4 ನಿಗಮ ಮಂಡಳಿಗೆ ಪದಾಧಿಕಾರಿಗಳ ನೇಮಕ: ಯಾರ್ಯಾರಿಗೆ ಜವಾಬ್ದಾರಿ?
ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ಸೇರಿ 4 ನಿಗಮ ಮಂಡಳಿಗೆ ರಾಜ್ಯ ಸರ್ಕಾರ ಪದಾಧಿಕಾರಿಗಳ ಘೋಷಣೆ ಮಾಡಿದೆ. ಹೈಕಮಾಂಡ್ ರವಾನಿಸಿದ್ದ ಪಟ್ಟಿಗೆ ತಮ್ಮದೇ ಆದ ಲೆಕ್ಕಾಚಾರದಲ್ಲಿ ಸರ್ಜರಿ ಮಾಡಿ ಸಿಎಂ ಸಿದ್ದರಾಮಯ್ಯ ಜವಾಬ್ದಾರಿಯ ಹಂಚಿಕೆ ಮಾಡಿದ್ದರೂ, ಸಾಕಷ್ಟು ಗೊಂದಲಗಳು ಮಾತ್ರ ಈ ವಿಚಾರದಲ್ಲಿ ಮುಂದುವರಿದಿವೆ.

ಬೆಂಗಳೂರು, ಸೆಪ್ಟೆಂಬರ್ 30: 4 ನಿಗಮ ಮಂಡಳಿಗಳಿಗೆ ( Corporation Board ) ಅಧ್ಯಕ್ಷರು, ಉಪಾಧ್ಯಕ್ಷರ ನೇಮಕ ಮಾಡಲಾಗಿದೆ. ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಂಡ್ಯದ ಎಂ.ಎಸ್. ಆತ್ಮಾನಂದ , ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸುಜ್ಞಾನಮೂರ್ತಿ ಅವರನ್ನ ನೇಮಿಸಲಾಗಿದೆ. ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆ.ವಿ. ರಾಮಪ್ರಸಾದ್ ಮತ್ತು ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿ ಜಿ.ವಿ. ಬಾಲಾಜಿ ಅವರನ್ನ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
BMTC ಅಧ್ಯಕ್ಷ ಸ್ಥಾನ ಬದಲು
ನಿನ್ನೆ 5 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಹೆಸರು ಘೋಷಣೆಯಾಗಿತ್ತು. ಅದರ ಜೊತೆಗೆ ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ನಿಕೇತ್ ರಾಜ್ ಮೌರ್ಯಗೆ, ಬಿಎಂಟಿಸಿ ಉಪಾಧ್ಯಕ್ಷ ಸ್ಥಾನ ನೀಡಿ ಸರ್ಕಾರ ಆದೇಶಿಸಿತ್ತು. BMTC ಅಧ್ಯಕ್ಷರಾಗಿ ವಿ.ಎಸ್. ಆರಾಧ್ಯ ಅವರನ್ನ ನೇಮಕ ಮಾಡಲಾಗಿತ್ತು. ಇದರಿಂದಾಗಿ ಅದಗಾಲೇ ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ನಿಕೇತ್ ರಾಜ್ ಮೌರ್ಯಗೆ ಮುಜುಗರ ಉಂಟಾದ ಪ್ರಸಂಗವೂ ನಡೆದಿತ್ತು.
ಇದನ್ನೂ ಓದಿ: ನಿಗಮ ಮಂಡಳಿ ನೇಮಕದಲ್ಲಿ ಮತ್ತೆ ಗೊಂದಲ: ಅಧ್ಯಕ್ಷ-ಉಪಾಧ್ಯಕ್ಷರ ಅದಲು-ಬದಲು
ಕೊಟ್ಟ ಆಶ್ವಾಸನೆ ಉಳಿಸಿಕೊಂಡಿದ್ದ ಸಿಎಂ
ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷರಾಗಿದ್ದ ರಾಜು ಕಾಗೆ ಅವರನ್ನೂ ಹುದ್ದೆಯಿಂದ ಕೈಬಿಟ್ಟ ಬಗ್ಗೆ ಸುದ್ದಿಯಾಗಿ ಆರಂಭದಲ್ಲಿ ಒಂದಿಷ್ಟು ಗೊಂದಲಗಳು ಉಂಟಾಗಿದ್ದವು. ಎಐಸಿಸಿ ರವಾನಿಸಿದ್ದ ಪಟ್ಟಿಯಲ್ಲಿ NWKRTC ಅಧ್ಯಕ್ಷರಾಗಿ ಅರುಣ್ ಕುಮಾರ್ ಪಾಟೀಲ್ ಹೆಸರನ್ನು ಉಲ್ಲೇಖಿಸಲಾಗಿದ್ದ ಕಾರಣ, ರಾಜು ಕಾಗೆ ಸಿಎಂ ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದರು. ಆ ವೇಳೆ ನಿಮ್ಮನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸೋದಾಗಿ ಸಿಎಂ ಆಶ್ವಾಸನೆ ನೀಡಿದ್ದರು. ಅದರಂತೆ ರಾಜು ಕಾಗೆ ಅವರನ್ನೇ ನಿಗಮದ ಅಧ್ಯಕ್ಷರಾಗಿ ಮುಂದುವರಿಸಲಾಗಿತ್ತು.
ಹೈಕಮಾಂಡ್ ಕಳುಹಿಸಿದ್ದ ಲಿಸ್ಟ್ ಗೆ ತಮ್ಮದೇ ಆದ ಸರ್ಜರಿ ಮಾಡಿದ್ದ ಸಿಎಂ ಸಿದ್ದರಾಮಯ್ಯ, AICC ಕಳುಹಿಸಿದ್ದ ಪಟ್ಟಿಯಲ್ಲಿ ಹೆಸರೇ ಇಲ್ಲದ ನಿಕೇತ್ ರಾಜ್ ಮೌರ್ಯ ಸೇರಿ ಕೆಲವರಿಗೆ ಮಣೆ ಹಾಕಿದ್ದರು. ಉಂಟಾಗಿರುವ ಗೊಂದಲಗಳಿಗೆ ಆ ಮೂಲಕ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:59 pm, Tue, 30 September 25




