ಪ್ರಿಯಾಂಕ್ ಖರ್ಗೆ ಎಲ್ಲಾ ಇಲಾಖೆಗಳ ಸಚಿವ: ವಿಜಯೇಂದ್ರ ವ್ಯಂಗ್ಯ

ಯಾದಗಿರಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಅಪಾರ ಬೆಳೆ ಹಾನಿ ಉಂಟಾದ ಕಾರಣ, ಬೆಳೆಹಾನಿ ಪ್ರದೇಶಕ್ಕೆ ರಾಜ್ಯ ಬಿಜೆಪಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಸಿಎಂ ಮತ್ತು ಸಚಿವರ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದು, ಕೂಡಲೇ ವಿಶೇಷ ಪ್ಯಾಕೇಜ್​ ಘೋಷಣೆಗೆ ಒತ್ತಾಯಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಎಲ್ಲಾ ಇಲಾಖೆಗಳ ಸಚಿವ: ವಿಜಯೇಂದ್ರ ವ್ಯಂಗ್ಯ
ಪ್ರಿಯಾಂಕ್ ಖರ್ಗೆ ಎಲ್ಲಾ ಇಲಾಖೆಗಳ ಸಚಿವ: ವಿಜಯೇಂದ್ರ ವ್ಯಂಗ್ಯ
Updated By: ಪ್ರಸನ್ನ ಹೆಗಡೆ

Updated on: Sep 30, 2025 | 5:49 PM

ಯಾದಗಿರಿ, ಸೆಪ್ಟೆಂಬರ್​ 30: ಪ್ರಿಯಾಂಕ್ ಖರ್ಗೆ (Priyank Kharge) ಎಲ್ಲಾ ಇಲಾಖೆಗಳ ಸಚಿವರೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ವ್ಯಂಗ್ಯವಾಡಿದ್ದಾರೆ. ಪ್ರವಾಹ ಪೀಡಿತ ಪ್ರದೇಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ಕ್ಷೇತ್ರದಲ್ಲಿ ಪರಿಸ್ಥಿತಿ ಏನಾಗಿದೆ ಮೊದಲು ನೋಡಿ. ಆನಂತರ ರಾಜ್ಯ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಮಾತನಾಡಿ ಎಂದಿದ್ದಾರೆ.

ವೈಮಾನಿಕ ಸಮೀಕ್ಷೆ ಮೂಲಕ ಪ್ರವಾಹ ಪೀಡಿತ ಪ್ರದೇಗಳನ್ನ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಇದೇ ವೇಳೆ ಕಿಡಿಕಾರಿದ ಬಿ.ವೈ. ವಿಜಯೇಂದ್ರ, ನಾನು ಈ ವಿಷಯ ಪ್ರಸ್ತಾಪಿಸಿದರೆ ರಾಜಕೀಯದ ಮಾತು ಅನಿಸುತ್ತೆ. ಆದರೆ, ಸಿಎಂ ಸಿದ್ದರಾಮಯ್ಯನವರೇ ರೈತರ ವಿಚಾರದಲ್ಲಿ ಉದಾಸೀನತೆ ಬೇಡ. ವೈಮಾನಿಕ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ಕೊಟ್ಟಿದ್ದೇವೆಂದರೆ ಸಾಲದು. ಕೇಂದ್ರದತ್ತ ಕೈತೋರಿಸಿ ಸಿಎಂ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಕೇಂದ್ರ ಸರ್ಕಾರ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿರುವ ಉದಾಹರಣೆ ಇಲ್ಲದ ಕಾರಣ ರೈತರು ಸಂಕಷ್ಟದಲ್ಲಿದ್ದಾಗ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 4 ನಿಗಮ ಮಂಡಳಿಗೆ ಪದಾಧಿಕಾರಿಗಳ ನೇಮಕ: ಯಾರ್ಯಾರಿಗೆ ಜವಾಬ್ದಾರಿ?

2019ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. NDRF ನಿಯಮದಲ್ಲಿ ಒಣಭೂಮಿಗೆ ₹6,000 ಇತ್ತು ₹16,000 ನೀಡಿದ್ದರು. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು ಎಂಬುದನ್ನೂ ಈ ವೇಳೆ ವಿಜಯೇಂದ್ರ ನೆನಪಿಸಿದ್ದಾರೆ. ಅಲ್ಲದೆ, ಸದ್ಯ ಪ್ರತಿ ಎಕರೆಗೆ ಕನಿಷ್ಠ 25-30 ಸಾವಿರ ರೂ. ಪರಿಹಾರ ನೀಡಬೇಕು. ಸಮಸ್ಯೆ ಇರುವಲ್ಲಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

ವಿಶೇಷ ಪ್ಯಾಕೇಜ್​ಗೆ ಬೇಡಿಕೆ

ಕಂದಾಯ, ಕೃಷಿ ಸಚಿವರಿಗೆ ಕಲಬುರಗಿ, ಯಾದಗಿರಿ ಜಿಲ್ಲೆ ನೆನಪಾಗ್ತಿಲ್ವಾ ಎಂದು ಪ್ರಶ್ನಿಸಿರುವ ವಿಜಯೇಂದ್ರ, ಕಲ್ಯಾಣ ಕರ್ನಾಟಕ ಭಾಗದ ರೈತರು ಮತ್ತು ಬಡವರ ಬಗ್ಗೆ ತಾತ್ಸಾರ ಯಾಕೆ? ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಗೆ ಧೈರ್ಯ ಹೇಳುವ ಜೊತೆಗೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಅಪಾರ ಬೆಳೆ ಹಾನಿ ಉಂಟಾದ ಕಾರಣ, ಬೆಳೆಹಾನಿ ಪ್ರದೇಶಕ್ಕೆ ರಾಜ್ಯ ಬಿಜೆಪಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಶಹಾಪುರ ತಾಲೂಕಿನ ಸಾದ್ಯಾಪುರ ಗ್ರಾಮಕ್ಕೆ ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಭೇಟಿ ವೇಳೆ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. 3 ಬಾರಿ ಹತ್ತಿ ನಾಟಿ ಮಾಡಿದ್ವಿ, ಆದ್ರೆ ಎಲ್ಲವೂ ಈಗ ನೀರುಪಾಲಾಗಿದೆ. ಹೀಗಾಗಿ ನಮಗೆ ಸೂಕ್ತ ಪರಿಹಾರ ಕೊಡಿಸಿ ಎಂದು ರೈತರು ಅಲವತ್ತುಕೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.