110 ವರ್ಷಗಳ ಇತಿಹಾಸವಿರುವ ಸರ್ಕಾರಿ ಶಾಲೆಗಿಲ್ಲ ಸೂಕ್ತ ಸೂರು: ಮಾಜಿ ಸಿಎಂ ಸಿದ್ಧರಾಮಯ್ಯಗೆ ವಿದ್ಯಾರ್ಥಿಗಳ ಮನವಿ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 16, 2022 | 3:36 PM

110 ವರ್ಷಗಳ ಇತಿಹಾಸವಿರುವ ತಳಕವಾಡ ಗ್ರಾಮದ ಸರ್ಕಾರಿ‌ ಶಾಲೆ ಸದ್ಯ ಅಕ್ಷರಶಃ ನಲುಗುತ್ತಿದೆ. ತಾತ್ಕಾಲಿಕ‌ವಾಗಿ ನಿರ್ಮಿಸಿದ್ದ ತಗಡಿನ ಶೆಡ್​ನಲ್ಲೇ ವಿದ್ಯಾರ್ಥಿಗಳ ಆಟ-ಪಾಠ.

110 ವರ್ಷಗಳ ಇತಿಹಾಸವಿರುವ ಸರ್ಕಾರಿ ಶಾಲೆಗಿಲ್ಲ ಸೂಕ್ತ ಸೂರು: ಮಾಜಿ ಸಿಎಂ ಸಿದ್ಧರಾಮಯ್ಯಗೆ ವಿದ್ಯಾರ್ಥಿಗಳ ಮನವಿ
ತಳಕವಾಡ ಗ್ರಾಮದ ಸರಕಾರಿ‌ ಹಿರಿಯ ಪ್ರಾಥಮಿಕ ಶಾಲೆ
Follow us on

ಬಾಗಲಕೋಟೆ: ಮಲಪ್ರಭಾ ತೀರದ ಕನ್ನಡ ಶಾಲೆ ದುಃಸ್ಥಿತಿ ಹೇಳತೀರದಾಗಿದೆ. ಶಾಲೆಯ ಕೊಠಡಿಗಳು ಅಸ್ತಿಪಂಜರದಂತ್ತಾಗಿದ್ದು, ತಾತ್ಕಾಲಿಕ‌ವಾಗಿ ನಿರ್ಮಿಸಿದ್ದ ತಗಡಿನ ಶೆಡ್​ನಲ್ಲೆ ಆಟ-ಪಾಠ ನಡೆಯುತ್ತಿರುವಂತಹ ಘಟನೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದ ಸರಕಾರಿ‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಡ ಬಂದ ದೃಶ್ಯಗಳು. 110 ವರ್ಷಗಳ ಇತಿಹಾಸವಿರುವ ತಳಕವಾಡ ಗ್ರಾಮದ ಸರ್ಕಾರಿ‌ ಶಾಲೆ ಸದ್ಯ ಅಕ್ಷರಶಃ ನಲುಗುತ್ತಿದೆ. 2009 ಮತ್ತು 2019ರ ಪ್ರವಾಹದಲ್ಲಿ  ಶಾಲೆ ಮುಳುಗಿ ಹೋಗಿತ್ತು. ಮೂರು ವರ್ಷದಿಂದ ತಗಡಿನ ಶೆಡ್​ನಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಹೊಸ ಕೊಠಡಿಗಳ ನಿರ್ಮಾಣ ಬರೀ ಬೊಗಳೆ ಭರವಸೆಯಾಗಿದೆ.

1912ರಲ್ಲಿ ಸ್ಥಾಪನೆ ಆಗಿದ್ದ ಸರ್ಕಾರಿ ಮಾದರಿಯ ಶಾಲೆ, ಶತಮಾನೋತ್ಸವ ಸಂಭ್ರಮ ಇಲ್ಲದೇ ಪ್ರವಾಹ ಸಂತ್ರಸ್ತ ಮಕ್ಕಳ ಸರ್ಕಾರಿ‌ ಶಾಲೆ ಅದೋಗತಿಗೆ ಹೋಗಿದೆ. ಶಾಲೆಯ ದುಸ್ಥಿತಿ ಕಂಡು ಊರಿನ ಮಕ್ಕಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ 1 ರಿಂದ 8 ನೇ ತರಗತಿ ವರೆಗೂ 114 ಮಕ್ಕಳು ಕಲಿಯುತ್ತಿದ್ದಾರೆ. ಇದ್ದ ಏಳು ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ಮೂತ್ರಾಲಯ, ಶೌಚಗೃಹಕ್ಕೆ ಜಮೀನಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಾಯ ಉಂಟಾಗಬಹುದು ಎಂದು  ಮೂರು ಕೊಠಡಿಗಳನ್ನು ನೆಲಸಮ ಮಾಡಿದ್ದಾರೆ. ಉಳಿದ ನಾಲ್ಕು ಕೊಠಡಿಗಳ ಹಂಚುಗಳೆಲ್ಲ ಮೈಮೇಲೆ‌‌ ಬೀಳುತ್ತಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಕಲ್ಲು, ಮಣ್ಣು, ಹಂಚುಗಳು ಕೊಠಡಿಯಲ್ಲಿ ಬೀಳುತ್ತಿರುತ್ತವೆ. 2019ರ ಬಳಿಕ ಅದೇ ಮೈದಾನದಲ್ಲಿ ತಗಡಿನ ಶೆಡ್ ನಿರ್ಮಾಣ ಮಾಡಲಾಗಿದೆ.

ಸಿದ್ದರಾಮಯ್ಯಗೆ ವಿದ್ಯಾರ್ಥಿಗಳ ಮನವಿ:

ಅದು ಸಹ ಬಂದೋಬಸ್ತ್ ಇಲ್ಲ‌. ಮಳೆ ಬಂದ್ರೆ ಸಾಕು ಸೋರುತ್ತಿವೆ. ಬೇಸಿಗೆಯಲ್ಲಿ ಶೆಕೆ ಕಾಟ. ಬಾದಾಮಿ ಶಾಸಕ ಸಿದ್ದರಾಮಯ್ಯ ಅವರಿಗೆ ವಿದ್ಯಾರ್ಥಿಗಳು, ಪೋಷಕರು ‌ಮನವಿ ಮಾಡಿದ್ದು, ನಮ್ಮ ಶಾಲೆಗೆ ನೂತನ ಕಟ್ಟಡ ಕಟ್ಟಿಸಿ. ಇಂತಹ ಶಾಲೆಯಲ್ಲಿ ಪಾಠ ಕೇಳಲು ಭಯ ಆಗುತ್ತದೆ. ಮಳೆ‌ ಬಂದರೆ ಸೋರುತ್ತದೆ. ಕೊಠಡಿಯೊಳಗೆ ನೀರು ಬರುತ್ತದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಪೋಷಕರಿಂದಲೂ ಸಿದ್ದರಾಮಯ್ಯಗೆ ಮನವಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.