗಂಟೆಗಳಲ್ಲಿ 181 ಕಿ.ಮೀ ಓಡಿದ್ದಾರೆ. ಈ ಮೂಲಕ ಭಾರತದ ಆರು ಜನರ ತಂಡಕ್ಕೆ ಆಯ್ಕೆ ಆಗಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ ಇವರು ಎನ್ನುವುದು ವಿಶೇಷ. ಅಕ್ಟೋಬರ್ನಲ್ಲಿ ರೊಮೇನಿಯಾದಲ್ಲಿ ನಡೆಯುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಅಶ್ವಿನಿ ಪ್ರತಿನಿಧಿಸಲಿದ್ದಾರೆ.
ಚಿಕ್ಕನಿಂದಲೂ ರನ್ನಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಅಶ್ವಿನಿ. ತಂದೆ ಬಿ.ಕೆ. ಗಣಪತಿ ಅವರು ಚಿಕ್ಕಂದಿನಿಂದಲೂ ಅವರಿಗೆ ಪ್ರೋತ್ಸಾಹ ನೀಡುತ್ತಲೇ ಬರುತ್ತಿದ್ದರು. ಓದು ಮುಗಿದ ನಂತರ ಅವರು ಸೇರಿದ್ದು ಸಾಫ್ಟ್ವೇರ್ ಇಂಜಿನಿಯರ್ ಕೆಲಸಕ್ಕೆ. ನೌಕರಿ ಸಾಕೆನಿಸಿದಾಗ, ಕೆಲಸಕ್ಕೆ ರಿಸೈನ್ ಮಾಡಿದ್ದರು. ನಂತರ ಒಂದು ವರ್ಷ ಫೋಟೋಗ್ರಫಿ ಮಾಡಿದ್ದರು. ಈ ವೇಳೆ ಅವರಿಗೆ ಮತ್ತೆ ಓಡಬೇಕು ಎನ್ನುವ ತುಡಿತ ಶುರುವಾಗಿತ್ತು.
ದೇಶವನ್ನು ನಾನು ಪ್ರತಿನಿಧಿಸಬಹುದು ಎಂದು ಮೊದಲ ಬಾರಿಗೆ ಗೊತ್ತಾಗಿದ್ದು 2018ರಲ್ಲಿ. ಆಗ ನನ್ನ ವಯಸ್ಸು 30 ದಾಟಿತ್ತು. ನಮಗೆಲ್ಲ ಅವಕಾಶ ಸಿಗುವುದಿಲ್ಲ ಎಂದು ನಾನಂದುಕೊಂಡಿದ್ದೆ. ಆದರೆ, ಇದಕ್ಕೆ ವಯಸ್ಸಿನ ಮಿತಿ ಇಲ್ಲ ಎನ್ನುವುದು ಗೊತ್ತಾಗಿತ್ತು. 42 ಕಿ.ಮೀಗಿಂತ ದೂರದ ರನ್ನಿಂಗ್ಗೆ ಅಲ್ಟ್ರಾ ರನ್ ಎಂದು ಕರೆಯುತ್ತಾರೆ. ಇದರಲ್ಲಿ ಪಾಲ್ಗೊಳ್ಳಬಹುದು ಎಂದು ಗೊತ್ತಾಗಿತ್ತು. ಕಳೆದ ವರ್ಷದ ಸ್ಪರ್ಧೆಯಲ್ಲಿ ನಾನು 12 ಗಂಟೆಯಲ್ಲಿ 112 ಕಿ.ಮೀ ಓಡಿದ್ದು ದಾಖಲೆ ಆಗಿತ್ತು.. ಎಂದು ತಮ್ಮ ಬಗ್ಗೆ ಮಾಹಿತಿ ನೀಡುತ್ತಾರೆ ಅಶ್ವಿನಿ.
ಈ ಬಾರಿ ರೊಮೇನಿಯಾದಲ್ಲಿ ನಡೆಯಲಿರುವ ಸ್ಪರ್ಧೆಗೆ ಭಾರತದಿಂದ ಆರು ಪುರುಷರು ಹಾಗೂ ಆರು ಮಹಿಳೆಯರನ್ನು ಆಯ್ಕೆ ಮಾಡುತ್ತಿದ್ದಾರೆ ಎನ್ನುವ ವಿಚಾರ ಗೊತ್ತಾಗಿತ್ತು. ಇದಕ್ಕೆ ಆಯ್ಕೆ ಆಗಬೇಕು ಎಂದರೆ 24 ಗಂಟೆಗಳಲ್ಲಿ ಕನಿಷ್ಠ 175 ಕಿ.ಮೀ ಓಡಬೇಕಿತ್ತು. ನಾನು ಕೂಡ ಇದರಲ್ಲಿ ಪಾಲ್ಗೊಂಡೆ. ಈಗ ಆರು ಜನರ ತಂಡದಲ್ಲಿ ನಾನೂ ಇದ್ದೇನೆ. ರೊಮೇನಿಯಾದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ. ನನ್ನ ಸಾಧನೆಗೆ ಗಂಡ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸಂತಸ ಹೊರ ಹಾಕುತ್ತಾರೆ ಅಶ್ವಿನಿ.
Published On - 3:42 pm, Wed, 27 January 21