
ಬೆಂಗಳೂರು, ಮೇ 15: ನಗರ ಪ್ರದೇಶಗಳಲ್ಲಿನ ಆಸ್ತಿಗಳಿಗೆ ಎ ಖಾತಾ ಮತ್ತು ಅನಧಿಕೃತ ಬಡಾವಣೆಗಳ ಸೈಟ್ಗಳಿಗೆ ಬಿ ಖಾತಾ (B Khata) ನೀಡಲು ನಿಗದಿಪಡಿಸಿದ್ದ ಮೂರು ತಿಂಗಳ ಕಾಲಾವಕಾಶವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. ಮೇ 10 ರ ಗಡುವು ಮುಕ್ತಾಯಗೊಂಡ ಬೆನ್ನಲ್ಲೇ ಸರ್ಕಾರ (Karnataka Govt) ಈ ನಿರ್ಧಾರ ಕೈಗೊಂಡಿದೆ. ಮೂರು ತಿಂಗಳ ಅವಧಿಯಲ್ಲಿ ಖಾತಾ ನೀಡುವಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸದ ಕಾರಣ ಸರ್ಕಾರ ಗಡುವು ವಿಸ್ತರಿಸುವ ನಿರ್ಧಾರಕ್ಕೆ ಬಂದಿದೆ.
ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಬಿ-ಖಾತಾ ನೀಡಲು ಮತ್ತು ಅವುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರಲು ಒಂದು ಬಾರಿಗೆ ಅವಕಾಶ ನೀಡುವಂತೆ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದರು. ಈ ಮೂಲಕ ಸರ್ಕಾರಕ್ಕೆ ಸುಮಾರು 3,500 ಕೋಟಿ ರೂ. ಆದಾಯ ಸಂಗ್ರಹವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೊದಲ 3 ತಿಂಗಳ ಅವಧಿಯಲ್ಲಿ ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ.
ನೂತನ ಯೋಜನೆಯಡಿ ಇದುವರೆಗೆ 10 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 2 ಲಕ್ಷ ಆಸ್ತಿ ಮಾಲೀಕರು ಬಿ-ಖಾತಾ ಪಡೆದಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾಹಿತಿ ನೀಡಿದ್ದಾರೆ. ಉಳಿದ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಮತ್ತು ಅರ್ಹ ಮಾಲೀಕರಿಗೆ ಬಿ-ಖಾತಾ ಸಿಗುತ್ತದೆ ಎಂದು ಅವರು ಹೇಳಿದ್ದಾರೆ. ಅಕ್ರಮ ಲೇಔಟ್ಗಳಲ್ಲಿ ಅಂದಾಜು 30 ಲಕ್ಷ ಆಸ್ತಿಗಳಿವೆ ಎಂದು ಅವರು ತಿಳಿಸಿದ್ದಾರೆ.
ಅಕ್ರಮವಾಗಿ ನಿವೇಶನಗಳನ್ನು ಖರೀದಿಸಿದ ಅಥವಾ ಮನೆಗಳನ್ನು ನಿರ್ಮಿಸಿದ ಮಾಲೀಕರಿಗೆ ಬಿ-ಖಾತಾ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇದರಲ್ಲಿ ಪರಿವರ್ತನೆಯಾಗದ ಅಥವಾ ಯೋಜನಾ ಅನುಮೋದನೆ ಪಡೆಯದೆ ಅಭಿವೃದ್ಧಿಪಡಿಸಿದ ಆಸ್ತಿಗಳೂ ಸೇರಿವೆ. ಆಸ್ತಿ ಮಾಲೀಕರಿಗೆ ಇದು ಒಂದು ಬಾರಿಯ ಅವಕಾಶವಾಗಿದ್ದು, ಮಾಲೀಕರು ಶುಲ್ಕವನ್ನು ಪಾವತಿಸಿ ಮೇ 10 ರವರೆಗೆ ಬಿ-ಖಾತಾ ಪಡೆಯಬಹುದು ಎಂದು ಸಚಿವ ಸುರೇಶ್ ಅವರ ಕಚೇರಿ ಫೆಬ್ರವರಿಯಲ್ಲಿ ಪ್ರಕಟಣೆ ಹೊರಡಿಸಿತ್ತು.
ಇದನ್ನೂ ಓದಿ: ರಾಜ್ಯದಲ್ಲಿನ ಅನಧಿಕೃತ ಬಡಾವಣೆಗಳಿಗೆ ಬಿತ್ತು ಕಡಿವಾಣ: ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
ನಗರ ಪ್ರದೇಶಗಳಲ್ಲಿ ಮನೆಗಳು ಮತ್ತು ಪ್ಲಾಟ್‌ಗಳಿಗೆ ಎ-ಖಾತಾ ಮತ್ತು ಬಿ-ಖಾತಾ ನೀಡುವ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ಪುರಸಭೆ ಆಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ತುಮಕೂರಿನಲ್ಲಿ ಸುದ್ದಿಗಾರರಿಗೆ ಬುಧವಾರ ತಿಳಿಸಿದ್ದಾರೆ. ಕಳೆದ 30-40 ವರ್ಷಗಳಿಂದ ಯಾವುದೇ ದಾಖಲೆಗಳಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿರುವ ಬಡವರ ಮನೆಗಳು ಮತ್ತು ಪ್ಲಾಟ್‌ಗಳನ್ನು ನೋಂದಾಯಿಸಲು ಬಿ-ಖಾತಾ ನೀಡುವ ಉಪಕ್ರಮ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ