ಮೈನಿಂಗ್ ಕಂಪನಿ ತಂದಿಟ್ಟ ತಲೆ ನೋವು.. ಆಶ್ರಯ ಮನೆಗಳು ಶಿಥಿಲಾವಸ್ಥೆಗೆ, ನಿವಾಸಿಗಳ ಗೋಳು ಕೇಳೋರು ಇಲ್ಲ

| Updated By: ಸಾಧು ಶ್ರೀನಾಥ್​

Updated on: Dec 19, 2020 | 10:45 AM

ಅವ್ರದ್ದು ಒಪ್ಪತ್ತಿನ ಊಟಕ್ಕೂ ಪರದಾಟ ನಡೆಸೋ ಜೀವನ. ವಾಸಕ್ಕೆ ಮನೆಯಿಲ್ಲ ಅಂತ ಸರ್ಕಾರ 12 ವರ್ಷಗಳ ಹಿಂದೆ ಮನೆಗಳನ್ನ ನಿರ್ಮಿಸಿಕೊಟ್ಟಿತ್ತು. ಅದರಂತೆ ಆ ಮನೆಗಳಲ್ಲೇ ಉತ್ತಮ ಜೀವನ ಸಾಗಿಸ್ತಿದ್ರು. ಆದ್ರೆ ಅಲ್ಲೊಂದು ಸಮಸ್ಯೆ ಎದುರಾಗಿತ್ತು. ಅದನ್ನೂ ಪರಿಹರಿಸ್ತೀವಿ ಅಂತ ಹೇಳಿದ್ದ ಕಂಪನಿ ಸರಿಯಾಗೆ ಟೋಪಿ ಹಾಕಿದೆ. ದಶಕವೇ ಉರುಳಿದ್ರೂ ಪರಿಹಾರ ಮಾತ್ರ ಸಿಕ್ಕಿಲ್ಲ.

ಮೈನಿಂಗ್ ಕಂಪನಿ ತಂದಿಟ್ಟ ತಲೆ ನೋವು.. ಆಶ್ರಯ ಮನೆಗಳು ಶಿಥಿಲಾವಸ್ಥೆಗೆ, ನಿವಾಸಿಗಳ ಗೋಳು ಕೇಳೋರು ಇಲ್ಲ
Follow us on

ಬಾಗಲಕೋಟೆ: ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಮನೆಗಳು ಖಾಲಿ ಖಾಲಿಯಾಗಿ ಪಾಳುಬಿದ್ದಿವೆ. ಚಿಕ್ಕ ಚಿಕ್ಕ ಮನೆಗಳು ಶಿಥಿಲಾವಸ್ಥೆ ತಲುಪಿ ಬಿದ್ದುಹೋಗೋ ಸ್ಥಿತಿಯಲ್ಲಿವೆ. ನಮ್‌ ಜಾಗ ಖಾಲಿ ಮಾಡಿಸಿದ್ರೂ ಸುಸಜ್ಜಿತ ಮನೆ ಕಟ್ಟಿಸಿಕೊಡಲಿಲ್ಲ ಅಂತ ಜನ ಗೋಳು ತೋಡಿಕೊಳ್ಳುತ್ತಿದ್ದಾರೆ. ಇಂತಹ ಒಂದು ಪರಿಸ್ಥಿತಿ ನಿರ್ಮಾಣವಾಗಿರೋದು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ.

ಅಷ್ಟಕ್ಕೂ ನೇಕಾರರ ಕಷ್ಟಕರ ಜೀವನ ಕಂಡ ಸರ್ಕಾರ ಕಳೆದ 12 ವರ್ಷಗಳ ಹಿಂದೆ ಕಮಟಗಿ ಹೊರವಲಯದಲ್ಲಿ ಕೆಹೆಚ್‌ಡಿಸಿ ಯೋಜನೆ ಅಡಿ ಆಶ್ರಯ ಕಾಲೋನಿ ನಿರ್ಮಿಸಿ ಕೊಟ್ಟಿತ್ತು. ಸುಮಾರು 72 ಆಶ್ರಯ ಮನೆಗಳನ್ನ ಈ ಬಡ ನೇಕಾರರ ಕುಟುಂಬಗಳಿಗೆ ಸರ್ಕಾರ ಹಸ್ತಾಂತರ ಮಾಡಿತ್ತು. ಬಳಿಕ ಎಲ್ಲರೂ ಅಲ್ಲಿಯೇ ಉತ್ತಮ ಜೀವನ ಕಟ್ಟಿಕೊಂಡಿದ್ರು.

ಆದ್ರೆ ಅವರಿಗೆಲ್ಲಾ ಅನತಿ ದೂರದಲ್ಲಿರೋ ಕಬ್ಬಿಣದ ಅದಿರು ಗಣಿಗಾರಿಕೆಯಿಂದ ಆಶ್ರಯ ಮನೆಗಳಿಗೆಲ್ಲಾ ಕಿರಿಕಿರಿ ಉಂಟಾಗುತ್ತಿತ್ತು. ಅಲ್ಲದೆ ಗಣಿಗಾರಿಕೆಯ ಧೂಳು, ಮಣ್ಣು ಇವ್ರ ಮನೆಗಳಿಗೆ ಆವರಿಸುತ್ತಿತ್ತು. ಇದ್ರಿಂದ ರೋಸಿಹೋದ ಜನ ಮೈನಿಂಗ್ ಕಂಪನಿ ವಿರುದ್ಧ ದನಿ ಎತ್ತಿದ್ರು. ಇದ್ರಿಂದ ಬೇರೆ ಕಡೆ ಜಾಗ ನೀಡಿ ಸೂಕ್ತ ಸೌಲಭ್ಯ ಒದಗಿಸಿ ಮನೆಗಳನ್ನ ನಿರ್ಮಿಸಿಕೊಡೋದಾಗಿ ಹೇಳಿತ್ತು. ಆದ್ರೆ ಬೆರಳೆಣಿಕೆ ಮನೆಗಳನ್ನ ಕಟ್ಟಿ, ಅವು ಕೂಡ ಶಿಥಿಲಾವಸ್ಥೆ ತಲುಪಿವೆ.

ಕಟ್ಟಿಸಿಕೊಟ್ಟ ಮನೆಯೂ ಕಳಪೆ:
ಬೆಳಗಾವಿ ಮೂಲಕ ದೊಡ್ಡಣ್ಣನವರ ಕಬ್ಬಿಣದ ಅದಿರು ಮೈನಿಂಗ್‌ ಕಂಪನಿಯೇ ಈ ಬಡ ನೇಕಾರರಿಗೆ ಮೋಸ ಮಾಡಿದೆ. ಈ ಮೈನಿಂಗ್ ಕಂಪನಿಯ ಮೋಸದಿಂದ ಆಶ್ರಯ ಮನೆಗಳನ್ನ ಬಿಟ್ಟು ಬಂದ್ವಿ ಆದ್ರೆ ಈಗ ಇವ್ರು ಕಟ್ಟಿಸಿಕೊಟ್ಟ ಮನೆ ಕಳಪೆಯಾಗಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ.

ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ನೀರಿನ ಸೌಲಭ್ಯವಿಲ್ಲ. ಜುಲೈ 7ರಂದು ಮೈನಿಂಗ್ ಕಂಪನಿ ಮ್ಯಾನೇಜರ್ ಮನೆ ಮುಂದೆ ಪ್ರತಿಭಟನೆ ಮಾಡಿದ್ರು. ಮಾಲೀಕರ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸೋದಾಗಿ ಹೇಳಿದ್ದು ಬಿಟ್ರೆ ಮತ್ಯಾವುದೇ ಪ್ರಯೋಜನವಾಗಿಲ್ಲ.

ಒಟ್ನಲ್ಲಿ ಮೈನಿಂಗ್ ಕಂಪನಿ ಕೊಟ್ಟ ಪೊಳ್ಳು ಭರವಸೆಯಿಂದ ಮನೆಗಳನ್ನ ಕಳೆದುಕೊಂಡ ಬಡ ನೇಕಾರರು ಬೀದಿಗೆ ಬಿದ್ದಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟವರು ಇವರ ನೆರವಿಗೆ ಧಾವಿಸಿ ನ್ಯಾಯ ಒದಗಿಸೋ ಕೆಲ್ಸ ಮಾಡಬೇಕಿದೆ.